ರಿಪ್ಪನ್ಪೇಟೆ ; ಬೆಳಕಿನ ಹಬ್ಬ ದೀಪಾವಳಿ ಆರಂಭಕ್ಕೂ ಸೋಮವಾರ ಇಂದು ರಿಪ್ಪನ್ಪೇಟೆಯ ವಾರದ ಸಂತೆ ಖರೀದಿ ಬಲು ಜೋರಾಗಿ ಸಂತೆ ಮಾರುಕಟ್ಟೆಯಲ್ಲಿ ಜನಜಂಗುಲಿ ತುಂಬಿ ತುಳುಕುವಂತಾಗಿತು.
ದೀಪಾವಳಿ ಹಬ್ಬ ಬಂತೆಂದರೆ ಪಟಾಕಿ, ತರಕಾರಿ, ಜಾನುವಾರುಗಳ ಅಲಂಕಾರಿಕ ವಸ್ತುಗಳು, ಹೂವು, ಅಡಿಕೆ, ಹಿಂಗಾರ, ಬಳೆ ಬಿಚ್ಚಾಲೆ, ಅರಿಶಿಣ-ಕುಂಕುಮ, ತೆಂಗಿನಕಾಯಿ, ಬಾಳೆಹಣ್ಣು, ಬಾಳೆ ಕಂದು, ಕಬ್ಬಿನ ಸುಳಿ, ಬಗೆಬಗೆಯ ಹಣ್ಣುಗಳು ಹೀಗೆ, ಕುರಿ-ಕೋಳಿಗಳ ಮಾರಾಟ, ಬೂರೆಮಗೆ ಖರೀದಿಗಾಗಿ ಜನರ ನೂಕುನುಗ್ಗಲು ನಡುವೆ ಜೋರಾಗಿಯೇ ಸಾಗಿತ್ತು.
ಇಲ್ಲಿನ ಸಾಗರ ರಸ್ತೆಯಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಸಾಲುಗಟ್ಟಿ ನಿಂತ ಜನರು ರಸ್ತೆ ಅಂಚಿನಲ್ಲಿ ಜಾನುವಾರುಗಳ ಕಣಿ, ಎತ್ತಿನಕೊಂಬಿಗೆ ಬಣ್ಣದ ರಿಬ್ಬನ್, ಗೆಜ್ಜೆ, ಪೂಜಾ ಸಾಮಗ್ರಿಗಳು, ಬಗೆ-ಬಗೆಯ ಮಣ್ಣಿನ ಹಣತೆ ಮಾರಾಟ, ಖರೀದಿಗೆ ಜನರು ಮುಗಿ ಬಿದ್ದಿದ್ದರು.
ಹಗ್ಗ, ಕಣಿ, ಎತ್ತಿನ ಕೊಂಬಿಗೆ ಹಚ್ಚುವ ಬಣ್ಣ ಮತ್ತು ಮಣ್ಣಿನ ಹಣತೆ, ಹೂವು-ಹಣ್ಣುಗಳ ರಾಶಿ, ತರಕಾರಿ, ದಿನಸಿ ಅಂಗಡಿಗಳ ಮುಂದೆ ಖರೀದಿಗಾಗಿ ಜನಜಾತ್ರೆಯೆ ನೆರದಿತ್ತು.

ಚೆಂಡು ಹೂವು ಮಾರಿಗೆ 70-80 ರೂ.ಗಳಾದರೆ, ಸೇವಂತಿಗೆ ಮಾರಿಗೆ 100-120 ರೂ., ಬಾಳೆ ಕಂದು, ಕಬ್ಬಿನ ಸುಳಿ ಹಾಗೂ ಮಾವಿನ ತೋರಣಕ್ಕೆ 70 ರಿಂದ 100 ರೂ., ಇನ್ನೂ ಹಣ್ಣುಗಳಾದ ಸೇಬು 100 ರೂ., ಕಿತ್ತಲೆ, ಮೂಸಂಬಿ, ಸಪೋಟ ಹಣ್ಣು ಕೆ.ಜಿ ಗೆ 100-120 ರೂ.ಗಳಾದರೆ, ತರಕಾರಿಗಳಾದ ಹೀರೆಕಾಯಿ, ಸೌತೆಕಾಯಿ, ಟೊಮೇಟೊ, ಕುಂಬಳಕಾಯಿ, ಚಿನ್ನಿಕಾಯಿಗಳ ಬೆಲೆ 70 ರಿಂದ 80 ರೂ. ಗಳಾಗಿತ್ತು. ಇನ್ನೂ ದಿನಸಿ ಬೆಲೆಯಂತೂ ಗಗನಕ್ಕೇರಿತ್ತು.
ಇಷ್ಟಾದರೂ ಖರೀದಿಗಾಗಿ ಜನರು ಮಾತ್ರ ಅಂಗಡಿಗಳ ಮುಂದೆ ಮುಗಿಬಿದ್ದಿದ್ದರು. ಇನ್ನೂ ಪಟಾಕಿ ಅಂಗಡಿಗಳ ಮುಂದೆ ಮಕ್ಕಳು ಸೇರಿದಂತೆ ದೊಡ್ಡವರು ಬಾಕ್ಸ್ ಖರೀದಿಗಾಗಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತು ಖರೀದಿಸುತ್ತಿದ್ದು ವಿಶೇಷವಾಗಿತ್ತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.