ಶಿವಮೊಗ್ಗ

ಅಂದು ಮಾರುತಿ ಕಾರಿನಲ್ಲಿ ಹೆಣ್ಣು ನೋಡಲು ಹೋಗಿದ್ದೆ: ಮಧು ಬಂಗಾರಪ್ಪ ಆರೋಪಗಳಿಗೆ ಹಾಲಪ್ಪ ಕೊಟ್ಟ ಸ್ಪಷ್ಟನೆ ಏನು?

ಸಚಿವ ಮಧು ಬಂಗಾರಪ್ಪ ಅವರು ತಮ್ಮ ವಿರುದ್ಧ ನೀಡಿದ್ದಾರೆನ್ನಲಾದ ಹೇಳಿಕೆಗಳಿಗೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತೀವ್ರ ವಾಗ್ದಾಳಿ ನಡೆಸಿದ್ದು, ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಸವಾಲು ಹಾಕಿದ್ದಾರೆ.

InShot 20261118 184524507

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಮ್ಮ ವಿರುದ್ಧ ನೀಡಿದ್ದಾರೆನ್ನಲಾದ ಹೇಳಿಕೆಗಳಿಗೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತೀವ್ರ ವಾಗ್ದಾಳಿ ನಡೆಸಿದ್ದು, ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಸವಾಲು ಹಾಕಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರತಾಳು ಹಾಲಪ್ಪ, ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದರು.

ನಾನು ಕೆಲಸಗಾರನಾಗಿರಲಿಲ್ಲ, ಪಕ್ಷದ ಕಾರ್ಯಕರ್ತನಾಗಿದ್ದೆ:

“ನಾನು ಅವರ ಮನೆಯ ನೆಲ ಒರೆಸುತ್ತಿದ್ದೆ, ನನಗೆ ಚಡ್ಡಿ ಕೊಡಿಸಿದ್ದಾಗಿ ಸಚಿವರು ಹೇಳಿದ್ದಾರೆ. ಆದರೆ ನಾನು ಅವರ ಮನೆಯ ಕೆಲಸಗಾರನಾಗಿರಲಿಲ್ಲ ಅಥವಾ ಸಂಬಳ ಪಡೆಯುತ್ತಿರಲಿಲ್ಲ. ರಾಜಕೀಯ ಪಕ್ಷದ ಕಾರ್ಯಕರ್ತನಾಗಿ, ಬೆಂಬಲಿಗನಾಗಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಜೊತೆಗಿದ್ದೆ. ಅದನ್ನು ಹೊರತುಪಡಿಸಿ ಬೇರಾವುದೇ ಸಂಬಂಧ ಇರಲಿಲ್ಲ. ಆಗಿನ ಕಾಲದಲ್ಲೇ ನಾನು ಮಾರುತಿ ಕಾರಿನಲ್ಲಿ ಹೆಣ್ಣು ನೋಡಲು ಹೋಗಿದ್ದೆ. ಕೆಲವೆಡೆ ಬಂಗಾರಪ್ಪ ಅವರಿಗೆ ಹಣವನ್ನೂ ಕೊಡಿಸಿದ್ದೆ, ಅದನ್ನು ಅವರು ಸಮಾಜವಾದಿ ಪಕ್ಷ ಸೇರಿದಾಗ ಹಿಂತಿರುಗಿಸಿದ್ದರು. ಮಧು ಬಂಗಾರಪ್ಪ ಆಗ ಮನೆಯಲ್ಲೇ ಇರುತ್ತಿರಲಿಲ್ಲ; ಯಾವಾಗಲೋ ಬರುತ್ತಿದ್ದರು, ಹೋಗುತ್ತಿದ್ದರು. ಈ ಯಾವುದೇ ಮಾಹಿತಿ ಇಲ್ಲದೆ ಮಾತನಾಡುತ್ತಿದ್ದಾರೆ” ಎಂದು ಹಾಲಪ್ಪ ತಿರುಗೇಟು ನೀಡಿದರು.

ಬಂಗಾರಪ್ಪ ಅವರಿಗೆ ನೋವು ಕೊಟ್ಟಿದ್ದೇ ಮಧು:

ಶಿಕ್ಷಣ ಸಚಿವರಾಗಿ ಬಳಸುವ ಭಾಷೆ ಇದೇನಾ ಎಂದು ಪ್ರಶ್ನಿಸಿದ ಹಾಲಪ್ಪ, “ಬಂಗಾರಪ್ಪ ಬದುಕಿದ್ದಾಗ ಮಗನನ್ನು ಶಾಸಕನಾಗಿ ನೋಡುವ ಆಸೆ ಇತ್ತು, ಆದರೆ ಅದು ಆಗಲಿಲ್ಲ. ಬದಲಿಗೆ ಬಂಗಾರಪ್ಪ ಅವರಿಗೆ ಅತ್ಯಂತ ನೋವು ಕೊಟ್ಟಿದ್ದೇ ಇದೇ ಮಧು ಬಂಗಾರಪ್ಪ. ಅವರ ಪಿಎ, ಪಿಎಸ್ ಆಗಿದ್ದವರು ಇಂದು ಸಂಘ ಸಂಸ್ಥೆಗಳಲ್ಲಿ ಇದ್ದಾರೆ. ನಾನೂ ಬಂಗಾರಪ್ಪ ಅವರ ಅನುಯಾಯಿಯಾಗಿದ್ದು, ಇಂದಿಗೂ ಅವರ ಜನ್ಮದಿನವನ್ನು ಆಚರಿಸುತ್ತೇನೆ” ಎಂದರು.

‘ಟೂರಿಂಗ್ ಟಾಕೀಸ್’ ಹೇಳಿಕೆಗೆ ತಿರುಗೇಟು:

ತಮ್ಮನ್ನು ‘ಟೂರಿಂಗ್ ಟಾಕೀಸ್’ ಎಂದು ಕರೆದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, “ಹಾಗಾದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ ಅವರು ಟೂರಿಂಗ್ ಟಾಕೀಸ್ ಅಲ್ಲವೇ? ಯಡಿಯೂರಪ್ಪ ಅವರ ಮಕ್ಕಳ ಬಗ್ಗೆ ಅಹಂಕಾರ, ದರ್ಪದಿಂದ ಮಾತನಾಡುತ್ತಿದ್ದಾರೆ” ಎಂದು ಕಿಡಿಕಾರಿದರು.

ನ್ಯಾಯಾಲಯದ ಪ್ರಕರಣ ಹಾಗೂ ಫೋನ್ ಕರೆಗಳ ಉಲ್ಲೇಖ:

“ಬಂಗಾರಪ್ಪ ವಿರುದ್ಧ ಪ್ರಕರಣ ದಾಖಲಾದಾಗ ನಾನು ಹತ್ತಾರು ವರ್ಷ ನ್ಯಾಯಾಲಯಕ್ಕೆ ಅಲೆದಿದ್ದೇನೆ. ಆಗ ಮಧು ಬಂಗಾರಪ್ಪ ಎಷ್ಟು ಬಾರಿ ಕೋರ್ಟ್‌ಗೆ ಬಂದಿದ್ದರು ಎಂದು ಹೇಳಲಿ. ಯಡಿಯೂರಪ್ಪ ಅವರ ಕೇಸ್ ಬಗ್ಗೆ ಮಾತನಾಡುವ ಇವರು, ಬಂಗಾರಪ್ಪ ಕೇಸ್‌ನಲ್ಲಿ ಮನೆಯಲ್ಲೇ ನಿರೀಕ್ಷಣಾ ಜಾಮೀನು ಪಡೆದಿದ್ದರು. ನನ್ನ ಮೇಲಿನ ಪ್ರಕರಣದಲ್ಲಿ ಬಂಗಾರಪ್ಪ ಅವರ ಮನೆಯಿಂದ 192 ಬಾರಿ ಫೋನ್ ಕರೆ ಹೋಗಿದ್ದು, ಒಂದು ಬಾರಿ ಸುಮಾರು 50 ನಿಮಿಷ ಮಾತನಾಡಿದ್ದಾರೆ” ಎಂದು ಹಾಲಪ್ಪ ಆರೋಪಿಸಿದರು.

ಇದಲ್ಲದೆ, ಯಾವುದೇ ನ್ಯಾಯಾಲಯದ ಆದೇಶವಿಲ್ಲದಿದ್ದರೂ ಅಡಿಕೆ ತೋಟ ಕಡಿದಿರುವುದು ಸರಿಯೇ? ಎಂದು ಪ್ರಶ್ನಿಸಿದ ಅವರು, ಈ ಎಲ್ಲ ವಿಷಯಗಳ ಕುರಿತು ಬಹಿರಂಗ ಚರ್ಚೆಗೆ ಸಿದ್ಧವಿದ್ದು, ಸಚಿವರ ಬೆದರಿಕೆಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]