ಶಕ್ತಿ ಯೋಜನೆಯಿಂದ ಶಕ್ತಿ ಕಳೆದುಕೊಳ್ಳಲಿವೆಯೇ 40 ವರ್ಷ ಹಳೆಯ ಟ್ಯಾಕ್ಸಿಗಳು ?

0 99

ಶಿವಮೊಗ್ಗ : ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ 40 ವರ್ಷ ಹಳೆಯ ಟ್ಯಾಕ್ಸಿಗಳು ಶಕ್ತಿ ಕಳೆದುಕೊಳ್ಳುವ ಆತಂಕ ಎದುರಾಗಿದ್ದು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಮಹಿಳೆಯರಿಗೆ ಉಚಿತ ಬಸ್ ಟಿಕೆಟ್ ನೀಡುತ್ತಿರುವುದರಿಂದ ಬೀದಿಗೆ ಬರುವ‌ ಸ್ಥಿತಿ ನಿರ್ಮಾಣವಾಗಿದೆ.

ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಚುನಾವಣೆಯಲ್ಲಿ ಘೋಷಣೆ ಮಾಡಿದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದ ಹಿನ್ನೆಲೆಯಲ್ಲಿ ಈ ಯೋಜನೆ ಖಾಸಗಿ ಟ್ಯಾಕ್ಸಿಗಳ ಮಾಲೀಕರು ಮತ್ತು ಚಾಲಕರ ಹೊಟ್ಟೆ ಮೇಲೆ ಹೊಡೆದಂತಾಗಿದೆ‌.

ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಕಂಪನಿಗಳು, ಸಂಸ್ಥೆಗಳಿವೆ. ಇವುಗಳಲ್ಲಿ ಹೆಚ್ಚಿನ ಪಾಲು ಗಾರ್ಮೆಂಟ್ಸ್ಗಳಾಗಿವೆ. ಬಹುಪಾಲು ಮಹಿಳೆಯರು ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುತ್ತಾರೆ. ಕೆಲಸದ ಸಮಯಕ್ಕೆ ಸರಿಯಾಗಿ ತಲುಪಲು ಹೆಚ್ಚಿನ ಮಹಿಳೆಯರು ಇದೆ ಖಾಸಗಿ ಟ್ಯಾಕ್ಸಿಗಳ ಬಳಕೆ ಮಾಡುತ್ತಾರೆ. ಉಚಿತ ಬಸ್ ಪ್ರಯಾಣದಿಂದ ಖಾಸಗಿ ಟ್ಯಾಕ್ಸಿಗಳ ಮಾಲೀಕರು ಮತ್ತು ಚಾಲಕರು ಆರ್ಥಿಕ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಸಂಚರಿಸಲು ಅನುಮತಿ ಪಡೆದ ಒಟ್ಟು 97 ಟ್ಯಾಕ್ಸಿಗಳಿದ್ದು, ಸದ್ಯಕ್ಕೆ 60 ಕ್ಕಿಂತ ಕಡಿಮೆ ಟ್ಯಾಕ್ಸಿಗಳು ಮಾತ್ರ ಓಡಾಟ ಮಾಡುತ್ತಿವೆ.
ಕೆಲವು ಟ್ಯಾಕ್ಸಿಗಳು ಕೊರೊನಾ ಕಾಲದಲ್ಲಿ ಆರ್ಥಿಕ ಸಂಕಷ್ಟ ಎದುರಿಸಲಾರದೆ ಸಂಚಾರ ನಿಲ್ಲಿಸಿದ್ದವು. ಕೆಲವು ಡಿಸೇಲ್ ಬೆಲೆ ಹೆಚ್ಚಳದ ಹೊರೆ ಹೊರಲಾರದೆ ರಸ್ತೆಗೆ ಇಳಿಸಿಲ್ಲ.
ಟ್ಯಾಕ್ಸಿ ಓಡಿಸುತ್ತಿದ್ದ ಹಲವರು ಜೀವನ ನಡೆಸಲು ಬೇರೆ ಕೆಲಸ ಹುಡುಕಿಕೊಂಡರು‌.

ಶಿವಮೊಗ್ಗದಿಂದ ಭದ್ರಾವತಿಗೆ ಟ್ಯಾಕ್ಸಿಯಲ್ಲಿ ಒಂದು ಟ್ರಿಪ್ನಲ್ಲಿ 10 ಜನರನ್ನು ಕರೆದೊಯ್ಯಲಾಗುತ್ತದೆ. ಈ ಮಾರ್ಗದಲ್ಲಿ ಒಂದು ಟ್ರಿಪ್ ಸಂಚಾರ ಮಾಡಲು ಟ್ಯಾಕ್ಸಿಗೆ 4 ಲೀ. ಡಿಸೇಲ್ ಬೇಕಾಗುತ್ತದೆ. ಪ್ರತಿ ಪ್ರಯಾಣಿಕನಿಗೆ 25 ರೂ. ದರ ವಿಸಲಾಗುತ್ತದೆ. ಮಾರ್ಗ ಮಧ್ಯದಲ್ಲಿ ಮಲವಗೊಪ್ಪ, ನಿದಿಗೆ, ಬಿದರೆ, ಮಾಚೇನಹಳ್ಳಿ, ಶಿಮುಲ್ ಡೈರಿ ಬಳಿ ಇಳಿದುಕೊಳ್ಳುವವರಿಗೆ ಕಡಿಮೆ ದರ ವಿಧಿಲಾಗುತ್ತದೆ.
ಇದರಿಂದ ಹೆಚ್ಚಿನ ಪಾಲು ನಮಗೆ ನಷ್ಟವಾಗುತ್ತದೆ ಎನ್ನುತ್ತಾರೆ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು.

ಗಾರ್ಮೆಂಟ್ಸ್ಗಳಿಗೆ ತೆರಳುವ ಮಹಿಳೆಯರೆ ಟ್ಯಾಕ್ಸಿಗಳಿಗೆ ಆಧಾರವಾಗಿದ್ದಾರೆ. ರಾಜ್ಯ ಸರಕಾರ ಕೆಎಸ್ಆರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಘೋಷಿಸಿರುವಾಗ ದುಡ್ಡು ಕೊಟ್ಟು ಟ್ಯಾಕ್ಸಿಯಲ್ಲಿ ಹೋಗಲು ಮಹಿಳೆಯರು ಮುಂದೆ ಬರುವುದು ದೂರದ ಮಾತಾಗಿದೆ. ಇದರಿಂದ ಟ್ಯಾಕ್ಸಿಗಳನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಮಾಲೀಕರು ಮತ್ತು ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟ್ಯಾಕ್ಸಿಗಳ ಮಾಲೀಕರು ಮತ್ತು ಚಾಲಕರು ರಸ್ತೆ ತೆರಿಗೆ, ವಾಹನ ವಿಮೆ ಕಟ್ಟಲು ಪರದಾಡುತ್ತಿದ್ದಾರೆ.

Leave A Reply

Your email address will not be published.

error: Content is protected !!