ಹೊಸನಗರ

ಸ್ಟ್ಯಾನ್‌ಫೋರ್ಡ್ ವಿವಿಯ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 7ನೇ ಬಾರಿಗೆ ಮಿಂಚಿದ ಹೊಸನಗರದ ಡಾ.ಜೆ.ಜಿ. ಮಂಜುನಾಥ್

ಹೊಸನಗರ ತಾಲೂಕಿನ ಮೂಲದವರಾದ ಡಾ. ಜೆ. ಜಿ. ಮಂಜುನಾಥ್ ಅವರು ಸತತ ಏಳನೇ ಬಾರಿಗೆ ಸ್ಥಾನ ಪಡೆದು ಜಾಗತಿಕ ಮಟ್ಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

InShot 20261008 121401737

ಹೊಸನಗರ: ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಹಾಗೂ ಎಲ್ಸೆವಿಯರ್ ಸಂಸ್ಥೆ ಜಂಟಿಯಾಗಿ ಬಿಡುಗಡೆ ಮಾಡಿರುವ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ಹೊಸನಗರ ತಾಲೂಕಿನ ಮೂಲದವರಾದ ಡಾ. ಜೆ. ಜಿ. ಮಂಜುನಾಥ್ ಅವರು ಸತತ ಏಳನೇ ಬಾರಿಗೆ ಸ್ಥಾನ ಪಡೆದು ಜಾಗತಿಕ ಮಟ್ಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಇವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜಾದ ಮಡಿಕೇರಿಯ ಫೀಲ್ಡ್‌ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನಲ್ಲಿ (FMKMC) ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಹಾಗೂ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಉತ್ತಮ ರ‍್ಯಾಂಕಿಂಗ್:

ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಪ್ರಕಟಿಸಿರುವ ಸಂಶೋಧನಾ ಪ್ರಬಂಧಗಳು ಹಾಗೂ ಅದರ ಉಲ್ಲೇಖಗಳ (Citations) ಪ್ರಭಾವವನ್ನು ಆಧರಿಸಿ 2026ನೇ ಸಾಲಿನ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಡಾ. ಮಂಜುನಾಥ್ ಅವರು ‘ಏಕ ವರ್ಷದ ಸಾಧನೆ’ (Single-Year) ವಿಭಾಗದಲ್ಲಿ ವಿಶ್ವಕ್ಕೆ 5,855ನೇ ರ‍್ಯಾಂಕ್ ಹಾಗೂ ‘ಜೀವಮಾನದ ಸಾಧನೆ’ (Career-Long) ವಿಭಾಗದಲ್ಲಿ 41,962ನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅನಾಲಿಟಿಕಲ್ ಕೆಮಿಸ್ಟ್ರಿ, ಎಲೆಕ್ಟ್ರೋಕೆಮಿಕಲ್ ಸೆನ್ಸರ್‌ಗಳು, ನ್ಯಾನೋಮೆಟೀರಿಯಲ್ಸ್ ಮತ್ತು ಬಯೋಸೆನ್ಸರ್‌ ಕ್ಷೇತ್ರಗಳಲ್ಲಿ ಇವರ ಸಂಶೋಧನೆಗಳು ಅಪಾರ ಮನ್ನಣೆ ಗಳಿಸಿವೆ.

ಅಪಾರ ಶೈಕ್ಷಣಿಕ ಅನುಭವ:

ಕುವೆಂಪು ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಪಿಎಚ್ಡಿ ಪದವಿ ಪೂರೈಸಿರುವ ಇವರು, ಮಲೇಷ್ಯಾದ ‘Universiti Kebangsaan Malaysia (UKM)’ ದಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನೆ ಕೈಗೊಂಡಿದ್ದರು. ಅಲ್ಲದೆ, ಬ್ರೆಜಿಲ್‌ನ ಮ್ಯಾಕೆಂಜಿ ವಿಶ್ವವಿದ್ಯಾಲಯದಲ್ಲಿ (Universidade Presbiteriana Mackenzie) ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ ಅಪಾರ ಜಾಗತಿಕ ಅನುಭವ ಇವರದ್ದಾಗಿದೆ.

ಸಂಶೋಧನೆ ಹಾಗೂ ಸಂಪಾದಕೀಯ ಹೊಣೆ:

ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಸದಾ ಸಕ್ರಿಯರಾಗಿರುವ ಡಾ. ಮಂಜುನಾಥ್, ಈವರೆಗೆ 246ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದಾರೆ. ಸ್ಪ್ರಿಂಗರ್, ವೈಲಿ, ಎಲ್ಸೆವಿಯರ್, ಅಮೆರಿಕನ್ ಕೆಮಿಕಲ್ ಸೊಸೈಟಿ (ACS) ಹಾಗೂ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (RSC) ಮುಂತಾದ ಜಾಗತಿಕ ಪ್ರಕಾಶನ ಸಂಸ್ಥೆಗಳ 35ಕ್ಕೂ ಹೆಚ್ಚು ಪುಸ್ತಕಗಳನ್ನು ಇವರು ಸಂಪಾದಿಸಿದ್ದಾರೆ.

ಸದ್ಯ ಇವರು ಟೇಲರ್ ಅಂಡ್ ಫ್ರಾನ್ಸಿಸ್ ಪ್ರಕಟಿಸುವ ‘ಸೆನ್ಸಿಂಗ್ ಟೆಕ್ನಾಲಜಿ’ (Sensing Technology) ಜರ್ನಲ್‌ನ ಪ್ರಧಾನ ಸಂಪಾದಕರಾಗಿ (Editor-in-Chief) ಹಾಗೂ ಸ್ಪ್ರಿಂಗರ್ ನೇಚರ್‌ನ ‘ಡಿಸ್ಕವರ್ ಸೆನ್ಸರ್ಸ್’ ಜರ್ನಲ್‌ನ ವಿಭಾಗೀಯ ಸಂಪಾದಕರಾಗಿ ಗುರುತರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಗ್ರಾಮೀಣ ಪ್ರತಿಭೆಯ ಗರಿಮೆ:

ಮೂಲತಃ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜಂಬಳ್ಳಿ ಗ್ರಾಮದ ಗಂಗಾಧರಪ್ಪ ಗೌಡ ಹಾಗೂ ಜೆ. ಶಾರದಮ್ಮ ದಂಪತಿಯ ಪುತ್ರರಾಗಿರುವ ಡಾ. ಮಂಜುನಾಥ್, ಗ್ರಾಮೀಣ ಹಿನ್ನೆಲೆಯಿಂದ ಬಂದು ಅಂತರರಾಷ್ಟ್ರೀಯ ವಿಜ್ಞಾನ ಲೋಕದಲ್ಲಿ ಸತತ 7 ವರ್ಷಗಳಿಂದ ಅಗ್ರಮಾನ್ಯ ಸ್ಥಾನ ಕಾಯ್ದುಕೊಂಡಿರುವುದು ಇಡೀ ಮಲೆನಾಡು ಭಾಗಕ್ಕೆ ಹೆಮ್ಮೆಯ ವಿಷಯವಾಗಿದೆ. ಇವರ ಈ ಅಪ್ರತಿಮ ಸಾಧನೆಗೆ ವಿವಿಧ ಶೈಕ್ಷಣಿಕ ವಲಯ, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಗಣ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!