ಶಿವಮೊಗ್ಗ

ಅವೈಜ್ಞಾನಿಕ ಬೆಳೆ ವಿಮೆ ವಿರುದ್ಧ ಸಿಡಿದೆದ್ದ ಮಲೆನಾಡು: ಶಿವಮೊಗ್ಗ ಡಿಸಿ ಕಚೇರಿಗೆ ರೈತರ ಮುತ್ತಿಗೆ

ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಅನುಸರಿಸಲಾಗುತ್ತಿರುವ ಅವೈಜ್ಞಾನಿಕ ಮಾನದಂಡಗಳನ್ನು ಖಂಡಿಸಿ, ಶಿವಮೊಗ್ಗ ಜಿಲ್ಲೆಯ ವಿವಿಧ ರೈತ ಸಂಘಟನೆಗಳು ಮತ್ತು ಸಹಕಾರಿ ಸಂಸ್ಥೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಬೃಹತ್ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಗೊಂಡಿದೆ.

Crop Insurance Protest 1

ಶಿವಮೊಗ್ಗ: ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಅನುಸರಿಸಲಾಗುತ್ತಿರುವ ಅವೈಜ್ಞಾನಿಕ ಮಾನದಂಡಗಳನ್ನು ಖಂಡಿಸಿ, ಜಿಲ್ಲೆಯ ವಿವಿಧ ರೈತ ಸಂಘಟನೆಗಳು ಮತ್ತು ಸಹಕಾರಿ ಸಂಸ್ಥೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಬೃಹತ್ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಗೊಂಡಿದೆ.

WhatsApp Group Join Now
Telegram Group Join Now
Instagram Group Join Now

ಶೋಭಾ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ (ನಿಟ್ಟೂರು), ಶೋಧ ಬೆಳೆ ವಿಮೆ ಹೋರಾಟ ಸಮಿತಿ, ಮಾಮ್ಕೋಸ್, ಆಪ್ಕೋಸ್, ಅಡಿಕೆ ಬೆಳೆಗಾರರ ಸಂಘ, ತೋಟಗಾರ್ಸ್, ಅನ್ನಾವರ ಕಂಪನಿ, ತುಂಗಾ ಅಡಿಕೆ ಮಂಡಿ ಸೇರಿದಂತೆ ಕೊಡಚಾದ್ರಿ, ಶಾರದಾ, ಸುಮೇಧ ವಿವಿಧೋದ್ದೇಶ ಸಹಕಾರ ಸಂಘಗಳು ಹಾಗೂ ಕಳೂರು, ತ್ರಿಣಿವೆ, ಮೂಡುಗೊಪ್ಪ, ಸಂಪೆಕಟ್ಟೆ, ನಿಟ್ಟೂರು, ಎಸ್.ಎಸ್. ಬೋಗ್, ಬ್ಯಾಕೋಡು ಮತ್ತು ತುಮರಿ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಯೋಗದಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ.

ಮಾನವ ಸರಪಳಿ ಮತ್ತು ಬೃಹತ್ ಮೆರವಣಿಗೆ:

ಪ್ರತಿಭಟನೆಗೂ ಮುನ್ನ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದಿಂದ 2,500ಕ್ಕೂ ಅಧಿಕ ರೈತರು ಪಾದಯಾತ್ರೆಯ ಮೂಲಕ ಸಾಗಿ, ನಗರದ ಗೋಪಿ ವೃತ್ತ ಹಾಗೂ ಮಹಾವೀರ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿಮಾ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತದನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಕುಳಿತರು.

ಹೋರಾಟಗಾರರ ಪ್ರಮುಖ ಆರೋಪಗಳೇನು?

“ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಿ ರೈತರು ನಿತ್ಯ ಸಂಕಷ್ಟದಲ್ಲಿದ್ದಾರೆ. ಸರ್ಕಾರಿ ಯೋಜನೆಗಳಿಗೆ ಭೂಮಿ-ಮನೆ ಕಳೆದುಕೊಂಡರೂ ಕನಿಷ್ಠ ಸೌಲಭ್ಯ ಸಿಗುತ್ತಿಲ್ಲ. ಕಾಡುಪ್ರಾಣಿಗಳ ಹಾವಳಿ, ಅಡಿಕೆಗೆ ತಗುಲಿರುವ ಎಲೆಚುಕ್ಕಿ ಮತ್ತು ಕೊಳೆರೋಗದಿಂದ ಕೃಷಿಕರು ಕಂಗಾಲಾಗಿದ್ದಾರೆ. 2024-25 ಹಾಗೂ 2025-26ನೇ ಸಾಲಿನ ವಿಮೆ ಹಣ ಕಟ್ಟಿದ ಪ್ರೀಮಿಯಂಗಿಂತಲೂ ಕಡಿಮೆ ಬಂದಿದೆ. ಒಂದೇ ರಸ್ತೆಯ ಒಂದು ಬದಿಯ ರೈತರಿಗೆ ಹೆಕ್ಟೇರ್‌ಗೆ 57 ಸಾವಿರ ರೂ. ನೀಡಿದರೆ, ಮತ್ತೊಂದು ಬದಿಯ ರೈತರಿಗೆ ಕೇವಲ 3,450 ರೂ. ಪರಿಹಾರ ನೀಡಲಾಗಿದೆ. ಕೆಎಸ್‌ಎಲ್‌ಡಿಸಿ (KSLDC) ಮಳೆ ಮಾಪಕಗಳ ನಿರ್ವಹಣೆ ವೈಫಲ್ಯವೇ ಇದಕ್ಕೆ ಕಾರಣ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ”
– ಪುರುಷೋತ್ತಮ ಬೆಳ್ಳಕ್ಕ, ಅಧ್ಯಕ್ಷರು, ಹೋರಾಟ ಸಮಿತಿ

“ಈ ಭಾಗದಲ್ಲಿ ವಾರ್ಷಿಕ 7 ರಿಂದ 8 ಸಾವಿರ ಮಿ.ಮೀ. ಮಳೆಯಾಗುತ್ತದೆ. ಆದರೆ ಮಳೆ ಮಾಪಕಗಳು ದೋಷಪೂರಿತವಾಗಿರುವುದರಿಂದ ಅನ್ಯಾಯವಾಗುತ್ತಿದೆ. ಆಯಾ ಹೋಬಳಿ ಮಟ್ಟದಲ್ಲೇ ನಿಖರ ಮಾಪನ ವರದಿ ಸಂಗ್ರಹಿಸಬೇಕು, ಟರ್ಮ್ ಶೀಟ್ (Term Sheet) ಸರಿಪಡಿಸಬೇಕು ಮತ್ತು ಮಳೆ ಮಾಪಕಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಬೇಕು”.
– ಕೆ.ವಿ. ಕೃಷ್ಣಮೂರ್ತಿ, ನಿರ್ದೇಶಕರು ಮಾಮ್ಕೋಸ್

“ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರೇ ಹೆಚ್ಚಿರುವ ಈ ಭಾಗದಲ್ಲಿ, ಕೇವಲ ಒಂದು ರೂಪಾಯಿ ವಿಮೆ ಪರಿಹಾರ ನೀಡಿ ರೈತರಿಗೆ ಅವಮಾನ ಮಾಡಲಾಗಿದೆ. 15ಕ್ಕೂ ಹೆಚ್ಚು ವಿಮಾ ಕಂಪನಿಗಳು ಕಂತು ಕಟ್ಟಿಸಿಕೊಳ್ಳುತ್ತವೆಯೇ ಹೊರತು, ಯಾವೊಬ್ಬ ಅಧಿಕಾರಿಯೂ ಕ್ಷೇತ್ರಕ್ಕೆ ಭೇಟಿ ನೀಡಿ ರೈತರ ಕಷ್ಟ ಕೇಳಿಲ್ಲ. ಅನ್ನದಾತರು ಇನ್ನು ಸುಮ್ಮನೆ ಕೂರುವುದಿಲ್ಲ, ತಕ್ಕ ಪಾಠ ಕಲಿಸಲಿದ್ದಾರೆ”.
– ಬಿ.ಆರ್. ಜಯಂತ್, ರೈತ ಮುಖಂಡರು

ಸಂಸದ ಬಿ.ವೈ. ರಾಘವೇಂದ್ರ ಭೇಟಿ, ಸರ್ಕಾರದ ವಿರುದ್ಧ ವಾಗ್ದಾಳಿ:

ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, “ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ವಿಮಾ ಕಂಪನಿಗಳೊಂದಿಗೆ ಹಲವು ಸಭೆ ನಡೆಸಿ, ಮಳೆ ಮಾಪಕಗಳ ದೋಷದ ಬಗ್ಗೆ ದಾಖಲೆ ಸಮೇತ ಗಮನಕ್ಕೆ ತಂದಿದ್ದೇನೆ. ಆದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಕಳೆದ ಎರಡು ವರ್ಷಗಳ ಅತಿವೃಷ್ಟಿ-ಅನಾವೃಷ್ಟಿಯ ನಿಖರ ಹಾನಿಯನ್ನು ಅಂದಾಜಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತಕ್ಷಣವೇ ಮಳೆ ಮಾಪಕಗಳನ್ನು ಸರಿಪಡಿಸಿ, ವೈಜ್ಞಾನಿಕ ರೀತಿಯಲ್ಲಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.

ಈ ಬೃಹತ್ ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಇಂದೂಧರ ಗೌಡ, ರಮಾಕಾಂತ್ ಮತ್ತಿಮನೆ, ಕೆರೆಕೈ ಪ್ರಸನ್ನ, ಮಲ್ಲಿಕಾರ್ಜುನ ಹಕ್ರೆ, ಕಲ್ಸೆ ಚಂದ್ರಪ್ಪ, ಪ್ರಭಾವತಿ ಚಂದ್ರಕಾಂತ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]