ನವಧಾನ್ಯ-ಸಿರಿಧಾನ್ಯಗಳ ಸಹಿತ 108 ಅರ್ಘ್ಯ ಸಮರ್ಪಣೆ |
ಜೀವದಯಾ ಮನೋಧರ್ಮವು ಶ್ರೇಷ್ಠ ವ್ರತ ; ಹೊಂಬುಜ ಶ್ರೀಗಳು

0 164

ರಿಪ್ಪನ್‌ಪೇಟೆ: ಪರಸ್ಪರ ಪ್ರೀತಿ ವಾತ್ಸಲ್ಯದಿಂದ ಅನ್ಯೋನ್ಯ ಸಂಬಂಧಗಳಿಂದ ಜೀವನ ನಿರ್ವಹಣೆಯಲ್ಲಿ ವಿಘ್ನಗಳು, ಸಂಘರ್ಷಗಳು ಬರಲಾರವು. ಯಾವುದೇ ಪ್ರಾಣಿ-ಸಸ್ಯ ಜೀವಿಗೂ ನೋವುಂಟು ಮಾಡಬಾರದೆಂಬ ಜೈನ ಧರ್ಮದ ತತ್ವಗಳು ಮಾನವಕಲ್ಯಾಣ ಬಯಸುತ್ತದೆ ಎಂದು ಹೊಂಬುಜ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ನವರಾತ್ರಿಯ ಎಂಟನೇ ದಿನದಂದು ಜೀವದಯಾಷ್ಟಮಿ ಆಚರಣೆ ಸಂದರ್ಭದಲ್ಲಿ ಪ್ರವಚನದಲ್ಲಿ ತಿಳಿಸಿದರು.

ಇತತರನ್ನು ಸಹೋದರ-ಸಹೋದರಿಯರಂತೆ ಗೌರವಿಸಬೇಕು. ಪ್ರಕೃತಿಯ ಸಸ್ಯ-ಪ್ರಾಣಿ ಜೀವರಾಶಿಗಳನ್ನು ಪೋಷಿಸುವ ಮೂಲಕ ನಿರ್ಮಲ ಮನಸ್ಸಿನ ಜೀವನವು ಸಹಬಾಳ್ವೆಯ ಫಲಶ್ರುತಿ ಶ್ರೇಷ್ಠವಾದುದೆಂದು ಹರಸಿದರು. ಸಿರಿಧಾನ್ಯಗಳ ಸಹಿತ ನವಧಾನ್ಯ, ಅಕ್ಕಿಮುಡಿ, ಬೇಳೆಗಳ ಸಮರ್ಪಣೆ ಮಾಡಲಾಯಿತು.


ಶ್ರೀಕ್ಷೇತ್ರದ ಶ್ರೀ ಪಾರ್ಶ್ವನಾಥ ಸ್ವಾಮಿ, ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಅಷ್ಟವಿಧಾರ್ಚನೆ, ವಿಶೇಷ ಆರಾಧನಾ ಪೂಜೆ ನೆರವೇರಿತು. ಪ್ರಾತಃಕಾಲ ಐಶ್ವರ್ಯ ಆನೆಯೊಂದಿಗೆ ಅಗ್ರೋದಕವನ್ನು ಕುಮದ್ವತಿ ತೀರ್ಥದಿಂದ ವಾದ್ಯಗೋಷ್ಠಿಯೊಂದಿಗೆ ತರಲಾಯಿತು.


ಸೇವಾಕರ್ತೃರಾದ ಮುಂಬೈನ ಶ್ರೀ ರಾಜೀವ್-ಸಚಿನ್ ಜೈನ್ ಹಾಗೂ ಶ್ರೀ ದಿಲೀಪ್ ಗೆವಾರೆ ಮತ್ತು ಕುಟುಂಬದವರನ್ನು ಪೂಜ್ಯ ಶ್ರೀಗಳವರು ಗೌರವಿಸಿ ಹರಸಿದರು. ರಾತ್ರಿ ಸಂಗೀತ, ಭಜನೆ, ಸಾಮೂಹಿಕ ಜಿನನಾಮ ಸ್ತುತಿಯೊಂದಿಗೆ ಸ್ವಸ್ತಿಶ್ರೀಗಳ ಪಾವನ ಸಾನಿಧ್ಯದಲ್ಲಿ ಭಕ್ತವೃಂದದವರು ಜೀವದಯಾಷ್ಟಮಿ ಪರ್ವದಲ್ಲಿ ಭಾಗಿಯಾದರು. ಪುರೋಹಿತ ಶ್ರೀ ಪದ್ಮರಾಜ ಇಂದ್ರರವರು ಪೂಜಾ ವಿಧಿ ನೆರವೇರಿಸಿದರು.

Leave A Reply

Your email address will not be published.

error: Content is protected !!