ರಿಪ್ಪನ್‌ಪೇಟೆ ; ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಸಾಧನವಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ, ಜ್ಞಾನದ ಬೆಳಕನ್ನು ನೀಡುವ ಗುರುಗಳಿಗೆ ಕೃತಜ್ಞತೆ ಮತ್ತು ಗೌರವ ಸಮರ್ಪಣೆ ಸಲ್ಲಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯವೆಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಗರ್ತಿಕೆರೆಯ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಅಮೃತ ಸ್ನೇಹ ಸಮ್ಮಿಲನ ಶಾಲಾ ಪುನರ್ಮಿಲನ ಮತ್ತು ಶಿಕ್ಷಕರ ಸಮಾಗಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಸಾಕಷ್ಟು ಅನುದಾನವನ್ನು ನೀಡುವ ಮೂಲಕ ಶಿಕ್ಷಣದ ಅಭಿವೃದ್ದಿ ಒತ್ತು ನೀಡಲಾಗಿದೆ. ಆದರೂ ಕೊಟ್ಟಷ್ಟು ಕಡಿಮೆಯೆ ಎಂದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚು ಆದ್ಯತೆ ನೀಡುವುದರೊಂದಿಗೆ ಸಂಸದರ ಕ್ಷೇತ್ರಾಭಿವೃದ್ದಿಯ ವಿಶೇಷ ಅನುದಾನದಡಿ 10 ಲಕ್ಷ ರೂ. ನೀಡುತ್ತಿರುವುದಾಗಿ ಘೋಷಿಸಿದರು.
ಈಗಾಗಲೇ ಜಿಲ್ಲೆಯ ಅಭಿವೃದ್ದಿಗೆ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನವನ್ನು ತರಲಾಗಿದೆ. ರೈಲ್ವೆ ಯೋಜನೆಯಡಿ ಜಿಲ್ಲೆ ಪ್ರಗತಿ ಹೊಂದುವಂತಾಗಿದೆ. ಇನ್ನೂ ಅರಸಾಳಿನಿಂದ ತೀರ್ಥಹಳ್ಳಿ – ಶೃಂಗೇರಿ ಸಂಪರ್ಕದ ರೈಲು ಬಿಡುವ ಬಗ್ಗೆ ಈಗಾಗಲೇ ಸಮೀಕ್ಷೆ ಕಾರ್ಯ ಮಾಡುವ ಮೂಲಕ ನೀಲನಕ್ಷೆಯನ್ನು ಸಿದ್ದಪಡಿಸಲಾಗಿದ್ದು ಮುಂದಿನ ವರ್ಷದ ಕೇಂದ್ರದ ರೈಲ್ವೆ ಬಜೆಟ್‌ನಲ್ಲಿ ಘೋಷಣೆ ಮಾಡುವುದರೊಂದಿಗೆ ರೈಲ್ವೆ ಸಂಪರ್ಕದ ಕಾಮಗಾರಿ ಆರಂಭಿಸಲಾಗುವುದೆಂದು ವಿವರಿಸಿ, ಈಗಾಗಲೇ ಅರಸಾಳು ಮಾಲ್ಗುಡಿ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡುವ ಮೂಲಕ ಮಲೆನಾಡಿನ ಪ್ರಯಾಣಿಕರ ಬಹು ವರ್ಷದ ಬೇಡಿಕೆ ಈಡೇರಿಸಲಾಗಿದೆ ಎಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ರೋಗ ಬಾಧೆ ಹಾಗೂ ಭಾರಿ ಮಳೆಯಿಂದಾಗಿ ಬೆಳೆ ನಷ್ಟವಾಗಿದೆ. ಆ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆ ವಿಮೆ ಮಾಡಿಸಿದ ರೈತರ ಖಾತೆಗೆ ವಿಮೆ ನೇರವಾಗಿ ಹಣ ಜಮೆ ಮಾಡಲಿದೆ. ಕಳೆದ ವರ್ಷ ಜಿಲ್ಲೆಗೆ ಕೇವಲ 60-70 ಕೋಟಿ ರೂ. ಬೆಳೆ ವಿಮೆ ರೈತರಿಗೆ ದೊರಕಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 180 ಕೋಟಿ ರೂ. ವಿಮಾ ಹಣ ಬಿಡುಗಡೆಯಾಗಲಿದ್ದು ಈ ತಿಂಗಳ ಅಂತ್ಯದೊಳಗೆ ರೈತರ ಖಾತೆಗೆ ಹಣ ಜಮಾವಾಗಲಿದೆ. ಸಂಕಷ್ಟದಲ್ಲಿರುವ ರೈತರಿಗೆ ದೊರೆಯಲಿದೆ.
– ಬಿ.ವೈ. ರಾಘವೇಂದ್ರ, ಸಂಸದ

ಸಮಾರೋಪ ಸಮಾರಂಭದ ಆಧ್ಯಕ್ಷತೆಯನ್ನು ಅಮೃತ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಚಿನ್‌ಗೌಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಂ.ಎ.ಡಿ.ಬಿ. ಅಧ್ಯಕ್ಷ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ್, ಉಪಾಧ್ಯಕ್ಷೆ ವಿನೋಧ ಯೋಗೇಂದ್ರಪ್ಪ, ಸ್ನೇಹ ಸಮ್ಮಿಲನ ಸಮಿತಿಯ ಖಜಾಂಚಿ ಹೆಚ್.ಎಸ್.ಅನಂತಮೂರ್ತಿ, ಬಂಡಿ ರಾಮಚಂದ್ರ, ಗ್ರಾಮ ಪಂಚಾಯಿತ್ ಸದಸ್ಯರು, ಭೂ ನ್ಯಾಯ ಮಂಡಳಿ ಸದಸ್ಯ ಹೆಚ್.ಎಂ. ಬಷಿರ್ ಅಹಮದ್, ಪ್ರಾಚಾರ್ಯ ಮಹಮದ್ ನಜಹತ್ ಉಲ್ಲಾ, ಕೆ.ಪಿ.ಎಸ್. ಅಮೃತ ಶಾಲಾ ಶಿಕ್ಷಕ ಸತ್ಯನಾರಾಯಣ, ಪ್ರದೀಪ ಗರ್ತಿಕೆರೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪರಮೇಶ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಿನೇಶ ಬಂಡಿ, ಸಿಡಿಸಿ ಅಧ್ಯಕ್ಷ ಟಿ.ಡಿ. ಸೋಮಶೇಖರ್ ಇನ್ನಿತರರು ಪಾಲ್ಗೊಂಡಿದ್ದರು.
ಹೆಚ್.ಎಂ. ವರ್ತೇಶ್‌ಗೌಡ ಸ್ವಾಗತಿಸಿದರು. ಸತ್ಯನಾರಾಯಣ ನಿರೂಪಿಸಿದರು. ಈಶ್ವರಪ್ಪ ಮಳವಳ್ಳಿ ವಂದಿಸಿದರು. ನಂತರ ಶಿವಮೊಗ್ಗ ಸಮನ್ವಯ ತಂಡದಿಂದ ಅಂತರಾಷ್ಟ್ರೀಯ ಮಟ್ಟದ ಕಲಾವಿದರ ನೃತ್ಯ ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಕಲಾವಿದರಿಂದ ಸಂಗೀತ, ಹರಟೆ, ಹಾಸ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





