24 ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ |
“ಆರೋಗ್ಯದಾಯಕ ಸಮಾಜ ನಿರ್ಮಾಣಕ್ಕಾಗಿ ಜೈನ ಧರ್ಮ” ; ಹೊಂಬುಜ ಶ್ರೀಗಳು

0 40

ರಿಪ್ಪನ್‌ಪೇಟೆ : ಕೆನಡಾದ ಟೊರೆಂಟೋ ನಗರದಲ್ಲಿ ಜೈನ ಮಂದಿರದಲ್ಲಿ ಇಪ್ಪತ್ತನಾಲ್ಕು ತೀರ್ಥಂಕರರ ವಿಗ್ರಹಗಳಿಗೆ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪಿಸಲಾಯಿತು.


ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಸಾನಿಧ್ಯ ವಹಿಸಿ ಜೈನ ಧರ್ಮ ಅನಾದಿ ಕಾಲದಿಂದಲೂ ಅಹಿಂಸೆ, ಸತ್ಯ, ಅಚೌರ್ಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯೆ ಆಚರಣೆಯ ಮಹತ್ವವನ್ನು ಆರೋಗ್ಯದಾಯಕ ಸಮಾಜದ ನಿರ್ಮಾಣಕ್ಕಾಗಿ ಉಪದೇಶಿಸಲ್ಪಟ್ಟಿದೆ ಎಂದು ವಿವರಿಸಿದರು.


ಜೀವನದಲ್ಲಿ ಯಶಸ್ಸನ್ನು ಗಳಿಸಬೇಕೆಂದರೆ ಬದುಕುವ ಮಾರ್ಗವನ್ನು ಬದಲಿಸಿಕೊಳ್ಳ ಬೇಕಾಗುತ್ತದೆ. ಮನುಷ್ಯನು ಜೀವನದಲ್ಲಿ ಎಲ್ಲಾ ರೀತಿಯ ಪ್ರಗತಿಯನ್ನು ಹೊಂದಲು ದೇವರಲ್ಲಿ ಶರಣು ಹೊಂದುತ್ತಾನೆ. ಅನೇಕ ವಿಕಲ್ಪಗಳಿಂದ ದೂರವಾಗಲು ಸಂಕಲ್ಪಗಳನ್ನು ಮಾಡುತ್ತಾನೆ. ದೇವರಂತೆ ನಿರ್ವಿಕಲ್ಪನಾಗಬಯಸಿ ನಡೆದಲ್ಲಿ ಉತ್ತಮ ಮಾನವನಾಗಬಹುದು. ಹಾಗಾಗಿಯೇ ವಂದೇ ತದ್ಗುಣಲಬ್ದಯೇ ಅಂದರೆ ದೇವರಲ್ಲಿರುವ ಗುಣಗಳನ್ನು ಹೊಂದುವ ಬಯಕೆಯಿಂದ ನನ್ನಲ್ಲಿರುವ ದೋಷಗಳಿಂದ ಮುಕ್ತನಾಗಬಯಸುತ್ತೇನೆ ಎಂಬ ಪ್ರಾರ್ಥನೆ ಯಶಸ್ಸಿನ ಸೋಪಾನ. ನಮ್ಮ ಸಂಸ್ಕೃತಿಯಲ್ಲಿ ಆಚರಣೆಗಳಲ್ಲಿ ಉದಾತ್ತ ಸಂದೇಶಗಳಿವೆ. ಬದುಕು ಸುಂದರವಾಗಬೇಕೆಂದರೆ ಅದನ್ನು ಕಲೆಯಾಗಿ ಸ್ವೀಕರಿಸಿದರೆ ಆಸಕ್ತಿ ಬಂದೀತು. ಅನೇಕ ವರ್ಣಗಳಿಂದ ಚಿತ್ರವು ಆಕರ್ಷಿಸುವಂತೆ ಒಳ್ಳೆಯ ಗುಣಗಳಿಂದ ವ್ಯಕ್ತಿತ್ವವು ಶೋಭಿಸುತ್ತದೆ.

“ದೇಶ, ಕಾಲ, ಪರಿಸ್ಥಿತಿ, ಯಾವುದೇ ಬದಲಾದರೂ, ವ್ಯಕ್ತಿಯನ್ನು ಗುರುತಿಸುವ ಮಾನದಂಡ ಮಾತ್ರ ವ್ಯಕ್ತಿತ್ವ. ಒಳ್ಳೆಯ ಸದ್ಗುಣಗಳನ್ನು ಜೀವನದಲ್ಲಿ ಪೋಷಿಸಿಕೊಳ್ಳಬೇಕು. ಉತ್ತಮ ಸಮಾಜಕ್ಕಾಗಿ ವ್ಯಕ್ತಿತ್ವ ನಿರ್ಮಾಣದ ಅಗತ್ಯತೆಯಿದೆ” ಎಂದರು.

ಜೂನ್ 24 ರಿಂದ 28ರವರೆಗೆ ಜಿನಾಗಮ ವಿಧಾನದಲ್ಲಿ ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಹಾಗೂ ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಪೂಜಾ ವಿಧಿ-ವಿಧಾನಗಳ ನೇತೃತ್ವ ವಹಿಸಿ, ಪ್ರವಚನ ನೀಡಿ ಹರಸಿದರು.

ವಿಧಿ-ವಿಧಾನಗಳನ್ನು ಸೊಲ್ಲಾಪುರದ ಪ್ರತಿಷ್ಠಾಚಾರ್ಯ ಪ್ರೋ. ಡಾ. ಮಹಾವೀರ ಶಾಸ್ತಿçಯವರು ನಡೆಸಿಕೊಟ್ಟರು.

Leave A Reply

Your email address will not be published.

error: Content is protected !!