Hosanagara | ಕಾಮಗಾರಿ ಹಣ ಬಿಡುಗಡೆ ಮಾಡದೇ ಇದ್ದಲ್ಲಿ ಉದ್ಯೋಗ ಖಾತರಿ ಕೆಲಸ ಸ್ಥಗಿತಗೊಳಿಸುವ ಎಚ್ಚರಿಕೆ

0 671


ಹೊಸನಗರ : ಗ್ರಾಪಂ ಅಧ್ಯಕ್ಷರ ಒಕ್ಕೂಟದಿಂದ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯದಲ್ಲಿ ಮಾದರಿ ಮಾಡಬೇಕು, ಜಿಲ್ಲಾ ಪಂಚಾಯತ್ ಹಾಗು ತಾಲ್ಲೂಕು ಪಂಚಾಯತ್ ನಿಂದ ಬರುವ ಸಂದೇಶಗಳು ಗ್ರಾಮ ಪಂಚಾಯತ್ ನಲ್ಲಿ ಪಾರದರ್ಶಕವಾಗಿ ತಿಳಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಹಣ ಸರಿಯಾದ ಸಮಯಕ್ಕೆ ಬಿಡುಗಡೆಯಾಗುತ್ತಿಲ್ಲ. ಗ್ರಾ.ಪಂ.ಅಧ್ಯಕ್ಷರು ಜನತೆಗೆ ಉತ್ತರಿಸಲು ಕಷ್ಟವಾಗುತ್ತಿದೆ ಎಂದು ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಬುಧವಾರ ಹೊಸನಗರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ಒಕ್ಕೂಟ ಏರ್ಪಡಿಸಿದ ನರೇಗ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಕುರಿತು ಚರ್ಚೆ ನಡೆಸಲಾಯಿತು. ತೋಟಗಾರಿಕೆ ಕಾಮಗಾರಿ ಪಟ್ಟಿಯ ಕಡತವನ್ನು ಜಿಲ್ಲಾ ಪಂಚಾಯತ್ ನಲ್ಲಿ ತಡೆಹಿಡಿದ ಕುರಿತು ಅಸಮದಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡುವ 15ನೇ ಹಣಕಾಸಿಗೆ ಗ್ರಾಮ ಪಂಚಾಯತಿಯಲ್ಲಿ ನಿಯಮಾನುಸಾರ ಕ್ರಿಯಾ ಯೋಜನೆ ತಯಾರಿಸಿ ” ಇ” ಗ್ರಾಮ್ ಸ್ವರಾಜ್ ಗೆ ಆನ್‌ಲೈನ್‌ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳೇ ಕಾಮಗಾರಿಗಳಿಗೆ ಅನುಮೋದನೆ ನೀಡುವಂತಹ ಅವಕಾಶವಿದೆ. ಆದರೆ ಇದೀಗ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳುಹಿಸಬೇಕೆಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಮೌಖಿಕವಾಗಿ ತಿಳಿಸಿದ್ದಾರೆ ಎಂದು ಅಭಿವೃದ್ಧಿ ಅಧಿಕಾರಿಗಳು ತಾಲೂಕಿನ ಎಲ್ಲಾ ಪಂಚಾಯತಿಯ ಕ್ರಿಯಾ ಯೋಜನೆ ಮಂಜೂರಾತಿಗೆ ಅಡ್ಡಿಪಡಿಸುತ್ತಿದ್ದು ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 15ನೇ ಹಣಕಾಸಿನ ಹಣಕ್ಕೆ ಕ್ರಿಯಾಯೋಜನೆ ತಯಾರಿಸಿದ್ದರೂ ಕಾಮಗಾರಿ ಮಾಡಿಸದಂತಾಗಿದೆ. ಮಳೆಗಾಲದ ಆರಂಭದಲ್ಲೇ ಹಲವು ಗಾಮ ಪಂಚಾಯತಿಗಳಲ್ಲಿ ಕ್ರಿಯಾ ಯೋಜನೆ ತಯಾರಾಗಿದ್ದರೂ ಮೇಲಾಧಿಕಾರಿಗಳ ಮೌಖಿಕ ಆದೇಶವನ್ನು ಪಾಲಿಸಬೇಕೆಂದು ಅಭಿವೃದ್ಧಿ ಅಧಿಕಾರಿಗಳು ಕೆಲಸ ನಿರ್ವಹಿಸಲು ಬಿಡ್ತುತಿಲ್ಲ. ಕ್ರಿಯಾ ಯೋಜನೆಯನ್ನು ತಾಲೂಕು ಪಂಚಾಯತಿಗೆ ಕಳುಹಿಸಲಾಗಿದೆ ಜಿಲ್ಲಾ ಪಂಚಾಯತ್ ನಿಂದ ಅನುಮೋದನೆ ಆಗಿಲ್ಲ ಎಂದು ಅಭಿವೃದ್ದಿ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಜಿಲ್ಲಾ ಪಂಚಾಯತ್‌ನಲ್ಲಿ ಅದಕ್ಕೆ ಸಂಭಂದಿಸಿದ ಕೇಸ್ ವರ್ಕರ್ ಇಲ್ಲ ಎಂಬುದಾಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳು ಆರೋಪಿಸುತ್ತಿದ್ದು, ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಹಣವಿದ್ದರೂ ಕಾಮಗಾರಿ ನಿರ್ವಹಿಸದಂತಾಗಿದ್ದು, ಅಭಿವೃದ್ದಿ ಕುಂಠಿತವಾಗಿದೆ ಎಂದು ನಗರ ಕರುಣಾಕರ್ ಶೆಟ್ಟಿ ಹೇಳಿದರು.

ಕ್ರಿಯಾ ಯೋಜನೆಯ ಮಂಜೂರಾತಿಗೆ ಅನುಮೋದನೆ ನೀಡುವಂತೆ ಮಾಡಿ ಕಾಮಗಾರಿಗಳನ್ನು ನಡೆಸಲು ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಬೇಕಿದೆ. ನರೇಗಾ ಕಾಮಗಾರಿ ಹಣ ಬಿಡುಗಡೆಯಾಗುತ್ತಿಲ್ಲ. ನಿಯಮಗಳ ಸರಳೀಕರಣ ಮಾಡಿ ತುರ್ತು ಕ್ರಿಯಾ ಯೋಜನೆಗೆ ಅನುಮತಿ ನೀಡಬೇಕು. ದಿನೇಶ್, ನರೇಂದ್ರ ಕುಮಾರ್, ಪಿಡಿ ಓಗಳು ಅಭಿವೃದ್ಧಿಗೆ ಸ್ಪಂದನೆ ಮಾಡುತ್ತಿಲ್ಲ. ಒಕ್ಕೂಟದ ಕರೆಗೆ ಇಲಾಖೆ ಸ್ಪಂದನೆ ನೀಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಆಡಳಿತ ವ್ಯವಸ್ಥೆ ಕುರಿತು ಬೇಸರ ವ್ಯಕ್ತಪಡಿಸಿದರು.

ಹೊಸನಗರ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳಲ್ಲಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಕುರಿತು ಉಲ್ಲೇಖ: ದಿನಾಂಕ:27.09.2023 ರಂದು ನಡೆದ ಹೊಸನಗರ ತಾಲ್ಲೂಕು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಒಕ್ಕೂಟದ ಸಭೆಯಲ್ಲಿ ನಿರ್ಣಯದಂತೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುಷ್ಠಾನ ಮಾಡುತ್ತಿರುವ ಕಾಮಗಾರಿಗಳಲ್ಲಿ ಕೆಲಸ ಕಾರ್ಮಿಕರಿಗೆ ನಿಗದಿತ ಸಮಯಕ್ಕೆ ಮಾಡಿದ ಹಣ ಸರಿಯಾಗಿ ಪಾವತಿಯಾಗುತ್ತಿಲ್ಲ. ದಿನಾಂಕ: 02.09.2023 ರಂದು ಅಂತಿಮ ಕೂಲಿ ಪಾವತಿಯಾಗಿದ್ದು ನಂತರ ಇದೂವರೆಗೂ ಕೂಲಿ ಹಣ ಬಿಡುಗಡೆಯಾಗಿರುವುದಿಲ್ಲ. ಕೂಲಿ ಕಾರ್ಮಿಕರು ಪ್ರತಿ ದಿನ ಗ್ರಾಮ ಪಂಚಾಯ್ತಿಗೆ ಕೂಲಿ ಹಣ ಪಾವತಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೇ ಕೂಲಿ ಹಣ ಪಾವತಿಯಾಗುವವರೆಗೂ ಗ್ರಾಮ ಪಂಚಾಯ್ತಿಯಲ್ಲಿ ಧರಣಿ ನಡೆಸುವುದಾಗಿ ತಿಳಿಸುತ್ತಿದ್ದಾರೆ. ಆದ್ದರಿಂದ ದಿನಾಂಕ: 27.09.2023 ರಂದು ನಡೆದ ಹೊಸನಗರ ತಾಲ್ಲೂಕು ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳ ಒಕ್ಕೂಟದ ಸಭೆಯಲ್ಲಿ ನಿರ್ಣಯಿಸಿದಂತೆ, ಕೂಲಿ ಹಣ ನಿಗದಿತ ಸಮಯಕ್ಕೆ ಪಾವತಿ ಮಾಡದಿದ್ದಲ್ಲಿ ದಿನಾಂಕ:01.10.2023 ರಿಂದ ಹೊಸನಗರ ತಾಲ್ಲೂಕಿನ ಎಲ್ಲಾ ಗ್ರಾಮ ಇಲಾಖೆಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಪಂಚಾಯ್ತಿ ಮತ್ತು ಅನುಷ್ಠಾನ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಎಲ್ಲ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಒಕ್ಕೂಟದ ಸಭೆಯಲ್ಲಿ ನಿರ್ಣಯ ಮಾಡಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ವೈ. ನರೇಂದ್ರ ಕುಮಾರ್ ಮನವಿ ನೀಡಿದರು.

ಇದೇ ಸಂದರ್ಭದಲ್ಲಿ ಒಕ್ಕೂಟ ರಚಿಸಿ ತಾಲ್ಲೂಕಿನಲ್ಲಿ ಸಂಘಟನೆ ಬಲಪಡಿಸಿ, ಅಧಿಕಾರಿಗಳ ವೈಫಲ್ಯ ಕುರಿತು, ನಿರ್ಲಕ್ಷ್ಯ ಕುರಿತು ಪ್ರತಿಭಟನೆ ನಡೆಸುವ ಕುರಿತು ಇಲಾಖೆ ಗಮನ ಹರಿಸಿ, ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಒತ್ತು ನೀಡಲು ಸಂಪೂರ್ಣ ಪ್ರೋತ್ಸಾಹಿಸುತ್ತಿರುವ ನಗರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕರುಣಾಕರ್ ಶೆಟ್ಟಿ, ಮಾರುತಿಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಒಕ್ಕೂಟದ ಮಾಜಿ ಅಧ್ಯಕ್ಷರಾಗಿರುವ ಚಿದಂಬರ್ ಇವರನ್ನು ಗೌರವಿಸಿ ಸನ್ಮಾನಿಸಿದರು. ನಂತರ ನೂತನ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯನಗರದ ಶ್ರೀನಿವಾಸ ರೆಡ್ಡಿ ಇವರನ್ನು ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಹುಲಿಕಲ್ ಕೃಷ್ಣಮೂರ್ತಿ, ಕರಿಮನೆ ದ್ಯಾವಮ್ಮ ಎಂ.ಗುಡ್ಡೆಕೊಪ್ಪ, ಸೊನಲೆ ಗ್ರಾಪಂ ಉಪಾಧ್ಯಕ್ಷ ಕೃಷ್ಣಮೂರ್ತಿ, ಸೊನಲೆ ಸತೀಶ್, ತ್ರಿಣಿವೆ ಚಂದ್ರಶೇಖರ್, ಜೇನಿ ಅಧ್ಯಕ್ಷ ಲಕ್ಷ್ಮಣ, ಮಾರುತಿಪುರ ಅಧ್ಯಕ್ಷೆ ದೀಪಿಕಾ, ಮತ್ತಿಮನೆ ಅಧ್ಯಕ್ಷರಾದ ದ್ಯಾವಮ್ಮ, ಮುಂಬಾರು ಕಾಲಸಸಿ ಸತೀಶ್, ಸೇರಿದಂತೆ ಹಲವು ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!