Shivamogga | ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗೆ ವೈಭವದ ಚಾಲನೆ ; ಭಾರಿ ಜನಸ್ತೋಮ

0 187

ಶಿವಮೊಗ್ಗ : ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆಗೆ ಇಂದು ವೈಭವದ ಚಾಲನೆ ದೊರೆಯಿತು.

ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶಾಸಕ ಎಸ್.ಎನ್. ಚನ್ನಬಸಪ್ಪ, ಆರ್‌ಎಸ್‌ಎಸ್ ಪ್ರಮುಖ್ ಪಟ್ಟಾಭಿ, ಹಿಂದೂ ಮಹಾಸಭಾ ಸಂಘಟನೆಯ ಪ್ರಮುಖ ಆರ್.ಸುರೇಶ್ ಕುಮಾರ್ ಸೇರಿದಂತೆ ಸಮಿತಿಯ ಮುಖಂಡರು ಮೆರವಣಿಗೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಇದ್ದರು.

ಇಂದು ಬೆಳಿಗ್ಗೆ 10-45ಕ್ಕೆ ಗಣಪತಿಗೆ ಮಹಾ ಮಂಗಳಾರತಿ ಪೂಜೆ ನೆರವೇರಿಸುವುದರೊಂದಿಗೆ ರಾಜಬೀದಿ ಉತ್ಸವ ಆರಂಭವಾಯಿತು. ಪೊಲೀಸರ ಬಿಗಿ ಬಂದೋಬಸ್ತ್, ಯುವಕರ ಸಂಭ್ರಮೋತ್ಸವ, ಕಲಾತಂಡಗಳ ಸಡಗರಗಳ ನಡುವೆ ಮೆರವಣಿಗೆ ಶಾಂತಿಯುತವಾಗಿ ಸಾಗುತ್ತಿದೆ. ಮಾರಿಕಾಂಬಾ ದೇವಾಲಯದ ಬಳಿ ಹರಿಗೆಯ ಕೆ.ಕೆ.ಗೌಡ ಕುಟುಂಬದವರಿಂದ 150 ಕೆ.ಜಿ. ತೂಕದ ಸೇಬಿನ ಹಾರ ಅರ್ಪಿಸಲಾಯಿತು.

ಸುಮಾರು ಮೂರು ದಶಕಗಳಿಂದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ದಲ್ಲಿ ಸಾರಥಿ ಧನಂಜಯ ಅವರೇ ಈ ಬಾರಿಯೂ ಟ್ರ್ಯಾಕ್ಟರ್ ಚಾಲನೆ ಮಾಡಿದರು.
ಹಿಂದೂ ಮಹಾಸಭಾ ಸಂಘಟನೆಯ ವತಿಯಿಂದ ಗಣೇಶೋತ್ಸವದ ಅಂಗವಾಗಿ ಈ ಬಾರಿ ಅದ್ದೂರಿ ಮೆರವಣಿಗೆಗೆ ರಂಗು ತಂದಿದ್ದು, ಇಡೀ ನಗರವೇ ಕೇಸರಿಮಯವಾಗಿದೆ. ಇಂದಿನ ಅದ್ದೂರಿ ಮೆರವಣಿಗೆಯಲ್ಲಿ ಕಲಾತಂಡಗಳು, ಮಂಗಳ ವಾದ್ಯ, ಚಂಡೆ ಮೇಳ, ಡೊಳ್ಳು ಕುಣಿತ, ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ರಂಗು ತಂದಿದ್ದು, ಕುಣಿತದೊಂದಿಗಿನ ಘೋಷಣೆಗಳು ಮುಗಿಲು ಮುಟ್ಟಿವೆ. ಗಣಪತಿಯ ರಾಜಬೀದಿ ಉತ್ಸವ ಸಾಗುವ ಎಸ್.ಪಿಎಂ. ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್ ಬಳಿ ಮನೆ ಮುಂದೆ ರಂಗೋಲಿ ಹಾಕಿ ಚಿತ್ತಾಕರ್ಷಕ ಬಣ್ಣ ಹಾಕಲಾಗಿತ್ತು. ಮಾರ್ಗದುದ್ದಕ್ಕೂ ಅಪಾರ ಸಂಖ್ಯೆಯ ಜನ ವೀಕ್ಷಿಸಲು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಜರಂಗದಳ, ವಿಶ್ವ ಹಿಂದು ಪರಿಷತ್, ಹಿಂದು ಮಹಾಸಭಾ ಸೇರಿದಂತೆ ಹಿಂದು ಪರ ಸಂಘಟನೆ ಗಳ ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಭಗವಾಧ್ವಜ ಹಿಡಿದು ಯುವಕರು ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದರು. ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿದೆ. ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್ ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಬಿ.ಹೆಚ್.ರಸ್ತೆ, ಅಶೋಕವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ದುರ್ಗಿಗುಡಿ, ಮಹಾವೀರ ವೃತ್ತ, ಬಾಲರಾಜ್ ಅರಸು ರಸ್ತೆ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್
ರಾರಾಜಿಸುತ್ತಿವೆ. ಪ್ರಮುಖ ವೃತ್ತಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳು ಕೇಸರಿ ಬಾವುಟಗಳನ್ನು ಕಟ್ಟಲಾಗಿದೆ.

ಗಾಂಧಿಬಜಾರ್‌ನ ಪ್ರವೇಶ ದ್ವಾರದಲ್ಲಿ ಉಗ್ರ ನರಸಿಂಹ, ಶಿವಪ್ಪನಾಯಕ ವೃತ್ತದಲ್ಲಿ ಶಿವಾಜಿ ಮಹಾರಾಜರ, ಅಮೀರ್ ಅಹ್ಮದ್ ವೃತ್ತದಲ್ಲಿ ಚಂದ್ರಯಾನ-3ರ ಪ್ರತಿಕೃತಿಯನ್ನು ಸ್ಥಾಪಿಸಲಾಗಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ. ನಿನ್ನೆ ರಾತ್ರಿಯಿಂದಲೇ ಈ ದೃಶ್ಯವನ್ನು ಅಪಾರ ಸಂಖ್ಯೆ ಜನಸ್ತೋಮ ಸೇರಿ ಕಣ್ತುಂಬಿ ಕೊಳ್ಳುತ್ತಿದ್ದುದು ಕಂಡು ಬಂತು. ಯುವಕ, ಯುವತಿಯರು ಫೋಟೋ, ಸೆಲ್ಪಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಗಣಪತಿ ಸಾಗುವ ರಸ್ತೆಯಲ್ಲಿ, ಮಹಿಳೆಯರ, ಯುವಕರ ನೃತ್ಯ ಗಮನಸೆಳೆಯುತಿತ್ತು. ಯುವತಿಯರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗೋಪಿ ವೃತ್ತದಲ್ಲಿ ಡಿಜೆ ಅಳವಡಿಸಲಾಗಿದ್ದು, ಸಂಗೀತಕ್ಕೆ ತಕ್ಕಂತೆ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು.

ಮೆರವಣಿಗೆಯ ಮಾರ್ಗದುದ್ದಕ್ಕೂ ಭಕ್ತರು, ಯುವಕರು, ಸಾರ್ವಜನಿಕರಿಗೆ ಅಲ್ಲಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಲಘು ಉಪಾಹಾರ, ಪಾನೀಯ, ಸಿಹಿ ವಿತರಿಸಲಾಯಿತು. ಹೀಗೆ ಹಿಂದು ಮಹಾಸಭಾ ಗಣಪತಿ ಮೆರವಣಿಗೆ ವೈಭವದಿಂದ ಸಾಗಿದೆ.

ಇನ್ನು ರಾಜಬೀದಿಯ ಮಾರ್ಗದಲ್ಲಿ ಯುವಕರ ದಂಡು ಬೈಕ್‌ಗಳಲ್ಲಿ ‘ಜೈ ಶ್ರೀರಾಮ್’ ಎಂದು ಕೂಗುತ್ತಾ ಸಾಗುತ್ತಿದ್ದರು. ಇನ್ನೂ ವಿಶೇಷವೆಂದರೆ ಗಣಪತಿಯ ರಾಜಬೀದಿ ಉತ್ಸವಕ್ಕೆ ಸ್ವಾಗತ ಕೋರುವ ಬ್ಯಾನರ್‌ಗಳನ್ನು ಮಾರ್ಗದುದ್ದಕ್ಕೂ ಪುನಿತ್ ರಾಜ್‍ಕುಮಾರ್ ಭಾವಚಿತ್ರ ಹಾಕಲಾಗಿದೆ. ಮಾರ್ಗದುದ್ದಕ್ಕೂ ವಿವಿಧ ಸಂಘಟನೆಗಳವರು ಗಣಪತಿಗೆ ಬೃಹತ್ ಹಾರಗಳನ್ನು ಹಾಕಲು ಸಿದ್ಧತೆ ನಡೆಸಿದ್ದರು.

ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಸಿಸಿ ಟಿವಿ, ದಿವ್ಯದೃಷ್ಟಿ ಕಣ್ಗಾವಲು ಹಾಗೂ ಡ್ರೋಣ್ ಕ್ಯಾಮೆರಾಗಳಲ್ಲಿ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಲಾಗಿದೆ.


ಎಎ ಸರ್ಕಲ್‌ನಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಆರ್‌ಎಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ. ಪೊಲೀಸರು ವಿಶೇಷವಾಗಿ ಮಫ್ತಿಯಲ್ಲಿ ಇದ್ದು ನಿಗಾ ವಹಿಸುತ್ತಿದ್ದುದು ಕಂಡು ಬಂದಿತು.
ಈ ಬಾರಿ ಪೊಲೀಸರು ವಿವಿಧ ವೇಷಧಾರಿ‌ಗಳಾಗಿ ಮುಫ್ತಿಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.


ಈದ್‌ಮಿಲಾದ್ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಸಹ ಇದ್ದು, ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ರಜೆ ಇರುವುದರಿಂದ ಹೆಚ್ಚಿನ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲೂ ಮಕ್ಕಳು, ಹೆಣ್ಣುಮಕ್ಕಳು, ಭಾಗವಹಿಸಿದ್ದರು ವಿಶೇಷವಾಗಿತ್ತು. ಪುಟ್ಟ ಮಕ್ಕಳು ತಮ್ಮ ಪೋಷಕರ ಹೆಗಲೇರಿ ಮೆರವಣಿಗೆ ವೀಕ್ಷಿಸಿದ್ದು ವಿಶೇಷವಾಗಿತ್ತು.


ಒಟ್ಟಾರೆಯಾಗಿ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ನಡೆಯುತ್ತಿರುವ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಪತ್ರಿಕೆ ಮುದ್ರಣಕ್ಕೆ ಹೋಗುವವರೆಗೂ ಶಾಂತಿಯುತವಾಗಿ ಸಾಗಿತ್ತು.

Leave A Reply

Your email address will not be published.

error: Content is protected !!