ಬಾಳೆಹೊನ್ನೂರು ; ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು. ಮನುಷ್ಯರಲ್ಲಿ ವೈಚಾರಿಕ ಮನೋಭಾವನೆಗಳು ಬೆಳೆದು ಬರಲಿ ಆದರೆ ನಾಸ್ತಿಕ ಮನೋಭಾವ ಬೆಳೆಯಬಾರದು ಎಂದು ವಿ.ಆರ್.ಎಲ್. ಸಮೂಹ ಸಂಸ್ಥೆ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹೇಳಿದರು.
ಅವರು ಬುಧವಾರ ಬೆಳಿಗ್ಗೆ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಸಂದರ್ಭದಲ್ಲಿ ಜರುಗಿದ ಶಿವಾದ್ವೈತ ಸಮಾವೇಶ ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹುಟ್ಟು-ಸಾವು ಯಾರನ್ನೂ ಬಿಟ್ಟಿಲ್ಲ. ಇವುಗಳ ಮಧ್ಯದ ಬದುಕು ಸಮೃದ್ಧಗೊಳ್ಳಲು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಚಾರಧಾರೆಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಸಂಸ್ಕಾರ ಸಂಸ್ಕೃತಿಯಿಂದ ಮಾನವ ಬದುಕು ಶ್ರೀಮಂತಗೊಳ್ಳುತ್ತದೆ. ಹೆತ್ತ ತಾಯಿ ಹೊತ್ತ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಧರ್ಮ ಮುಖ್ಯ. ವೀರಶೈವ ಲಿಂಗಾಯತ ಧರ್ಮ ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶವನ್ನು ಕಲ್ಪಿಸಿಕೊಟ್ಟ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಮತ್ತು ಬಸವಾದಿ ಶರಣರಿಗೆ ಸಲ್ಲುತ್ತದೆ. ವೀರಶೈವ ಒಳ ಪಂಗಡಗಳು ಒಗ್ಗಟ್ಟಾಗಿ ಹೋಗಬೇಕು ಎಂದರು.
ಶಾಂತಿ ನೆಮ್ಮದಿಯ ಬದುಕಿಗೆ ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರ ; ರಂಭಾಪುರಿ ಜಗದ್ಗುರುಗಳು
ಭಾವೈಕ್ಯತೆ ಮತ್ತು ಆಧ್ಯಾತ್ಮ ಭಾರತದ ಉಸಿರು. ಸಾತ್ವಿಕ ತಾತ್ವಿಕ ಹಿತ ಚಿಂತನಗಳನ್ನು ಬೆಳೆಸುವುದರ ಮೂಲಕ ಭಾವೈಕ್ಯತೆಯ ಸೇತುವೆಯನ್ನು ಕಟ್ಟಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಾಂತಿ ನೆಮ್ಮದಿಯ ಬದುಕಿಗೆ ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರವಾದುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಾಹಿತ್ಯ ಸಂಸ್ಕೃತಿ ಈ ನಾಡಿನ ಅಮೂಲ್ಯ ಸಂಪತ್ತು. ಸಂಪತ್ತು ಬೆಳೆದಂತೆ ಸಂಸ್ಕೃತಿ ಸಭ್ಯತೆ ಬೆಳೆದುಕೊಂಡು ಬರಬೇಕು. ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡುವುದೇ ಮಹಾತ್ಮರ ಜೀವನದ ಗುರಿಯಾಗಿದೆ. ಮೌಲ್ಯಾಧಾರಿತ ಬದುಕಿಗೆ ಶ್ರೀ ರೇಣುಕಾಚಾರ್ಯರು ಕೊಟ್ಟ ದಶ ಧರ್ಮ ಸೂತ್ರಗಳು ಆಶಾಕಿರಣವಾಗಿವೆ. ಮಾನವೀಯ ಮೌಲ್ಯಗಳ ಸಂವರ್ಧನೆ ಮತ್ತು ಸಾಮಾಜಿಕ ಸತ್ಕ್ರಾಂತಿಯ ಆದರ್ಶಗಳನ್ನು ಎತ್ತಿ ಹಿಡಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಮಹಾಮುನಿ ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶಿಖಾಮಣಿಯ ತತ್ವ ಸಿದ್ಧಾಂತಗಳು ಮನದ ನೆಮ್ಮದಿಗೆ ಮತ್ತು ಉನ್ನತಿಗೆ ಮೂಲ ಸೆಲೆಯಾಗಿವೆ. ಯುಗಪುರಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ಚಿಂತನಗಳು ಸರ್ವರ ಬಾಳಿಗೆ ಭಾಗ್ಯೋದಯಕ್ಕೆ ಭದ್ರ ಅಡಿಪಾಯವಾಗಿವೆ. ಅಂತರಂಗ ಬಹಿರಂಗ ಶುದ್ಧಿಯಿಂದ ಶಿವಾದ್ವೈತ ಸಿದ್ಧಾಂತವನ್ನು ಭದ್ರಗೊಳಿಸಿದ ಅವರ ಸತ್ಕಾರ್ಯ ಮರೆಯಲಾಗದು. ಸಾವಯವ ಕೃಷಿಯಲ್ಲಿ ಬಹು ಶ್ರಮಿಸಿದ ರೈತರ ಉಜ್ವಲ ಬದುಕಿಗೆ ಹೊಸ ಶಕ್ತಿ ತುಂಬಿದ ಕವಿತಾಳದ ಡಾ|| ಕವಿತಾ ಮಿಶ್ರಾ ಅವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿ ದಯಪಾಲಿಸಿರುವುದು ತಮಗೆ ಸಂತೃಪ್ತಿ ತಂದು ಕೊಟ್ಟಿದೆ. ವೀರಶೈವ ರೇಣುಕ ರೇವಣಸಿದ್ಧ ಸತ್ಯ ದರ್ಶನ ಕೃತಿಯಲ್ಲಿ ಡಾ|| ಚನ್ನಬಸವಯ್ಯ ಹಿರೇಮಠ ಅವರು ಸತ್ಯದ ತಳಹದಿಯ ಮೇಲೆ ಧರ್ಮ ಸಂಸ್ಕೃತಿಯ ಸಂವರ್ಧನೆಗೆ ಅಮೂಲ್ಯವಾದ ಕೊಡುಗೆ ಕೊಟ್ಟಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ನಾಡಿನಾದ್ಯಂತ ಆಚರಿಸುತ್ತಿರುವುದು ಸಂತಸ ಸಂಗತಿ ಎಂದರು.
ಪ್ರಶಸ್ತಿ ಸ್ವೀಕರಿಸಿದ ಡಾ|| ಕವಿತಾ ಮಿಶ್ರಾ ಮಾತನಾಡಿ, ಕ್ರಿಯಾಶೀಲ ಬದುಕು ಜೀವನದ ಶ್ರೇಯಸ್ಸಿಗೆ ಮೂಲ. ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಮ್ಮೆಲ್ಲರ ಗುರಿಯಾಗಬೇಕು. ಭೂ ತಾಯಿ ಮಡಿಲಲ್ಲಿ ಬೆವರು ಸುರಿಸಿದ ವ್ಯಕ್ತಿಯ ಬಾಳು ವಿಕಾಸಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಕಾಯಕ ಜೀವನ ಜೀವನಕ್ಕೆ ಚೈತನ್ಯ ಶಕ್ತಿಯನ್ನು ಕೊಡುವುದೆಂಬ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಿರಿವಾಣಿ ನನ್ನ ಬದುಕಿನಲ್ಲಿ ಕಂಡುಕೊಂಡಿದ್ದೇನೆ. ಕೃಷಿ ಪ್ರಾರಂಭದಲ್ಲಿ ಕಷ್ಟ ಎನಿಸಿದರೂ ನಿರಂತರ ಶ್ರಮ ಸಾಧನೆಯಿಂದ ಉಜ್ವಲ ಭವಿಷ್ಯ ರೂಪಿತಗೊಳ್ಳುತ್ತದೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಶ್ರೀ ರಂಭಾಪುರಿ ಜಗದ್ಗುರುಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಅತ್ಯುನ್ನತ ಪ್ರಶಸ್ತಿಯನ್ನು ನನಗೆ ಕರುಣಿಸಿರುವುದು ಪೂರ್ವಾರ್ಜಿತ ಪುಣ್ಯದ ಫಲವೆಂದು ಭಾವಿಸುತ್ತೇನೆ. ಈ ಪ್ರಶಸ್ತಿ ನಾಡಿನ ರೈತ ಮಹಿಳೆಯರಿಗೆ ಹಾಗೂ ಈ ನಾಡಿನ ಮಣ್ಣಿಗೆ ಸಲ್ಲುತ್ತದೆ. ರೈತರು ಧೈರ್ಯ ಕಳೆದುಕೊಳ್ಳದೇ ದುಡಿಮೆಯಿಂದ ಜೀವನದಲ್ಲಿ ಉನ್ನತಿಯನ್ನು ಕಾಣುವಂತಹ ದಾರಿಯಲ್ಲಿ ಮುನ್ನಡೆದು ಆದರ್ಶ ಬದುಕು ಕಟ್ಟಿಕೊಳ್ಳಲು ಸಂಕಲ್ಪ ಮಾಡಬೇಕು. ದಿನ ದಿನಕ್ಕೆ ಭೂಮಿಯ ಬೆಲೆ ಹೆಚ್ಚುತ್ತಿದ್ದು ಭೂಮಿ ಉಳ್ಳವರು ಭೂಮಿಯನ್ನು ಯಾವುದೇ ಕಾರಣಕ್ಕೆ ಮಾರಬೇಡಿರಿ. ಉತ್ತಮ ಬೆಳೆ ಅದರಲ್ಲೂ ವಿಶೇಷವಾಗಿ ಶ್ರೀಗಂಧ ಬೆಳೆಯುವ ಮೂಲಕ ಪ್ರತಿಯೊಬ್ಬ ರೈತನೂ ಕೋಟಿ ಕೋಟಿಗಳ ಒಡೆಯನಾಗಬೇಕೆಂಬುದು ನನ್ನ ಆಶಯವಾಗಿದೆ ಎಂದರು.

ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವೀರಶೈವ ರೇಣುಕ ರೇವಣಸಿದ್ಧ ಸತ್ಯ ದರ್ಶನ ಕೃತಿಯನ್ನು ಮಾಡಿದ ಆಧ್ಯಾತ್ಮ ತತ್ವ ಚಿಂತಕ ಸಂಶೋಧಕ ಡಾ||ಎ.ಸಿ.ವಾಲಿ ಬಿಡುಗಡೆ ಮಾಡಿದರು.
ವೀರಶೈವ ರೇಣುಕ ರೇವಣಸಿದ್ಧ ಸತ್ಯ ದರ್ಶನ ಕೃತಿ ಬಿಡುಗಡೆ ಮಾಡಿದ ಆಧ್ಯಾತ್ಮ ತತ್ವ ಚಿಂತಕ ಸಂಶೋಧಕ ಡಾ|| ಎ.ಸಿ.ವಾಲಿ ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಶತಮಾನ ಪುರುಷರಲ್ಲ. ಯುಗಪುರುಷರು. ಜಾತಿ ಜನಾಂಗಗಳ ಗಡಿ ಮೀರಿ ಮಾನವೀಯ ಉದಾತ್ತ ಮೌಲ್ಯಗಳನ್ನು ಪ್ರತಿಪಾದಿಸಿದ ಪರಮಾಚಾರ್ಯರು. ಅಂಗ ಅವಗುಣಗಳನ್ನು ಸಂಸ್ಕಾರದ ಮೂಲಕ ದೂರ ಮಾಡಿ ಸಮೃದ್ಧ ಬದುಕಿಗೆ ಶ್ರೀಕಾರ ಹಾಕಿದ ಇತಿಹಾಸ ಪುರುಷರು. ಪುಟ ಮತ್ತು ಪುಸ್ತಕ ಬದಲಿಸಬಹುದು. ಆದರೆ ಇತಿಹಾಸವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮವರೇ ನಮಗೆ ವೈರಿಗಳಾಗಿ ಬಾಳುತ್ತಿರುವುದು ನೋವಿನ ಸಂಗತಿ. ಏಕಾಕ್ಷರ ಶಿವಾಚಾರ್ಯರಾಗಿ ಏಕವಕ್ತ್ರ ಶಿವಾಚಾರ್ಯರಾಗಿ ರೇಣುಕಾಚಾರ್ಯರಾಗಿ ಮತ್ತೆ ಕಲಿಯುಗದಲ್ಲಿ ರೇವಣಸಿದ್ಧರಾಗಿ ಅವತರಿಸಿ ಜನಮನದ ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನ ದೀವಿಗೆ ಬೆಳಗಿಸಿದ ಚಿತ್ಸೂರ್ಯರು. ಕೃತಿಕಾರರಾದ ರಾಯಚೂರಿನ ಡಾ|| ಚನ್ನಬಸವಯ್ಯ ಹಿರೇಮಠ ಅವರು ಬಹಳಷ್ಟು ಶ್ರಮ ವಹಿಸಿ ಹಲವು ಹತ್ತು ಸಂಶೋಧನೆ ಅಂಶಗಳನ್ನು ಇಟ್ಟುಕೊಂಡು ರಚಿಸಿದ ಈ ಕೃತಿ ನಮ್ಮೆಲ್ಲರ ಬಾಳ ಬದುಕಿನಲ್ಲಿ ಹೊಸ ಶಕ್ತಿ ತಂದುಕೊಡುವುದೆಂಬ ಆತ್ಮ ವಿಶ್ವಾಸ ನನಗಿದೆ. ಇಂಥ ಅಮೂಲ್ಯ ಕೃತಿ ಬಿಡುಗಡೆ ಭಾಗ್ಯ ನನಗೆ ಪ್ರಾಪ್ತವಾಗಿರುವುದು ಮಹಾಗುರುವಿನ ಕರುಣೆಯೇ ಕಾರಣವೆಂದು ಹರುಷ ವ್ಯಕ್ತಪಡಿಸಿದರು. ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮುಕ್ತಿಮಂದಿರ ಕ್ಷೇತ್ರ ಹಾಗೂ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಇವರು ನೇತೃತ್ವ ವಹಿಸಿದ್ದರು.
ಪ್ರತಿಷ್ಠಿತ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ರಾಯಚೂರು ಜಿಲ್ಲೆ ಕವಿತಾಳ ಗ್ರಾಮದ ಸಾವಯವ ಕೃಷಿ ತಜ್ಞೆ ಡಾ|| ಕವಿತಾ ಮಿಶ್ರಾ ಇವರಿಗೆ ಪ್ರದಾನ ಮಾಡಲಾಯಿತು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಚಿವ ಡಾ.ಎಂ.ಬಿ. ಪಾಟೀಲರ ಸುಪುತ್ರ ಬಸನಗೌಡ ಪಾಟೀಲ ಮಾತನಾಡಿ, 1901ರಲ್ಲಿ ಸ್ಥಾಪಿತಗೊಂಡ ಅ.ಭಾ.ವೀರಶೈವ ಮಹಾಸಭೆಯ ನಿರ್ಣಯದಂತೆ ಎಲ್ಲ ವೀರಶೈವ ಲಿಂಗಾಯತರು ಒಗ್ಗೂಡಿಕೊಂಡು ಹೋಗಬೇಕು. ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ನಿರಂತರ ಪ್ರವಾಸದ ಮೂಲಕ ಜನ ಜಾಗೃತಿ ಧರ್ಮ ಜಾಗೃತಿ ಕಾರ್ಯ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೆಂದರು.
ಮುಖ್ಯ ಅತಿಥಿಗಳಾಗಿ ರೋಣ ಶಾಸಕ ಜಿ.ಎಸ್.ಪಾಟೀಲ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರು, ಕೊಡ್ಲಿಪೇಟೆ ರಾಜೇಶ್ವರಿ ನಾಗರಾಜ್, ಶಿವಮೊಗ್ಗದ ಎಸ್.ಎಸ್.ಜ್ಯೋತಿಪ್ರಕಾಶ್ ಭಾಗವಹಿಸಿದ್ದರು.
ಪಡಸಾವಳಿ-ಉದ್ಗಿರಿ ಕ್ಷೇತ್ರದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ರಾಯಚೂರು ಜಿಲ್ಲೆ ಕವಿತಾಳದ ಡಾ|| ಕವಿತಾ ಮಿಶ್ರಾ ಇವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಕು. ಜಿ.ಜಿ. ರಕ್ಷಿತಾ ಶಿವಮೊಗ್ಗ ಇವರು ಭರತ ನಾಟ್ಯ ಪ್ರದರ್ಶಿಸಿದರು.
ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ ಸ್ವಾಗತಿಸಿದರು. ಎಂ.ಸಂಗಮೇಶ ಉತ್ತಂಗಿ ಇವರಿಂದ ಪ್ರಾರ್ಥನೆ, ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.