ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು, ನವೀಕರಿಸಿದ ಪುಷ್ಕರಣಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇವಲ ಸರ್ಕಾರದ ಅನುದಾನವಷ್ಟೇ ಅಲ್ಲದೆ ಭಕ್ತರ ಬೆಂಬಲ ಮತ್ತು ಸಹಕಾರವೂ ಅತಿ ಮುಖ್ಯ ಎಂದರು.
₹ 28 ಕೋಟಿ ವೆಚ್ಚದ ಬೃಹತ್ ಯೋಜನೆ:
ದೇವಾಲಯದ ಆವರಣದಲ್ಲಿ ಪ್ರವಾಸಿ ಮಂದಿರ, ತಾಯಿ-ಮಗುವಿನ ವಿಶ್ರಾಂತಿ ಕೊಠಡಿ ಹಾಗೂ ಅಡುಗೆ ಮನೆ ನಿರ್ಮಾಣಕ್ಕಾಗಿ ಶಾಸಕರ ವಿಶೇಷ ಅನುದಾನದಡಿ ₹ 1 ಕೋಟಿ ಒದಗಿಸಲಾಗುವುದು. ಇದರ ಜೊತೆಗೆ, ಅಮ್ಮನಘಟ್ಟ ಮತ್ತು ಹಳೆ ಅಮ್ಮನಘಟ್ಟ ಸಂಪರ್ಕಿಸುವ ಕೇಬಲ್ ಸೇತುವೆ, ರಸ್ತೆಗಳ ಅಭಿವೃದ್ಧಿ, ಔಷಧಿವನ ಸಂರಕ್ಷಣೆ ಹಾಗೂ ಶಿಲಾಮಯ ಕಟ್ಟಡಕ್ಕೆ ಗಾಜಿನಮನೆ ನಿರ್ಮಾಣ ಸೇರಿದಂತೆ ಒಟ್ಟು 28 ಕೋಟಿ ರೂ. ಅಂದಾಜು ವೆಚ್ಚದ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವ ಭರವಸೆಯನ್ನು ಶಾಸಕರು ನೀಡಿದರು.

ಹಾಲಿ ವ್ಯವಸ್ಥಾಪನಾ ಸಮಿತಿಯ ಪಾರದರ್ಶಕ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ದೇವಸ್ಥಾನಕ್ಕೆ ಸೇರಿದ 24 ಎಕರೆ ಜಮೀನಿನ ಸರ್ವೆ ನಡೆಸಿ ಗಡಿ ಗುರುತಿಸುವ ಮೂಲಕ ಜೀರ್ಣೋದ್ಧಾರ ಕಾರ್ಯಗಳಿಗೆ ವೇಗ ನೀಡಲಾಗುವುದು ಎಂದು ತಿಳಿಸಿದರು.
ಮಳೆಗಾಗಿ ವಿಶೇಷ ಪ್ರಾರ್ಥನೆ:
ಮಲೆನಾಡಿನ ಹೆಬ್ಬಾಗಿಲು ಹೊಸನಗರ ತಾಲೂಕಿನಲ್ಲಿ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಗಿ ತಾಯಿ ಜೇನುಕಲ್ಲಮ್ಮನಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ ಶಾಸಕರು, ದೇವಿ ಪ್ರಾರ್ಥನೆಗೆ ಒಲಿದಿದ್ದು, ನಾಡಿನ ಹಾಗೂ ಕುಟುಂಬದ ಒಳಿತಿಗಾಗಿ ಭಕ್ತರೂ ದೇವಿಯಲ್ಲಿ ಬೇಡಿಕೊಳ್ಳುವಂತೆ ಅವರು ಮನವಿ ಮಾಡಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಶಾಸಕರ ವಿಶೇಷ ಮುತುವರ್ಜಿಯಿಂದ ದೇವಾಲಯದ ಅಭಿವೃದ್ಧಿ ಕಾರ್ಯಗಳು ಚುರುಕುಗೊಂಡಿವೆ ಎಂದು ಅಭಿನಂದಿಸಿದರು. ಸ್ಥಳೀಯರ ಸಾಂಸ್ಕೃತಿಕ ಹಾಗೂ ಧಾರ್ಮಿಕ ನಂಬಿಕೆಯ ಪ್ರತೀಕವಾಗಿರುವ ಈ ಜಾತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 25 ಸಾವಿರಕ್ಕೂ ಅಧಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಗೆ ಹಣ್ಣು-ಕಾಯಿ ಸಮರ್ಪಿಸಿ ದರ್ಶನ ಪಡೆದರು.
ಕಾರ್ಯಕ್ರಮದಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳು, ಜಾತ್ರಾ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

