ತೀರ್ಥಹಳ್ಳಿ: ಮಲೆನಾಡಿನಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಅರಣ್ಯ ಇಲಾಖೆಯಿಂದ ಹೊಸದಾಗಿ ನೋಟಿಸ್ ನೀಡಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಕಸ್ತೂರಿರಂಗನ್ ವರದಿ ಹಾಗೂ ಮಲೆನಾಡಿನ ಭೂ ಸಮಸ್ಯೆಗಳ ಕುರಿತು ಆಯೋಜಿಸಿದ್ದ ಜನಪ್ರತಿನಿಧಿಗಳು ಮತ್ತು ರೈತರ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು. ರೈತರ ಭೂಹಕ್ಕು, ಬಗರ್‌ಹುಕುಂ ಸಾಗುವಳಿ, ಅರಣ್ಯ ಒತ್ತುವರಿ, 94ಸಿ ಹಕ್ಕುಪತ್ರ ಮತ್ತು ಪರಿಸರ ಸೂಕ್ಷ್ಮ ವಲಯದ ಸಮಸ್ಯೆಗಳ ಕುರಿತು ಸರ್ಕಾರದ ನಿಲುವನ್ನು ವಿವರಿಸಿದರು.

ತಲೆತಲಾಂತರಗಳಿಂದ ಉಳುಮೆ ಮಾಡುತ್ತಿರುವವರಿಗೆ ತೊಂದರೆ ಬೇಡ
ಮಲೆನಾಡಿನ ರೈತರು ತಲೆತಲಾಂತರಗಳಿಂದ ಸಾಂಪ್ರದಾಯಿಕವಾಗಿ ಉಳುಮೆ ಮಾಡಿಕೊಂಡು ಬಂದಿರುವ ಜಮೀನು ಮತ್ತು ನಿರ್ಮಿಸಿಕೊಂಡಿರುವ ಮನೆಗಳಿಗೆ ತೊಂದರೆ ನೀಡಬಾರದು. ಯಾವುದೇ ರೈತನಿಗೆ ಅರಣ್ಯ ಇಲಾಖೆಯಿಂದ ಹೊಸದಾಗಿ ನೋಟಿಸ್ ಜಾರಿಗೊಳಿಸಬಾರದು ಎಂದು ಸಭೆಯಲ್ಲಿ ಹಾಜರಿದ್ದ ಅರಣ್ಯ ಸಚಿವರು ಹಾಗೂ ಹಿರಿಯ ಅರಣ್ಯಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.
ಆದರೆ ರೈತರು ಹೊಸದಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಬಾರದು ಎಂದೂ ಅವರು ಎಚ್ಚರಿಸಿದರು.
“ಜನರ ಭಾವನೆಗಳ ಮೇಲೆ ರಾಜಕಾರಣ ಮಾಡಲು ಬಂದಿಲ್ಲ. ಜನರ ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಂದಿದ್ದೇನೆ. ರೈತರನ್ನು ರಕ್ಷಿಸುವ ಉದ್ದೇಶದಿಂದ ಅವರ ಬಳಿಗೇ ಸರ್ಕಾರ ಬಂದಿದೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕಸ್ತೂರಿರಂಗನ್ ವರದಿ ಕುರಿತು ಕೇಂದ್ರಕ್ಕೆ ರಾಜ್ಯದ ಅಭಿಪ್ರಾಯ
ಕಸ್ತೂರಿರಂಗನ್ ವರದಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ರಾಜ್ಯದ ಅಭಿಪ್ರಾಯ ಕೇಳಿದೆ. ಈ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ವಪಕ್ಷಗಳ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ವಿಧಾನಸೌಧದಲ್ಲಿ ಕುಳಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆದೇಶ ಹೊರಡಿಸುವುದರಿಂದ ಮಾತ್ರ ಜನರ ಸಮಸ್ಯೆ ಪರಿಹಾರವಾಗುವುದಿಲ್ಲ. ಜನರ ಬಳಿಗೆ ತೆರಳಿ ಅವರ ಅಹವಾಲುಗಳನ್ನು ನೇರವಾಗಿ ಆಲಿಸುವುದು ಅಗತ್ಯ ಎಂದು ಅವರು ಹೇಳಿದರು.

ಬಗರ್‌ಹುಕುಂ ಮತ್ತು 94ಸಿ ಸಮಸ್ಯೆಗೆ ಕಾನೂನು ರಕ್ಷಣೆ
ಬಗರ್‌ಹುಕುಂ ಅರ್ಜಿಗಳು, 94ಸಿ ಹಕ್ಕುಪತ್ರ ವಿತರಣೆ ಹಾಗೂ ಪರಿಸರ ಸೂಕ್ಷ್ಮ ವಲಯದ ನಿಯಮಗಳ ಕುರಿತು ಶಾಸಕರ ಸಮಿತಿ ಸಭೆ ನಡೆಸಲಾಗುವುದು. ಅಗತ್ಯವಿದ್ದರೆ ವಿಧಾನಸಭಾ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಿ ಕಾನೂನಿನ ಚೌಕಟ್ಟಿನಲ್ಲಿ ರೈತರಿಗೆ ರಕ್ಷಣೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಅಡಿಕೆ ದರದ ವಿಚಾರವಾಗಿ ದೆಹಲಿಗೆ ಸರ್ವಪಕ್ಷ ನಿಯೋಗ
ಅಡಿಕೆ ಆಮದು, ತೆರಿಗೆ ಹಾಗೂ ಮಾರುಕಟ್ಟೆ ಧಾರಣೆ ಕುಸಿತದ ವಿಷಯವೂ ಸಭೆಯಲ್ಲಿ ಪ್ರಸ್ತಾಪವಾಯಿತು. ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರನ್ನು ಒಳಗೊಂಡ ನಿಯೋಗವನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
‘ತೇಗದ ಸಿರಿ’ ಯೋಜನೆ
ರೈತರ ಜಮೀನಿಗೆ ಹೊಂದಿಕೊಂಡಿರುವ ಸರ್ಕಾರಿ ರಸ್ತೆ ಬದಿಗಳಲ್ಲಿ ತೇಗದ ಸಸಿಗಳನ್ನು ನೆಡುವ ‘ತೇಗದ ಸಿರಿ’ ಯೋಜನೆಯನ್ನೂ ಮುಖ್ಯಮಂತ್ರಿ ಪ್ರಕಟಿಸಿದರು. ಅರಣ್ಯ ಇಲಾಖೆ ರೈತರಿಗೆ ಉಚಿತವಾಗಿ ಸಸಿಗಳನ್ನು ನೀಡಲಿದ್ದು, ಅವುಗಳ ಸಂರಕ್ಷಣೆಯ ಜವಾಬ್ದಾರಿಯನ್ನು ರೈತರು ವಹಿಸಿಕೊಳ್ಳಬೇಕು ಎಂದು ಹೇಳಿದರು.
ಸುಮಾರು 20ರಿಂದ 25 ವರ್ಷಗಳ ನಂತರ ಮರಗಳು ಕಟಾವಿಗೆ ಬಂದಾಗ ದೊರೆಯುವ ಆದಾಯದಲ್ಲಿ ಶೇಕಡಾ 70ರಷ್ಟು ಪಾಲನ್ನು ರೈತರಿಗೆ ಮತ್ತು ಶೇಕಡಾ 30ರಷ್ಟು ಪಾಲನ್ನು ಸರ್ಕಾರಕ್ಕೆ ನೀಡುವಂತೆ ಅಧಿಕೃತ ಒಪ್ಪಂದ ರೂಪಿಸಲಾಗುವುದು ಎಂದು ವಿವರಿಸಿದರು.
ಮಲೆನಾಡಿಗೂ ಹೊಸ ಪ್ರವಾಸೋದ್ಯಮ ನೀತಿಯ ಪ್ರಯೋಜನ
ಕರಾವಳಿ ಪ್ರದೇಶದ ಜೊತೆಗೆ ಮಲೆನಾಡು ಮತ್ತು ಕಾಫಿನಾಡನ್ನೂ ಹೊಸ ಪ್ರವಾಸೋದ್ಯಮ ನೀತಿಯ ವ್ಯಾಪ್ತಿಗೆ ಸೇರಿಸಲಾಗಿದೆ. ಪರಿಸರವನ್ನು ಸಂರಕ್ಷಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು ಹಾಗೂ ಸ್ಥಳೀಯರಿಗೆ ಉದ್ಯೋಗ ಮತ್ತು ಹೂಡಿಕೆಯ ಅವಕಾಶಗಳನ್ನು ಕಲ್ಪಿಸುವುದು ಇದರ ಉದ್ದೇಶ ಎಂದು ಮುಖ್ಯಮಂತ್ರಿ ಹೇಳಿದರು.
ಜನರ ಅಹವಾಲುಗಳಿಗೆ ‘ಪ್ರಜಾಸೇವಾ ಇಲಾಖೆ’
ಸಾರ್ವಜನಿಕರ ಕುಂದುಕೊರತೆಗಳಿಗೆ ವ್ಯವಸ್ಥಿತವಾಗಿ ಪರಿಹಾರ ನೀಡಲು ‘ಪ್ರಜಾಸೇವಾ ಇಲಾಖೆ’ ಆರಂಭಿಸಲಾಗಿದೆ. ಸಚಿವರು ಪ್ರತಿ ತಿಂಗಳು ಎರಡು ದಿನ ತಾಲೂಕು ಮತ್ತು ಹೋಬಳಿ ಮಟ್ಟಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಬೇಕು. ಪ್ರತಿಯೊಂದು ಅರ್ಜಿಗೂ ಸ್ವೀಕೃತಿ ನೀಡಿ, ಅದನ್ನು ಗಣಕೀಕರಿಸಿ ಪರಿಹಾರದ ಪ್ರಗತಿಯನ್ನು ದಾಖಲಿಸುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

