ರೈತರು ಬ್ಯಾಂಕ್ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ ; ಶ್ರೀನಾಥ್ ರೆಡ್ಡಿ

Written by malnadtimes.com

Published on:

HOSANAGARA ; ಅರ್ಹ ರೈತರ ವಿವಿಧ ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಅವರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಬ್ಯಾಂಕ್ ಕಟಿಬದ್ದವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಚೇರಿಯ ಸಾಲ ವಿಭಾಗದ ಮುಖ್ಯ ವ್ಯವಸ್ಥಾಪಕ ಶ್ರೀನಾಥ್ ರೆಡ್ಡಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸೋಮವಾರ ಪಟ್ಟಣದ ತಾಲೂಕು ಪಂಚಾಯತಿ ಸಭಾಗಣದಲ್ಲಿ ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ, ಕೃಷಿ, ಮೀನುಗಾರಿಕೆ ಹಾಗೂ ಎಸ್‌ಬಿಐ ಸಂಯುಕ್ತ ಆಶ್ರಯದಲ್ಲಿ ರೈತ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಂಧ್ಯಾ ಶಿಬಿರ-ಕಿಸಾನ್ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ ಚಟುವಟಿಕೆಗಾಗಿ ಆರ್ಥಿಕ ಸಂಸ್ಥೆಗಳು ನೀಡುವ ಸಾಲವನ್ನು ರೈತರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವಂತೆ ಕರೆ ನೀಡಿದರು.
ಪಶುವೈದ್ಯ ರಿಪ್ಪನ್‌ಪೇಟೆಯ ಡಾ. ಸಿ.ವಿ. ಸಂತೋಷ್ ಕುಮಾರ್ ಮಾತನಾಡಿ, ಇಲಾಖೆಯಲ್ಲಿ ರೈತಾಪಿ ವರ್ಗಕ್ಕೆ ಹಲವು ಯೋಜನೆಗಳಿದ್ದು, ಪ್ರಸಕ್ತ ಬಿಪಿಎಲ್ ಹಾಗು ಎಸ್‌ಟಿ/ಎಸ್ಟಿ ಕುಟುಂಬಗಳಿಗೆ ಐದು ವಾರಗಳ ಉಚಿತ ನಾಟಿ ಕೋಳಿ ಮರಿಗಳ ವಿತರಣೆ ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆಯಲಾಗಿದ್ದು, ಡಿ.31ರ ಅಂತ್ಯಕ್ಕೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಪಟ್ಟಿ ಬಿಡುಗಡೆ ಆಗಲಿದೆ. ತಾಲೂಕಿನಲ್ಲಿ ಜಾನುವಾರ ಗಣತಿ ಕಾರ್ಯ ಇಲಾಖೆ ಹಮ್ಮಿಕೊಂಡಿದ್ದು ರೈತರು ತಮ್ಮ ಸಾಕು ಪ್ರಾಣಿಗಳ ಸಂಖ್ಯೆ ದಾಖಲಿಸುವಂತೆ ಕೋರಿದರು.

ಮೀನುಗಾರಿಕೆ ಇಲಾಖೆ ಮೇಲ್ವೀಚಾರಕಿ ಬಸಮ್ಮ ಮಾತನಾಡಿ, ಮೀನು ಸಾಕಾಣಿಕೆಯ ಕೊಳ ನಿರ್ಮಾಣಕ್ಕೆ ಶೇ.40 ಸಹಾಯಧನ ಇಲಾಖೆ ನೀಡಲಿದೆ. ಮೀನು ಮಾರಾಟಕ್ಕಾಗಿ ವಾಹನ ಖರೀದಿಯ ಸಾಲ ಸೌಲಭ್ಯಕ್ಕೆ ಇಲಾಖೆ ಸಹಾಯಧನ ನೀಡಲಿದ್ದು, ತಾಲೂಕಿನಲ್ಲಿ ಈವರೆಗೂ ಸುಮಾರು 80 ರೈತಾಪಿಗಳು ಮೀನು ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಮೀನುಮರಿಗಳ ಲಭ್ಯತೆ ಮೇರೆಗೆ ಇಲಾಖೆ ಸಾಕಾಣಿಕೆದಾರರಿಗೆ ಆದ್ಯತೆ ಮೇರೆಗೆ ವಿತರಣೆಗೆ ಕ್ರಮಕೈಗೊಂಡಿದೆ ಎಂದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಕರಿಬಸಯ್ಯ ಮಾತನಾಡಿ, ಇತ್ತೀಚಿನ ಹವಾಮಾನ ವೈಪರೀತ್ಯಗಳೇ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಕರೋನ ನಂತರ ಇದು ಹೆಚ್ಚಾಗಿ ಕಂಡು ಬಂದಿದ್ದು, ತಾಲೂಕಿನಲ್ಲಿ ಎಲೆಚುಕ್ಕಿ, ಕೊಳೆ ರೋಗದಿಂದ ಅಡಿಕೆ ಬೆಳೆಗಾರರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ನಗರ, ಹುಂಚ ಹಾಗು ಕಸಬಾ ಹೋಬಳಿಯಲ್ಲಿ ಶೇ. 50ಕ್ಕಿಂತ ಅಡಿಕೆ ಬೆಳೆ ಹಾನಿಯಾಗಿದೆ. ಸರ್ವರ್ ತೊಂದರೆಯಿಂದ ಹವಾಮಾನ ಆಧರಿತ ಬೆಳೆಹಾನಿ ವಿಮೆ ದಾಖಲಿಸುವುದು ಈ ಭಾಗದಲ್ಲಿ ಕಷ್ಟಸಾಧ್ಯವಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳೆ ಮಾಪನ ಕೇಂದ್ರಗಳು ದುರಸ್ತಿ ಕಾಣಬೇಕಿದೆ. ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗಬೇಕು. ಇದರಿಂದ ಜಮೀನಲ್ಲಿನ ಅಗತ್ಯ ಪೋಷಕಾಂಷಗಳ ಕೊರತೆ ನೀಗಿಸಲು ಸಹಕಾರಿ ಆಗಲಿದೆ ಎಂದರು.

ಕೃಷಿ ಇಲಾಖೆ ಸಹಾಯಕ್ ನಿರ್ದೇಶಕ ಸಚಿನ್ ಹೆಗಡೆ ಮಾತನಾಡಿ, ಇಲಾಖೆಯು ರೈತರಿಗೆ ಸಬ್ಸಡಿ ದರದಲ್ಲಿ ಬಿತ್ತನೆ ಬೀಜ, ಮಿನಿ ಟ್ರ್ಯಾಕ್ಟರ್, ಪಿವಿಸಿ ಪೈಪ್ ಖರೀದಿಗೆ ಸಹಾಯಧನ ನೀಡುತ್ತಿದೆ. ಭತ್ತ, ಜೋಳ ಸೇರಿದಂತೆ ಅನೇಕ ಬಿತ್ತನೆ ಬೀಜ ವಿತರಣೆಯು ಮುಂಬರುವ ಫೆಬ್ರವರಿ ತಿಂಗಳಾಂತ್ಯಕ್ಕೆ ಆರಂಭಗೊಳ್ಳಲಿದೆ. ರೈತಾಪಿಗಳು ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ ಅವರು ಕೋರಿದರು.

ಬ್ಯಾಂಕಿನ ಪ್ರಾದೇಶಿಕ ಕಚೇರಿ ಕೃಷಿ ವ್ಯವಸ್ಥಾಪಕ ಶಶಿಧರ್ ಮಾತನಾಡಿ, ಮಲೆನಾಡು ಭಾಗದಲ್ಲಿ ಪಾಲಿಹೌಸ್ ನಿರ್ಮಾಣ ಅಷ್ಟಾಗಿ ಆರ್ಥಿಕ ಲಾಭದಾಯಕವಾಗಿಲ್ಲ. ಗ್ರೀನ್ ಹೌಸ್ ನಿರ್ಮಾಣ ಈ ಭಾಗದಲ್ಲಿ ಸಾಫಲ್ಯ ಕಂಡಿದೆ. ಹವಾಮಾನ ವೈಪರಿತ್ಯಗಳು, ಮಾರುಕಟ್ಟೆ ಕೊರತೆಯು ಪಾಲಿ ಹೌಸ್ ನಿರ್ಮಾಣವು ರೈತರ ಆರ್ಥಿಕ ನಷ್ಟಕ್ಕೆ ಕಾರಣವೆಂದರು.

ತಾಲೂಕು ಪಂಚಾಯತಿ ಇಒ ನರೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ರೈತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಗೋಷ್ಠಿಯಲ್ಲಿ ತಾಲೂಕಿನ ಪ್ರಮುಖ ರೈತಾಪಿಗಳಾದ ಪಿರ್ಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಮ್, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ದಿನಮಣಿ, ಕೋಡೂರು ವಿಜೇಂದ್ರರಾವ್ ಸೇರಿದಂತೆ ಸೂರ್ಯನಾರಾಯಣ ಉಡುಪ, ಯಶೋಧ ರಾಜಕುಮಾರ್, ಮಾವಿನಕಟ್ಟೆ ಚೂಡಾಮಣಿ, ಬೃಂದಾವನ್ ಪ್ರಶಾಂತ್ ಮೊದಲಾದವರು ಹಾಜರಿದ್ದರು.

ಎಸ್‌ಬಿಐ ಶಾಖಾ ವ್ಯವಸ್ಥಾಪಕ ಸ್ವಾಗತಿಸಿ, ಬ್ಯಾಂಕ್ ಅಧಿಕಾರಿ ಗಣೇಶ್ ಮಧುಕರ್ ನಿರೂಪಿಸಿ ವಂದಿಸಿದರು.

Leave a Comment