ಕೊಪ್ಪ: ಪಟ್ಟಣ ಸಮೀಪದ ಅಮ್ಮಡಿಯ ಕ್ಲಾಸಿಕ್ ಪ್ಲಾಂಟೇಷನ್‌ನಲ್ಲಿ ಬೇಲಿ ಕಳ್ಳಿ ಗಿಡದ ಹಣ್ಣು ಸೇವಿಸಿ ಐವರು ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ ಈ ಮಕ್ಕಳಿಗೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಾರ್ಮಿಕ ಪ್ರೇಮ್ ಸಿಂಗ್ ಮಕ್ಕಳಾದ ಇಶಾನಿ (6), ಇಶಿಕಾ (4), ಆಯುಷ್ (3), ಬೈಯಲಾಲ್ ಎನ್ನುವವರ ಪುತ್ರಿ ದೀಕ್ಷಾ (4), ಪ್ರೀತಮ್ ಎಂಬುವವರ ಪುತ್ರ ರೋನಕ್ (3) ಸೇರಿದಂತೆ ಐವರು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ.
ಘಟನೆಯ ವಿವರ:
ಕೊಪ್ಪ ಅಮ್ಮಡಿಯ ಕ್ಲಾಸಿಕ್ ಪ್ಲಾಂಟೆಷನ್‌ನಲ್ಲಿ ಕಾಫಿ ಕೊಯ್ಲು ಕೆಲಸಕ್ಕಾಗಿ ಆಗಮಿಸಿದ ಮಧ್ಯಪ್ರದೇಶ ಭೋಪಾಲ್ ಮೂಲದ ವಲಸೆ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಎಸ್ಟೇಟ್ ಮಾಲೀಕರು ಕೂಲಿ ಲೈನ್ ಮನೆಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದಾರೆ. ಕಾರ್ಮಿಕರು ಪುಟ್ಟಮಕ್ಕಳನ್ನು ನೋಡಿಕೊಳ್ಳುವಂತೆ ಮಹಿಳೆಯೊಬ್ಬಳನ್ನು ನೇಮಿಸಿ ಶುಕ್ರವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ಕೂಲಿ ಲೈನ್ ಆವರಣದಲ್ಲಿ ಆಟವಾಡುತ್ತಿದ್ದ ಪುಟ್ಟಮಕ್ಕಳು ಕುತೂಹಲದಿಂದ ತೋಟದ ಬೇಲಿಯಲ್ಲಿ ಬೆಳೆದಿದ್ದ ಬೇಲಿ ಕಳ್ಳಿ ಗಿಡದ ಹಣ್ಣುಗಳನ್ನು ತಿಂದ ಐವರು ಮಕ್ಕಳು ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದಾರೆ. ವಿಚಾರ ತಿಳಿಯುತ್ತಲೇ ಕಾರ್ಮಿಕರು ಮಕ್ಕಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಕೊಪ್ಪ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಯ ಅಂಬ್ಯುಲೆನ್ಸ್‌ನಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.