ಹೊಸನಗರ

ಮಲೆನಾಡಿನ ನಡುಮನೆ ಹೊಸನಗರದಲ್ಲಿ ಬರದ ಛಾಯೆ: ಬರಪೀಡಿತ ಪಟ್ಟಿಯಿಂದ ಕಡೆಗಣಿಸಿದ್ದಕ್ಕೆ ಆಕ್ರೋಶ

ಮಲೆನಾಡಿನ ನಡುಮನೆ, ಅತಿ ಹೆಚ್ಚು ಮಳೆ ಬೀಳುವ ಕಾರಣಕ್ಕೆ 'ಚಿರಾಪುಂಜಿ' ಎಂದೇ ಖ್ಯಾತಿಯಾಗಿದ್ದ ಹೊಸನಗರ ತಾಲ್ಲೂಕು ಈ ವರ್ಷ ಹಿಂದೆಂದೂ ಕಾಣದ ತೀವ್ರ ಬರದ ಬೇಗೆಗೆ ಸಿಲುಕಿದೆ.

ಮಲೆನಾಡಿನ ನಡುಮನೆ ಹೊಸನಗರದಲ್ಲಿ ಬರದ ಛಾಯೆ Drought

ಹೊಸನಗರ ; ಮಲೆನಾಡಿನ ನಡುಮನೆ, ಅತಿ ಹೆಚ್ಚು ಮಳೆ ಬೀಳುವ ಕಾರಣಕ್ಕೆ ‘ಚಿರಾಪುಂಜಿ’ ಎಂದೇ ಖ್ಯಾತಿಯಾಗಿದ್ದ ಹೊಸನಗರ ತಾಲ್ಲೂಕು ಈ ವರ್ಷ ಹಿಂದೆಂದೂ ಕಾಣದ ತೀವ್ರ ಬರದ ಬೇಗೆಗೆ ಸಿಲುಕಿದೆ. ಜೂನ್‌ನಿಂದಲೇ ಕೃಷಿ ಚಟುವಟಿಕೆ ಹಾಗೂ ಮಳೆಗಾಲದ ಸಿದ್ಧತೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ರೈತರು, ಸತತ 4 ತಿಂಗಳಾದರೂ ಸರಿಯಾದ ಪ್ರಮಾಣದಲ್ಲಿ ಮಳೆಯಾಗದೆ ಕಂಗಾಲಾಗಿದ್ದಾರೆ. ಅಡಿಕೆ, ಭತ್ತ ಹಾಗೂ ಕಾಳುಮೆಣಸು ಬೆಳೆಗಳು ಕಮರುತ್ತಿದ್ದು, ಅಂತರ್ಜಲ ಕುಸಿತದಿಂದ ಮುಂಬರುವ ನವೆಂಬರ್-ಡಿಸೆಂಬರ್ ವೇಳೆಗೆ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ತೀವ್ರ ಹಾಹಾಕಾರ ಉಂಟಾಗುವ ಆತಂಕ ಎದುರಾಗಿದೆ.

WhatsApp Group Join Now
Telegram Group Join Now
Instagram Group Join Now

ಹತ್ತು ವರ್ಷಗಳ ಮಳೆಯ ಅಂಕಿ-ಅಂಶ ಹಾಗೂ ಹವಾಮಾನ ವೈಪರೀತ್ಯ:

ಹೊಸನಗರದಲ್ಲಿ ವಾಡಿಕೆ 3037.3 ಮಿ.ಮೀ ಮಳೆಯಾಗಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಳೆಯ ಪ್ರಮಾಣದಲ್ಲಿ ತೀವ್ರ ಏರುಪೇರಾಗುತ್ತಿದೆ.

ಅತಿವೃಷ್ಟಿ ವರ್ಷಗಳು (2018 – 2022, 2024 – 2025): ವಾಡಿಕೆಗಿಂತ ಅತಿ ಹೆಚ್ಚು ಮಳೆ. 2019ರಲ್ಲಂತೂ 3966 ಮಿ.ಮೀ ಸುರಿದು ಸಂಪೂರ್ಣ ನೆರೆ ಪೀಡಿತ ಎಂದು ಘೋಷಣೆಯಾಗಿತ್ತು.

ಅಲ್ಪ ಮಳೆ ವರ್ಷಗಳು (2015, 2016, 2023): ಮಳೆ ಕೊರತೆಯಿಂದಾಗಿ ಬರದ ಛಾಯೆ ಆವರಿಸಿತ್ತು (ಸರಾಸರಿ 1900 ರಿಂದ 2150 ಮಿ.ಮೀ).

2026ರ ಭೀಕರ ಪರಿಸ್ಥಿತಿ:

ಪ್ರಸ್ತುತ ವರ್ಷ ತಾಲ್ಲೂಕಿನಲ್ಲಿ ಕೇವಲ 91.8 ಮಿ.ಮೀ ಮಳೆಯಾಗಿದ್ದು (ಶೇ. 91ರಷ್ಟು ಮಳೆ ಕೊರತೆ), ಹಸಿರಿನಿಂದ ಕಂಗೊಳಿಸುತ್ತಿದ್ದ ಭೂಮಿ ಸಂಪೂರ್ಣ ಬರಡುಭೂಮಿಯಾಗಿ ಮಾರ್ಪಟ್ಟಿದೆ.

ಬರಪೀಡಿತ ಪಟ್ಟಿಯಿಂದ ಹೊಸನಗರ ಕಡೆಗಣನೆ:

ರಾಜ್ಯ ಸರ್ಕಾರ ಇತ್ತೀಚೆಗೆ 250 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೆ, ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದ್ದರೂ ಹೊಸನಗರವನ್ನು ಈ ಪಟ್ಟಿಗೆ ಸೇರಿಸದಿರುವುದು ದುರಂತ. ಈ ತಾರತಮ್ಯ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಈಗಾಗಲೇ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಕೂಡಲೇ ಮರು ಸಮೀಕ್ಷೆ ನಡೆಸಿ, ಹೊಸನಗರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂಬುದು ಸ್ಥಳೀಯರ ಒಕ್ಕೊರಲ ಆಗ್ರಹ.

ಅಧಿಕಾರಿಗಳಿಗೆ ಎಚ್ಚರಿಕೆ ಹಾಗೂ ಮುಂದಿನ ಸವಾಲುಗಳು :

ಬರಗಾಲದ ತೀವ್ರತೆ ಹೆಚ್ಚುತ್ತಿರುವುದರಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಂದಿನಿಂದಲೇ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಕೈಮೀರಲಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ಪರ್ಯಾಯ ನೀರಿನ ಮೂಲಗಳನ್ನು ಗುರುತಿಸುವುದು ಹಾಗೂ ಗೋಶಾಲೆ/ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸುವುದು ಅತ್ಯಗತ್ಯ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡ, “ಈ ವರ್ಷ ನಿರೀಕ್ಷಿತ ಮಳೆಯಾಗಿಲ್ಲ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ದಕ್ಷ ಅಧಿಕಾರಿಗಳ ವರ್ಗ ಈಗಿನಿಂದಲೇ ಎಚ್ಚರ ವಹಿಸಿ ತುರ್ತು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ. ಆಡಳಿತ ಯಂತ್ರ ಚುರುಕಾಗದಿದ್ದರೆ ಮುಂದಿನ ಬೇಸಿಗೆಯಲ್ಲಿ ವಲಸೆಯಂತಹ ಗಂಭೀರ ಸಮಸ್ಯೆಗಳನ್ನು ತಾಲ್ಲೂಕು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!