ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್ ದುಸ್ಥಿತಿ ಕಂಡು ಗ್ರಾಹಕರ ಆಕ್ರೋಶ

Written by malnadtimes.com

Published on:

ರಿಪ್ಪನ್‌ಪೇಟೆ ; ಇಲ್ಲಿನ ಕೆನರಾ ಬ್ಯಾಂಕ್ ಶಾಖೆ ಖಾಸಗಿ ಕಟ್ಟಡದಲ್ಲಿದ್ದು ಗ್ರಾಹಕರಿಗೆ ಸೇವಾ ಸೌಲಭ್ಯವನ್ನು ಕಲ್ಪಿಸುತ್ತಿದ್ದು ಆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಗ್ರಾಹಕರು ಛತ್ರಿ ಹಿಡಿದುಕೊಂಡು ನಗದು ಹಣ ಪಡೆಯಲು ಬ್ಯಾಂಕ್ ಒಳಗೆ ಹೋಗುವ ಸ್ಥಿತಿಯಾದರೆ, ಬೇಸಿಗೆಯಲ್ಲಿ ಕಟ್ಟಡದ ಮೇಲ್ಚಾವಣಿಯ ಸಿಮೆಂಟ್ ಕಾಂಕ್ರಿಟ್ ಗ್ರಾಹಕರ ತಲೆ ಮೇಲೆ ಎಲ್ಲಿ ಉದುರಿ ಬೀಳುತ್ತದೋ ಎಂಬ ಭಯದಲ್ಲಿ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬ್ಯಾಂಕ್ ಒಳಗೆ ಹೋಗುವ ಸ್ಥಿತಿ ಗ್ರಾಹಕರದಾಗಿದೆ ಎಂದು ಕೆನರಾ ಬ್ಯಾಂಕ್ ಗ್ರಾಹಕ ಮಲ್ಲಾಪುರ ಎಂ.ವೈ.ನಾಗರಾಜ ಮತ್ತು ನೇರಲುಮನೆ ಸುಬ್ಬಣ್ಣ, ಜನಪರ ಹೋರಾಟ ಸಮಿತಿ ಅಧ್ಯಕ್ಷ ಆರ್.ಎನ್.ಮಂಜುನಾಥ, ರೈತ ಮುಖಂಡ ಕುಕ್ಕಳಲೆ ಈಶ್ವರಪ್ಪಗೌಡ ಆರೋಪಿಸಿದರು.

WhatsApp Group Join Now
Telegram Group Join Now
Instagram Group Join Now

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿತ್ಯ ಸಹಸ್ರಾರು ಗ್ರಾಹಕರು ಬ್ಯಾಂಕ್ ವ್ಯವಹಾರಕ್ಕಾಗಿ ಬರುತ್ತಿದ್ದು ಇಲ್ಲಿನ ದುಸ್ಥಿತಿಯಲ್ಲಿರುವ ಕಟ್ಟಡದ ಒಳಗೆ ಹೋಗುವ ಮುನ್ನ ಮೇಲೆ ನೋಡಿಕೊಂಡು ಒಳಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನೂ ಮಳೆಗಾಲದಲ್ಲಿ ಹಣ ಪಡೆಯಲು ಸಹ ಹೋಗುವ ಮುನ್ನ ಛತ್ರಿ ಹಿಡಿದುಕೊಂಡೆ ಹೋಗಬೇಕು. ಬ್ಯಾಂಕಿಗೆ ಲಕ್ಷಾಂತರ ರೂ. ವೆಚ್ಚದ ಗಣಕ ಯಂತ್ರಗಳನ್ನು ಅಳವಡಿಸಲಾಗಿದ್ದು ಮಳೆಗಾಲದಲ್ಲಿ ನೀರು ಸುರಿಯುವ ಕಾರಣ ಮತ್ತು ತೊಟ್ಟಿಕುವ ಹನಿಗಳಿಂದಾಗಿ ಕಂಪ್ಯೂಟರ್‌ಗಳು ಸಹ ಹಾಳಾಗುವ ಹಂತದಲ್ಲಿವೆ. ಇಷ್ಟಾದರೂ ಕೂಡಾ ಬ್ಯಾಂಕ್ ಮೇಲಾಧಿಕಾರಿಗಳು ಇತ್ತ ಗಮನಹರಿಸುವಲ್ಲಿ ನಿರ್ಲಕ್ಷ್ಯದಿಂದಿದ್ದಾರೇನೋ ಎಂಬ ಸಂಶಯ ಗ್ರಾಹಕರನ್ನು ಕಾಡುವಂತಾಗಿದೆ.

ಸ್ಥಳಾಂತರಕ್ಕೆ ಆಗ್ರಹ ;

ದುಸ್ಥಿತಿಯಲ್ಲಿರುವ ಕೆನರಾ ಬ್ಯಾಂಕ್ ಕಟ್ಟಡವನ್ನು ಮಳೆಗಾಲಕ್ಕೂ ಮುನ್ನವೇ ಸ್ಥಳಾಂತರ ಮಾಡುವಂತೆ ಮೇಲಾಧಿಕಾರಿಗಳಿಗೆ ಆಗ್ರಹಿಸಲಾಗಿದ್ದು ಇನ್ನೂ ಈ ಬಾರಿ ಮಳೆಗಾಲದಲ್ಲಿ ಗ್ರಾಹಕರು ಬ್ಯಾಂಕ್ ಒಳಗೆ ಪ್ರವೇಶಿಸುವ ಮುನ್ನ ಯೋಚಿಸಿ ಒಳಗೆ ಕಾಲು ಇಡಬೇಕಾದರೆ ಅಲ್ಲಿನ ಸಿಬ್ಬಂದಿಗಳು ಸಹ ಯಾವ ಧೈರ್ಯ ಮಾಡಿಕೊಂಡು ಕುಳಿತು ಗ್ರಾಹಕರ ಸೇವೆ ಮಾಡಬೇಕು ಎಂದು ಗ್ರಾಹಕರು ಯೋಚಿಸುವಂತಾಗಿದೆ.

ಒಟ್ಟಾರೆಯಾಗಿ ಇಲ್ಲಿನ ಕೆನರಾ ಬ್ಯಾಂಕ್ ಕಚೇರಿಯನ್ನು ಕೂಡಲೇ ಸ್ಥಳಾಂತರ ಮಾಡಿ ಗ್ರಾಹಕರ ಮತ್ತು ಸಿಬ್ಬಂದಿಗಳಿಗೆ ಮುಂದಾಗುವ ಅಪಾಯವನ್ನು ತಪ್ಪಿಸಲು ಮುಂದಾಗುವಂತೆ ಕೆನರಾ ಬ್ಯಾಂಕ್ ಗ್ರಾಹಕ ಮಲ್ಲಾಪುರ ಎಂ.ವೈ.ನಾಗರಾಜ ಮತ್ತು ನೇರಲುಮನೆ ಸುಬ್ಬಣ್ಣ, ಜನಪರ ಹೋರಾಟ ಸಮಿತಿ ಅಧ್ಯಕ್ಷ ಆರ್.ಎನ್.ಮಂಜುನಾಥ, ರೈತ ಮುಖಂಡ ಕುಕ್ಕಳಲೆ ಈಶ್ವರಪ್ಪಗೌಡ ಆಗ್ರಹಿಸಿದ್ದಾರೆ.

ಕಳೆದ ಬಾರಿ ಮಳೆಗಾಲದಲ್ಲಿ ಬ್ಯಾಂಕ್ ಕಟ್ಟಡದ ಮೇಲೆ ಪ್ಲಾಸ್ಟಿಕ್ ಟಾರ್ಪಲ್ ಸಹ ಅಳವಡಿಸಿಕೊಂಡಿದ್ದ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Leave a Comment