ಶಿಕಾರಿಪುರ: ಪಟ್ಟಣದ ಹುಚ್ಚರಾಯಸ್ವಾಮಿ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಿಸಿಎ ವಿದ್ಯಾರ್ಥಿನಿ ನಮಿತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಲಭ್ಯವಾಗಿದೆ.
21 ವರ್ಷದ ನಮಿತಾ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಬೆಳಿಗ್ಗೆ ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದಳು. ನಂತರ ಹುಚ್ಚರಾಯಸ್ವಾಮಿ ಕೆರೆ ಬಳಿ ಆಕೆಯ ದ್ವಿಚಕ್ರ ವಾಹನ, ಚಪ್ಪಲಿ ಮತ್ತು ವೈಯಕ್ತಿಕ ವಸ್ತುಗಳು ಪತ್ತೆಯಾಗಿದ್ದವು.
ವಿದ್ಯಾರ್ಥಿನಿ ಕೆರೆಯಲ್ಲಿ ಬಿದ್ದಿರುವ ಮಾಹಿತಿ ಸಿಕ್ಕ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದರು. ಬಳಿಕ ಆಕೆಯ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದರು.
ಪ್ರಕರಣದ ತನಿಖೆ ವೇಳೆ ನಮಿತಾ ಬರೆದಿದ್ದಾಳೆ ಎನ್ನಲಾದ ಡೆತ್‌ನೋಟ್ ಆಕೆಯ ಕಾಲೇಜು ಬ್ಯಾಗ್‌ನಲ್ಲಿ ಪತ್ತೆಯಾಗಿದೆ ಎಂದು ಸಂಬಂಧಿಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೆಮಿಸ್ಟರ್ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದ ವಿಚಾರದಿಂದ ಮನನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂಬ ಮಾತನ್ನೂ ಅದರಲ್ಲಿ ಬರೆದಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಫಲಿತಾಂಶದ ಒತ್ತಡ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮನಸ್ಥಿತಿಯ ಮೇಲೆ ವಿಶೇಷ ಗಮನ ಹರಿಸುವ ಅಗತ್ಯವಿದೆ ಎಂಬ ಚರ್ಚೆಯೂ ಈ ಘಟನೆ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ.

