ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ, ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಿಂದ ಶಿಕಾರಿಪುರದವರೆಗೆ ಬೃಹತ್ ಪಾದಯಾತ್ರೆ ನಡೆಯಿತು.
ಸ್ವಾತಂತ್ರ್ಯ ಹೋರಾಟದ ಇತಿಹಾಸ ಹೊಂದಿರುವ ಈಸೂರಿನಿಂದ ಆರಂಭವಾದ ಈ ಪಾದಯಾತ್ರೆಯಲ್ಲಿ ಸಾವಿರಾರು ರೈತರು, ಗ್ರಾಮಸ್ಥರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕಸ್ತೂರಿ ರಂಗನ್ ವರದಿ ಈಗಿರುವ ರೂಪದಲ್ಲಿ ಜಾರಿಯಾದರೆ ಮಲೆನಾಡಿನ ರೈತರು ಮತ್ತು ಸಾಮಾನ್ಯ ಜನರ ಬದುಕಿಗೆ ತೀವ್ರ ತೊಂದರೆ ಆಗಲಿದೆ ಎಂದು ಹೇಳಿದರು.
ಮಲೆನಾಡಿನ ಜನರು ಈಗಾಗಲೇ ಅರಣ್ಯ, ಭೂಮಿ, ಶರಾವತಿ ಸಂತ್ರಸ್ತರು, ಕೃಷಿ ಮತ್ತು ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಕಠಿಣ ನಿಯಮಗಳು ಜಾರಿಯಾದರೆ ಜನರ ದೈನಂದಿನ ಬದುಕು ಹಾಗೂ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ವರದಿ ಜಾರಿಯಾಗದಂತೆ ಸರ್ಕಾರದ ಮಟ್ಟದಲ್ಲಿ ಹೋರಾಟ ಮುಂದುವರಿಸಲಾಗುವುದು. ಸಚಿವ ಸಂಪುಟದಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸಿ ಮಲೆನಾಡಿನ ಜನರ ಹಿತ ಕಾಪಾಡಲು ಪ್ರಯತ್ನಿಸಲಾಗುವುದು ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.
ಪಾದಯಾತ್ರೆಯಲ್ಲಿ ಭಾಗವಹಿಸಿದ ರೈತರು ಮತ್ತು ಗ್ರಾಮಸ್ಥರು, ಪರಿಸರ ಸಂರಕ್ಷಣೆ ಹೆಸರಿನಲ್ಲಿ ಜನವಸತಿ ಪ್ರದೇಶಗಳು, ಕೃಷಿ ಭೂಮಿ ಮತ್ತು ಗ್ರಾಮೀಣ ಜೀವನಕ್ಕೆ ತೊಂದರೆ ಆಗಬಾರದು ಎಂದು ಆಗ್ರಹಿಸಿದರು.
ಕಸ್ತೂರಿ ರಂಗನ್ ವರದಿ ಕುರಿತ ಆತಂಕ ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿದ್ದು, ವರದಿ ರದ್ದತಿಗೆ ಪಕ್ಷಾತೀತವಾಗಿ ಹೋರಾಟ ನಡೆಯಬೇಕು ಎಂಬ ಅಭಿಪ್ರಾಯವೂ ಪಾದಯಾತ್ರೆಯಲ್ಲಿ ವ್ಯಕ್ತವಾಯಿತು.

