ರಿಪ್ಪನ್‌ಪೇಟೆ ; ಜಾನುವಾರುಗಳನ್ನು ಸಾಕಾಣಿಕೆ ಮಾಡುವುದರಿಂದಾಗಿ ಹಾಲು ಉತ್ಪಾದನೆಯೊಂದಿಗೆ ಹಾಲು ಮಾರಾಟ ಮಾಡುವುದು ಮತ್ತು ಜಾನುವಾರಿನ ಸಗಣಿಯಿಂದಾಗಿ ಅಡಿಕೆ ತೋಟಕ್ಕೆ ಹಾಗೂ ಇನ್ನಿತರ ಬೆಳೆಗಳಿಗೆ ಗೊಬ್ಬರವಾಗುವುದು ಇದರಿಂದಾಗಿ ರೈತರ ಬದುಕು ಹಸನಾಗುವುದೆಂದು ಶಿಮುಲ್ ಅಧ್ಯಕ್ಷ ವಿದ್ಯಾಧರ ಹೇಳಿದರು.
ಬೆಳ್ಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಗಾಮನಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶಿವಮೊಗ್ಗ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ಶಿವಮೊಗ್ಗ-ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಬೆಳ್ಳೂರು ಗ್ರಾಮ ಪಂಚಾಯ್ತಿ ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ ಹಾಲು ಕರೆಯುವ ಸ್ಪರ್ಧೆ ಉಚಿತ ಜಾನುವಾರು ಚಿಕಿತ್ಸಾ ಶಿಬಿರ ರೇವಿಸ್ ಲಸಿಕಾ ಶಿಬಿರವನ್ನು ಗೋಪೂಜೆ ಹಾಗೂ ಗೋಗ್ರಾಸವನ್ನು ನೀಡುವುದರೊಂದಿಗೆ ಉದ್ಘಾಟಿಸಿ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ರೈತರು ತೊಡಗಿಕೊಳ್ಳಬೇಕು. ಕೆ.ಎಂ.ಎಫ್. ಸಂಸ್ಥೆ ನಷ್ಟದಲ್ಲಿದ್ದರು ರೈತರಿಗೆ ಹಾಲಿನ ದರವನ್ನು ಕಡಿಮೆ ಮಾಡಿಲ್ಲ ಎಂದು ಹೇಳಿ ಮಲೆನಾಡಿನ ವ್ಯಾಪ್ತಿಯಲ್ಲಿ ಮಲೆನಾಡ ಗಿಡ್ಡಗಳ ಸಂತಾನ ಕ್ಷೀಣಿಸುತ್ತಿದ್ದು ಸರ್ಕಾರ ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರೂ ಕೂಡಾ ಜಾನುವಾರುಗಳಲ್ಲಿ ಸಹ ಮಾರಕ ರೋಗದಿಂದಾಗಿ ಸಾವನ್ನಪ್ಪಿರುವುದರಿಂದ ರೈತರಲ್ಲಿ ಆತಂಕ ಮನೆಮಾಡುವಂತಾಗಿದೆ. ತಾವು ಜಾನುವಾರುಗಳಿಗೆ ವಿಮೆ ಮಾಡಿಸಿದಲ್ಲಿ ಇಂತಹ ಅನಾಹುತಗಳು ಸಂಭವಿಸಿದರೆ ಪರಿಹಾರ ದೊರೆಯುವುದು ಎಂದು ಹೇಳಿ ಯಾವುದೇ ರೈತರು ಧೃತಿಗೆಡದೆ ಧೈರ್ಯದಿಂದ ಹೈನುಗಾರಿಕೆಯಲ್ಲಿ ಆರ್ಥಿಕ ಸ್ವಾವಲಂಬಿಗಳಾಗಲು ಸಹಕಾರಿಯಾಗಿದೆ ಎಂದು ಕರೆ ನೀಡಿದರು.
ಹೊಸನಗರ ತಾಲ್ಲೂಕು ಪಶು ಇಲಾಖೆಯ ಪ್ರಭಾರ ಮುಖ್ಯ ಪಶುವೈದ್ಯಾಧಿಕಾರಿ ಡಾ. ಸಿ.ವಿ.ಸಂತೋಷ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೈನುಗಾರಿಕೆ ವೃತ್ತಿಯಲ್ಲಿ ರೈರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಹಾಗೂ 2030 ರೊಳಗೆ ಭಾರತ ದೇಶವನ್ನು ರೇಬಿಸ್ ಮುಕ್ತ ರಾಷ್ಟ್ರವಾಗಿ ನಿರ್ಮಾಣ ಮಾಡಬೇಕೆಂದು ಹೇಳಿದರು.

ಈ ಶಿಬಿರದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಅರಣಕಟ್ಟೆ, ಪಲ್ಲವಿ ನಾಗರಾಜ, ಗಾಮನಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ಪಾಲ್ಗೊಂಡಿದ್ದರು.
ಪಶು ತಜ್ಞ ವೈದ್ಯಾಧಿಕಾರಿಗಳಾದ ಡಾ.ಫಣಿರಾಜ್, ಡಾ.ಧನಂಜಯ, ಡಾ.ಮನೋಜ್, ಡಾ.ದಯಾನಂದ್, ಸಿದ್ದೇಶ್, ಡಾ. ವಿನಯಕುಮಾರ್, ಡಾ. ನಿರಂಜನಮೂರ್ತಿ, ಇಲಾಖೆಯ ಗುತ್ತಿಗೆ ಪಶುವೈದ್ಯರಾದ ಡಾ.ಅರ್ಚನ, ಡಾ. ಲಾವಣ್ಯ, ಸಿಬ್ಬಂದಿಗಳಾದ ಧನಂಜಯ, ಲಿಂಗರಾಜ್, ರಂಗಪ್ಪ, ರಮೇಶ, ನಾಗೇಂದ್ರ, ಕೇಶವ, ಶೃತಿ, ಕೇಶವಕುಮಾರ್, ಸಂತೋಷ, ಪಶುಗಳ ತಪಾಸಣೆ ಮತ್ತು ಚಿಕಿತ್ಸೆಯನ್ನು ಮಾಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





