ಶಿವಮೊಗ್ಗ, ನವೆಂಬರ್ 17: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಡಿಕೆ ತೋಟ ತೆರವು, ಕೆರೆ ಒತ್ತುವರಿ ಹಾಗೂ ಶಿಕಾರಿಪುರದ ರಾಜಕೀಯ ಬೆಳವಣಿಗೆಗಳ ವಿಚಾರವಾಗಿ ಸಂಸದರ ಹೇಳಿಕೆಗಳಿಗೆ ತಿರುಗೇಟು ನೀಡಿದ ಸಚಿವರು, ರಾಘವೇಂದ್ರ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಸಂಸದ ರಾಘವೇಂದ್ರ ಅವರ ಇತ್ತೀಚಿನ ರಾಜಕೀಯ ಹೇಳಿಕೆಗಳನ್ನು ಟೀಕಿಸಿದರು. ನಾಲ್ಕು ಬಾರಿ ಸಂಸದರಾಗಿರುವ ರಾಘವೇಂದ್ರ ಅವರಿಗೆ ಇನ್ನೂ ರಾಜಕೀಯ ಪ್ರಬುದ್ಧತೆ ಬಂದಿಲ್ಲ ಎಂದು ಲೇವಡಿ ಮಾಡಿದರು.
ರಾಘವೇಂದ್ರ ಅವರು ಇಷ್ಟು ದಡ್ಡರು ಎಂದು ತಮಗೆ ತಿಳಿದಿರಲಿಲ್ಲ ಎಂದು ಹೇಳಿದ ಸಚಿವರು, ಏಕವಚನದಲ್ಲಿ ಮಾತನಾಡುವುದು ತಮಗೂ ಬರುತ್ತದೆ. ಆದರೆ ರಾಜಕೀಯದಲ್ಲಿ ಮಾತನಾಡುವಾಗ ಜವಾಬ್ದಾರಿ ಇರಬೇಕು ಎಂಬರ್ಥದಲ್ಲಿ ತಿರುಗೇಟು ನೀಡಿದರು.
ಅಡಿಕೆ ತೋಟ ತೆರವು ವಿಚಾರದಲ್ಲಿ ಆರೋಪ
ದೇವರಾಜ್ ಎಂಬುವವರ ಅಡಿಕೆ ತೋಟವನ್ನು ತೆರವುಗೊಳಿಸಿದ ವಿಚಾರವನ್ನು ಪ್ರಸ್ತಾಪಿಸಿದ ಮಧು ಬಂಗಾರಪ್ಪ, ಆ ಸಂದರ್ಭದಲ್ಲಿ ಸಂಸದ ರಾಘವೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಆ ಕುಟುಂಬಕ್ಕೆ ನೆರವಾಗಿದ್ದು ತಾವೇ ಎಂದು ಹೇಳಿದರು.
ದೇವರಾಜ್ ಅವರ ಕುಟುಂಬದ ಸಂಕಷ್ಟಕ್ಕೆ ಸಂಸದರ ಬೆಂಬಲಿಗರೇ ಕಾರಣ ಎಂದು ಸಚಿವರು ಆರೋಪಿಸಿದರು. ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ವಿಚಾರಗಳಲ್ಲಿ ಜನಪ್ರತಿನಿಧಿಗಳಾಗಿ ತಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದರು.
ಹರತಾಳು ಹಾಲಪ್ಪ ವಿರುದ್ಧವೂ ಆಕ್ರೋಶ
ಕೆರೆ ಒತ್ತುವರಿ ಜಾಗದ ವಿಚಾರದಲ್ಲಿಯೂ ಮಧು ಬಂಗಾರಪ್ಪ ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಹಾಲಪ್ಪ ಅವರ ಮಾತನ್ನು ನಂಬಿಕೊಂಡು ಸಂಸದ ರಾಘವೇಂದ್ರ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಶಿಕಾರಿಪುರದ ಜನರ ಪ್ರತಿಕ್ರಿಯೆಯನ್ನು ಸಂಸದರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದು ಹೇಳಿದರು.
ಕರೆಹಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಪೊಲೀಸರನ್ನು ಕರೆದುಕೊಂಡು ಹೋಗಿ ಒತ್ತುವರಿ ತೆರವುಗೊಳಿಸಿದ್ದ ಘಟನೆ ಪ್ರಸ್ತಾಪಿಸಿದ ಸಚಿವರು, ಆ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ಜನರ ಪರಿಸ್ಥಿತಿ ಬಗ್ಗೆ ಸಂಸದರು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.
ಪಂಪ್‌ಸೆಟ್ ಯೋಜನೆಯ ವಿಚಾರ ಪ್ರಸ್ತಾಪ
ಹಿಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾವು ಸಲ್ಲಿಸಿದ್ದ ಮನವಿಯ ವಿಚಾರವನ್ನೂ ಮಧು ಬಂಗಾರಪ್ಪ ನೆನಪಿಸಿಕೊಂಡರು.
ಆ ಸಂದರ್ಭದಲ್ಲಿ ಕುಮಾರ್ ಬಂಗಾರಪ್ಪ ತಮ್ಮ ಹೆಸರನ್ನು ಸೇರಿಸಿಕೊಂಡಿದ್ದರು ಎಂದು ಆರೋಪಿಸಿದ ಸಚಿವರು, ಬಡವರ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ಹಿಂದಿನ ಬೆಳವಣಿಗೆಗಳನ್ನೂ ನೆನಪಿಸಿಕೊಳ್ಳಬೇಕು ಎಂದರು.
ಆರಾಧನಾ ಯೋಜನೆಯ ಕುರಿತು ಮಾತನಾಡಿದ ಅವರು, ರೈತರ ಬದುಕಿನಲ್ಲಿ ಪಂಪ್‌ಸೆಟ್ ಯೋಜನೆಯ ಪಾತ್ರ ದೊಡ್ಡದಾಗಿದೆ. ಈ ಯೋಜನೆಯಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ ಎಂದು ಪ್ರತಿಪಾದಿಸಿದರು.
ಶಿವಮೊಗ್ಗ ರಾಜಕೀಯದಲ್ಲಿ ಮಾತಿನ ಸಮರ
ಶಿಕಾರಿಪುರದ ರಾಜಕೀಯ ಬೆಳವಣಿಗೆಗಳು, ಅಡಿಕೆ ತೋಟ ತೆರವು ಹಾಗೂ ಅಭಿವೃದ್ಧಿ ಕಾರ್ಯಗಳ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಂಡಿದೆ.
ಸಂಸದ ರಾಘವೇಂದ್ರ ಅವರ ಹೇಳಿಕೆಗಳಿಗೆ ತಿರುಗೇಟು ನೀಡುವ ಸಂದರ್ಭದಲ್ಲಿ ಮಧು ಬಂಗಾರಪ್ಪ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ರಾಜಕೀಯದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ..

