ಹೊಸನಗರ ; ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆಗೆ ಒತ್ತಾಯಿಸಿ ಸೈಕಲ್ ಜಾಥಾ ನಡೆಸಿ ತಾಲ್ಲೂಕಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಕರುಣಾಕರ ಶೆಟ್ಟಿ ತಿಳಿಸಿದರು.
ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಿಗೆ ಸೈಕಲ್ ಮೂಲಕ ಭೇಟಿ ನೀಡಿ ಅಲ್ಲಿನ ಜನರಲ್ಲಿ ಕ್ಷೇತ್ರ ಮರು ಸ್ಥಾಪನೆ ಹೋರಾಟದ ಕಿಚ್ಚನ್ನು ಬಿತ್ತುವ ಕೆಲಸ ಕೈಗೊಂಡಿರುವುದಾಗಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಜ.19ರಂದು ಸೋಮವಾರದಿಂದ ಸೈಕಲ್ ಯಾತ್ರೆ ಆರಂಭವಾಗಲಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿ ನಿರ್ಣಯಗಳನ್ನು ಕೈಗೊಂಡು ಸರ್ಕಾರದ ಗಮನ ಸೆಳೆಯಲು ಮನವಿ ಮಾಡಲಾಗುವುದು ಎಂದರು.

ಪಶ್ಚಿಮಘಟ್ಟದ ಕಣಿವೆಗಳಲ್ಲಿ ಸ್ಥಿತವಾಗಿರುವ ಹೊಸನಗರ ತಾಲ್ಲೂಕು ಪ್ರಕೃತಿ ಸಂಪನ್ನ ಪ್ರದೇಶವಾಗಿದ್ದರೂ, ಜಲವಿದ್ಯುತ್ ಯೋಜನೆಗಳಿಗಾಗಿ ನಿರ್ಮಾಣಗೊಂಡ ಐದು ಸಣ್ಣ ಡ್ಯಾಂಗಳಿಂದ ಅನೇಕ ಕುಟುಂಬಗಳು ಮನೆ ಮತ್ತು ಭೂಮಿ ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಇದರ ಪರಿಣಾಮವಾಗಿ ಜನಸಂಖ್ಯೆ ಕುಸಿತಗೊಂಡಿದ್ದು, ಅಭಿವೃದ್ಧಿಯ ವೇಗವೂ ಹಿಂದುಳಿದಿದೆ ಎಂದರು.
ತಾಲ್ಲೂಕು ಕೇಂದ್ರವಾಗಿದ್ದ ಹೊಸನಗರವು ಈ ಹಿಂದೆ ನಡೆದ ಕ್ಷೇತ್ರ ವಿಂಗಡಣೆಯ ಸಂದರ್ಭದಲ್ಲಿ ತನ್ನ ವಿಧಾನಸಭಾ ಕ್ಷೇತ್ರ ಸ್ಥಾನಮಾನವನ್ನು ಕಳೆದುಕೊಂಡಿತು. ಇದರಿಂದ ಇಲ್ಲಿನ ಜನರಿಗೆ ಪ್ರಜಾಪ್ರಭುತ್ವದ ಪ್ರತಿನಿಧಿತ್ವವೇ ಇಲ್ಲದಂತಾಗಿದೆ. ಅಭಿವೃದ್ಧಿಗೆ ಕ್ಷೇತ್ರ ಬೇಕು, ಪ್ರಶ್ನಿಸಲು ಕ್ಷೇತ್ರ ಬೇಕು, ವಿಧಾನಸಭೆಯಲ್ಲಿ ಧ್ವನಿ ಎತ್ತಲು ಕ್ಷೇತ್ರ ಬೇಕು. ನಮ್ಮ ಅಸ್ತಿತ್ವಕ್ಕಾಗಿ ಆದರೂ ಕ್ಷೇತ್ರ ಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





