ಶಿವಮೊಗ್ಗ: ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ ಕೊಯ್ಲು ಮಾಡುತ್ತಿದ್ದ ರೈತರೊಬ್ಬರು ಹೆಜ್ಜೇನು ದಾಳಿಗೆ ಬಲಿಯಾಗಿರುವ ದಾರುಣ ಘಟನೆ ಶಿವಮೊಗ್ಗ ತಾಲೂಕಿನಲ್ಲಿ ವರದಿಯಾಗಿದೆ.
ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಮಲವಗೊಪ್ಪದ ನಿವಾಸಿ ತಿಮ್ಮನಾಯ್ಕ (56) ಮೃತಪಟ್ಟವರು. ಬುಧವಾರ ಸಂಜೆ ಇವರು ದುಮ್ಮಳ್ಳಿ ಗ್ರಾಮದಲ್ಲಿರುವ ತಮ್ಮ ಹೊಲದಲ್ಲಿ ಮೆಕ್ಕೆಜೋಳ ಕಟಾವಿನಲ್ಲಿ ತೊಡಗಿಕೊಂಡಿದ್ದಾಗ, ಅನಿರೀಕ್ಷಿತವಾಗಿ ಹೆಜ್ಜೇನುಗಳ ಹಿಂಡು ಇವರ ಮೇಲೆ ತೀವ್ರವಾಗಿ ದಾಳಿ ಮಾಡಿದೆ.
ಜೇನುನೊಣಗಳ ಕಡಿತದಿಂದ ಗಂಭೀರವಾಗಿ ಗಾಯಗೊಂಡು ಅಸ್ವಸ್ಥರಾಗಿದ್ದ ಅವರನ್ನು, ತಕ್ಷಣವೇ ಮನೆಯವರು ಮತ್ತು ಸ್ಥಳೀಯರು ಸೇರಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರ ಪ್ರಯತ್ನ ಫಲಿಸದೆ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

