ರಿಪ್ಪನ್‌ಪೇಟೆ: ದೀಪಾವಳಿ ಹಬ್ಬದ ಆಗಮನದೊಂದಿಗೆ ಮಲೆನಾಡಿನ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಶ್ರಮಜೀವಿಗಳ ಬದುಕನ್ನು ಬೆಳಗುವ ಈ ಹಬ್ಬಕ್ಕಾಗಿ ಹದಿನೈದು ದಿನಗಳ ಮುಂಚಿತವಾಗಿಯೇ ಸಿದ್ಧತೆಗಳು ಗರಿಗೆದರುತ್ತವೆ. ಮನೆ, ಅಂಗಳ ಹಾಗೂ ದನದ ಕೊಟ್ಟಿಗೆಗಳನ್ನು ಶುಚಿಗೊಳಿಸಿ, ನಿತ್ಯದ ಕಾಯಕಕ್ಕೆ ನೆರವಾಗುವ ಕೃಷಿ ಉಪಕರಣಗಳು ಮತ್ತು ಗ್ರಾಮದ ನೆಚ್ಚಿನ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ಪರಂಪರೆ. ಗ್ರಾಮಸ್ಥರು ಅಪಾರ ಶ್ರದ್ಧೆ-ಭಕ್ತಿಯಿಂದ ಒಗ್ಗೂಡಿ ಈ ಆಚರಣೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ.
ಮಳಲಿಕೊಪ್ಪ (ಹುಗುಡಿ) ಗ್ರಾಮದಲ್ಲಿ ಜಾತಿ-ಮತಗಳ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಗ್ರಾಮ ದೇವತೆಗಳ ಆರಾಧನೆಯಲ್ಲಿ ತೊಡಗುತ್ತಾರೆ. ಗ್ರಾಮಸ್ಥರು ಶಕ್ತಿಮೀರಿ ಕಾಣಿಕೆಗಳನ್ನು ಅರ್ಪಿಸಿ, ಶೀಲವಂತ ದೇವರಿಗೆ ಹಣ್ಣು-ಕಾಯಿ, ಹೂವು ಸಮರ್ಪಿಸಿ ಪೂಜಿಸುತ್ತಾರೆ.
ಇನ್ನು ಕೆಲವು ದೇವತೆಗಳಿಗೆ ಕುರಿ-ಕೋಳಿಗಳ ನೈವೇದ್ಯ (ಬಲಿ) ನೀಡಿ, ಗ್ರಾಮಕ್ಕೆ ಯಾವುದೇ ರೋಗ-ರುಜಿನಗಳು ತಗುಲದಂತೆ, ಕೃಷಿ ಬೆಳೆ ಸಮೃದ್ಧವಾಗಿ ಕೈಸೇರುವಂತೆ ಪ್ರಾರ್ಥಿಸಿ ತಮ್ಮ ಹರಕೆಗಳನ್ನು ತೀರಿಸುತ್ತಾರೆ.
ತಮ್ಮ ಹಿರಿಯರು ತಲೆಮಾರುಗಳಿಂದ ಮುನ್ನಡೆಸಿಕೊಂಡು ಬಂದಿರುವ ಈ ಸನಾತನ ಸಂಸ್ಕೃತಿ ಮತ್ತು ಕೃಷಿ ಪರಂಪರೆಯನ್ನು ಮುಂದಿನ ಪೀಳಿಗೆಗೂ ಪಸರಿಸುವ ಉದ್ದೇಶದಿಂದ ಗ್ರಾಮ ದೇವರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂಭ್ರಮದಲ್ಲಿ ಹುಗುಡಿ ಗ್ರಾಮದ ರೈತರು ಹಾಗೂ ಸಮಸ್ತ ಗ್ರಾಮಸ್ಥರು ಅತ್ಯಂತ ಶ್ರದ್ಧೆಯಿಂದ ಪಾಲ್ಗೊಂಡಿದ್ದರು.

