ರಿಪ್ಪನ್‌ಪೇಟೆ : ಮಾಜಿ ಸಚಿವ ಸಿ.ಟಿ. ರವಿ ಸವಿತಾ ಸಮಾಜದ ಸದಸ್ಯರ ಕುರಿತು ಅವಹೇಳನಕಾರಿ ಪದ ಬಳಸಿರುವ ಆರೋಪದ ಹಿನ್ನೆಲೆ, ಸವಿತಾ ಸಮಾಜದ ಸದಸ್ಯರು ಕಿಡಿಕಾರಿದ್ದಾರೆ.
ಸಮಾಜದ ಅಧ್ಯಕ್ಷ ಸಿದ್ದೇಶ್ ಭಂಡಾರಿ ಮಾತನಾಡುತ್ತಾ, “ಒಂದು ಜನಾಂಗದ ಗೌರವಕ್ಕೆ ಧಕ್ಕೆಯಾದಂತೆ ಮಾಜಿ ಸಚಿವರು ಹೇಳಿಕೆ ನೀಡಿರುವುದು ಖಂಡನೀಯ. ಸಿ.ಟಿ. ರವಿ ಅವರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆಗೆ ಸಿದ್ಧರಾಗಿದ್ದೇವೆ” ಎಂದು ಎಚ್ಚರಿಕೆ ನೀಡಿದರು.
ಸಮಾಜದ ಪ್ರತಿನಿಧಿಗಳು ನಾಡಕಚೇರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಸಿ.ಟಿ. ರವಿ ಅವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. “ಈ ರೀತಿಯ ಮಾತುಗಳು ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆಯುಂಟುಮಾಡುತ್ತವೆ,” ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಸವಿತಾ ಸಮಾಜದ ಕಾರ್ಯದರ್ಶಿ ಸುನೀಲ್‌ಕುಮಾರ್ ವೈ.ಎಸ್., ಪದಾಧಿಕಾರಿಗಳಾದ ಕೆ.ಎನ್. ಮಂಜುನಾಥ್, ಬಾಲರಾಜ್, ರಾಜೇಶ್, ಅರುಣ, ವಾಸು, ಸತೀಶ್, ಚಿರಂತ್, ಪಾಂಡುರಂಗ, ಮಂಜುನಾಥ್ ಬೈರಾಪುರ ಹಾಗೂ ಇತರರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





