RAIN | ಕಾಫಿನಾಡಿನ ಹಲವೆಡೆ ಸುರಿದ ಧಾರಾಕಾರ ಮಳೆ ; ರೈತರ ಮೊಗದಲ್ಲಿ ಮಂದಹಾಸ
ಚಿಕ್ಕಮಗಳೂರು: ಮುಂದಿನ 6 ದಿನಗಳಲ್ಲಿ ಕರ್ನಾಟಕ ಸೇರಿ 10ಕ್ಕೂ ಅಧಿಕ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದರ ಬೆನ್ನಲ್ಲೆ ಇಂದು ಜಿಲ್ಲೆಯ ಬಯಲುಸೀಮೆ ಮತ್ತು ಮಲೆನಾಡು ಭಾಗದಲ್ಲಿ ಗುಡುಗು-ಸಿಡಿಲು ಗಾಳಿ ಸಹಿತ ಭಾರಿ ಮಳೆ ಆಗಿದ್ದು, ಕಾದ ಕಾವಲಿಯಂತಾಗಿದ್ದ ಧರೆಗೆ ವರಣದೇವ ತಂಪೆರೆದಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ, ಉದ್ದೇಬೋರನಹಳ್ಳಿಯಲ್ಲೂ ಮಳೆರಾಯ ಅಬ್ಬರಿಸಿದ್ದಾನೆ. ಭಾರೀ ಗಾಳಿಯೊಂದಿಗೆ ಧಾರಾಕಾರವಾಗಿ ಮಳೆ ಸುರಿದಿದೆ. ನಿನ್ನೆಯೂ ಸಹ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಿತ್ತು. ಇಂದು ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆ ಆಗಿದೆ.
ಇನ್ನೂ ಮೂಡಿಗೆರೆ ತಾಲೂಕಿನ ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ರಾತ್ರಿ 7 ಗಂಟೆಗೆ ಪ್ರಾರಂಭವಾದ ಮಳೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಬಣಕಲ್, ಕೊಟ್ಟಿಗೆಹಾರ, ತರುವೆ, ಬಿನ್ನಡಿ, ಅತ್ತಿಗೆರೆ, ಬಗ್ಗಸಗೋಡು, ಫಲ್ಗುಣಿ, ಹೊರಟ್ಟಿ, ಬಿದರಹಳ್ಳಿ ಮುಂತಾದ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.

ಕಾಫಿ ಬೆಳೆಗಾರರು ಮುಂದಿನ ವರ್ಷದ ಫಸಲಿಗಾಗಿ ತೋಟಕ್ಕೆ ನೀರು ಹಾಯಿಸುವ ಸಿದ್ದತೆಯಲ್ಲಿದ್ದರು. ಬಹುತೇಕ ಬೆಳೆಗಾರರು ಕಾಫಿ ತೋಟಕ್ಕೆ ನೀರು ಹಾಯಿಸಿದ್ದರು. ದಿಢೀರ್ ಮಳೆ ಸುರಿದಿರುವುದು ಸಾವಿರಾರು ರೂಲ ವೆಚ್ಚ ಮಾಡಿ ತೋಟಕ್ಕೆ ನೀರು ಹಾಯಿಸುವುದು ತಪ್ಪಿದಂತಾಗಿದೆ.
ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ಮಳೆಯಿಂದಾಗಿ ತಂಪೆರದಂತಾಗಿದ್ದು ಚಾರ್ಮಾಡಿ ಘಾಟ್‍ನಲ್ಲಿ ಸುರಿದ ಮಳೆಯಿಂದಾಗಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ.
ಮುಂದಿನ ನಾಲ್ಕು ದಿನ ಮಳೆ ಸಾಧ್ಯತೆ
ಸಮುದ್ರಗಳಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಕಾರಣ ರಾಜ್ಯದ ವಿವಿಧೆಡೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ. ಮುಂದಿನ ನಾಲ್ಕು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾ.15ರಿಂದ 18ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವೆಡೆ ಮಳೆ ಆಗಲಿದೆ. ಮಾ.16 ರಿಂದ 18ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬಳ್ಳಾರಿ, ಬೀದರ್, ಧಾರವಾಡ, ಗದಗ, ಕಲಬುರಗಿ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಯ ಕೆಲವು ಕಡೆ ಮಾ.16 ರಿಂದ ಮಾ.18ರವರೆಗೆ ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಮಾ.17 ಮತ್ತು 18ರಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.