ಶಿವಮೊಗ್ಗ: ಮಲೆನಾಡಿನ ಹೆಮ್ಮೆಯ ‘ಶಿವಮೊಗ್ಗ ದಸರಾ’ದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಆನೆಗಳನ್ನು ಶಿವಮೊಗ್ಗ ನಗರದ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಸಕ್ರೆಬೈಲು ಆನೆ ಶಿಬಿರದಲ್ಲಿ ಇಂದು ಬರಮಾಡಿಕೊಂಡು, ವಿಶೇಷ ಪೂಜೆ ಸಲ್ಲಿಸಿದರು.

ತಾಯಿ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊರುವ ಗಜಪಡೆಗೆ ಹಣ್ಣು-ಹಂಪಲುಗಳನ್ನು ತಿನ್ನಿಸುವ ಮೂಲಕ ಶಾಸಕರು ಸತ್ಕರಿಸಿದರು. ಬಳಿಕ ಮಾತನಾಡಿದ ಅವರು, “ಶಿವಮೊಗ್ಗ ದಸರಾ ಮಹೋತ್ಸವದ ಜಂಬೂಸವಾರಿಗೆ ಸಕ್ರೆಬೈಲಿನ ಆನೆಗಳೇ ಮೂಲ ಆಕರ್ಷಣೆ. ಈ ಉತ್ಸವವು ಯಾವುದೇ ಅಡೆತಡೆಗಳಿಲ್ಲದೆ, ಅತ್ಯಂತ ವಿಜೃಂಭಣೆ ಹಾಗೂ ಶಿಸ್ತಿನಿಂದ ಜರುಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ” ಎಂದು ನುಡಿದರು.

ಇದೇ ವೇಳೆ, ಆನೆಗಳ ಆರೋಗ್ಯ, ಅವುಗಳಿಗೆ ನೀಡಬೇಕಾದ ಪೌಷ್ಟಿಕ ಆಹಾರದ ವ್ಯವಸ್ಥೆ ಹಾಗೂ ನಗರದಲ್ಲಿ ನಡೆಯಲಿರುವ ತಾಲೀಮು ಪ್ರಕ್ರಿಯೆಗಳ ಕುರಿತು ಅರಣ್ಯಾಧಿಕಾರಿಗಳು ಮತ್ತು ಮಾವುತರ ಜೊತೆ ಶಾಸಕರು ಸಮಾಲೋಚನೆ ನಡೆಸಿದರು. ಈ ಸಾಂಸ್ಕೃತಿಕ ನಾಡಹಬ್ಬದಲ್ಲಿ ನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಭ್ರಮದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟೇಗಾರ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಉಪಾಧ್ಯಕ್ಷರುಗಳಾದ ಜ್ಞಾನೇಶ್ವರ್ ಮತ್ತು ನಾಗರಾಜ್, ನಗರಾಧ್ಯಕ್ಷ ಮೋಹನ್ ರೆಡ್ಡಿ ಸೇರಿದಂತೆ ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆಯ ಹಲವು ಅಧಿಕಾರಿಗಳು, ಮಾಜಿ ಪಾಲಿಕೆ ಸದಸ್ಯರು ಮತ್ತು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

