ಮಲೆನಾಡಿನಲ್ಲಿ ಹೆಚ್ಚಿದ ಮಣ್ಣಿನ ಮಡಿಕೆಗಳಿಗೆ ಬೇಡಿಕೆ | ಪಾರಂಪರಿಕ ಉದ್ಯಮಕ್ಕೆ ಪುನರ್ಜೀವನ ಆರೋಗ್ಯ-ಪರಿಸರದತ್ತ ಜನರ ಒಲವು

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇತ್ತೀಚಿನ ದಿನಗಳಲ್ಲಿ ಮಲೆನಾಡು ಪ್ರದೇಶದಲ್ಲಿ ಮಣ್ಣಿನಿಂದ ತಯಾರಿಸಲಾದ ಪಾತ್ರೆಗಳು ಹಾಗೂ ದಿನೋಪಯೋಗಿ ಪರಿಕರಗಳಿಗೆ ಅಪಾರ ಬೇಡಿಕೆ ಕಂಡು ಬರುತ್ತಿದೆ. ಒಮ್ಮೆ ಕಾಲದಲ್ಲಿ ನಶಿಸುತ್ತಿದೆ ಎನ್ನಲಾಗಿತ್ತಿದ್ದ ಮಣ್ಣಿನ ಪಾತ್ರೆ ಉದ್ಯಮ ಇದೀಗ ಪುನಃ ಚೇತರಿಸಿಕೊಂಡು ಗ್ರಾಮೀಣಾರ್ಥಿಕತೆಗೆ ಹೊಸ ಉಸಿರು ತುಂಬುತ್ತಿರುವುದು ಗಮನಾರ್ಹವಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಆರೋಗ್ಯದ ಅರಿವು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಜನರು ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಹಾಗೂ ಆರೋಗ್ಯಕರವಾದ ಮಣ್ಣಿನ ಪಾತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಮಣ್ಣಿನಿಂದ ತಯಾರಿಸಲಾದ ಅಡುಗೆ ಪಾತ್ರೆಗಳು ಆಹಾರದ ಪೌಷ್ಟಿಕತೆಯನ್ನು ಕಾಪಾಡುವುದರ ಜೊತೆಗೆ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಸಹಕಾರಿಯಾಗುತ್ತವೆ ಎಂಬ ಅರಿವು ನಾಗರಿಕರಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಣ್ಣಿನ ಕುಡಿಕೆ ಮಡಿಕೆ ತವಹಂಡಿ ನೀರಿನ ಪಾತ್ರೆ ದೀಪಗಳು ಸೇರಿದಂತೆ ಹಲವು ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ.

ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಂಬಾರ ಸಮುದಾಯದ ಕುಟುಂಬಗಳಿಗೆ ಇದರಿಂದ ಉದ್ಯೋಗದ ಹೊಸ ಅವಕಾಶಗಳು ಸೃಷ್ಟಿಯಾಗಿದೆ. ಹಿಂದೆ ತಾತ್ಕಾಲಿಕವಾಗಿ ಮಾತ್ರ ಈ ವೃತ್ತಿಯನ್ನು ಸಡೆಸುತ್ತಿದ್ದ ಹಲವರು ಇದೀಗ ಇದನ್ನೇ ಶಾಶ್ವತ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಮಣ್ಣಿನ ಪಾತ್ರೆಗಳ ತಯಾರಿಕೆಯಿಂದ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿರುವುದು ಗ್ರಾಮೀಣ ಪ್ರದೇಶಗಳಲ್ಲಿನ ಬದಲಾವಣೆಯ ಸೂಚಕವಾಗಿದೆ.

ಹಬ್ಬಗಳು, ಮದುವೆ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ನಗರ ಪ್ರದೇಶಗಳ ಆರ್ಗಾನಿಕ್ ಮೇಳಗಳು ಮಣ್ಣಿನ ಪರಿಕರಗಳ ಮಾರಾಟಕ್ಕೆ ಪ್ರಮುಖ ವೇದಿಕೆಯಾಗಿವೆ. ವಿಶೇಷವಾಗಿ ಪರಿಸರ ಸಂರಕ್ಷಣೆ ಹಾಗೂ ಆರೋಗ್ಯದ ದೃಷ್ಠಿಯಿಂದ ಮಣ್ಣಿನ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಿರುವುದು ಮಾರುಕಟ್ಟೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಪರಿಸರ ಸ್ನೇಹಿ ಜೀವನಶೈಲಿಯತ್ತ ಸಮಾಜ ಕ್ರಮೇಣ ಸಾಗುತ್ತಿರುವ ಈ ಸಂದರ್ಭದಲ್ಲಿ ಮಣ್ಣಿನ ಪಾತ್ರೆಗಳು ಕೇವಲ ವಸ್ತುವಾಗಿಯೇ ಅಲ್ಲ ಪರಂಪರೆ ಸಂಸ್ಕೃತಿ ಮತ್ತು ಸ್ವಾವಲಂನೆಯ ಸಂಕೇತವಾಗಿ ಮೂಡಿಬರುತ್ತಿವೆ. ಈ ಪಾರಂಪರಿಕ ಉದ್ಯಮಕ್ಕೆ ಅಗತ್ಯವಾದ ಪ್ರೋತ್ಸಾಹ ತರಬೇತಿ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಿದಲ್ಲಿ ಮಲೆನಾಡಿನ ಮಣ್ಣಿನ ಪಾತ್ರೆ ಉದ್ಯಮ ಇನ್ನಷ್ಟು ವಿಸ್ತಾರಗೊಳ್ಳುವ ನಿರೀಕ್ಷೆಯಿದೆ.

ಪಾರಂಪರಿಕ ಕೈಗಾರಿಕೆಗಳಿಗೆ ಮರುಜೀವನ ನೀಡುತ್ತಿರುವ  ಈ ಪ್ರವೃತ್ತಿ ಮಲೆನಾಡಿನ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಸಮತೋಲನಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ.

Leave a Comment