ತೀರ್ಥಹಳ್ಳಿ: ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ನಾಲ್ವರು ಯುವಕರು, ಈಜಾಡಲು ತೆರಳಿ ತುಂಗಾ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಷಿ ಗ್ರಾಮದ ತುಂಗಾ ಸೇತುವೆಯ ಕೆಳಭಾಗದಲ್ಲಿ ನಡೆದಿದೆ.
ಬೆಂಗಳೂರಿನ ಕತ್ರಿಗುಪ್ಪೆಯ ಕಾರ್ತಿಕ್ (31), ಇಟ್ಟಮಡುವಿನ ಪವನ್ (30), ತಲಘಟ್ಟಪುರದ ನಕುಲ್ (19) ಹಾಗೂ ಚೇತನ್ (19) ಮೃತಪಟ್ಟ ದುರ್ದೈವಿಗಳು. ಇವರಲ್ಲಿ ಕಾರ್ತಿಕ್, ಪವನ್ ಮತ್ತು ನಕುಲ್ ಕಾನೂನು ವ್ಯಾಸಂಗ ಮಾಡುತ್ತಿದ್ದು, ಚೇತನ್ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು.
ಘಟನೆಯ ವಿವರ:
ಮದುವೆ ಸಮಾರಂಭಕ್ಕೆಂದು ಬಂದಿದ್ದ ಯುವಕರ ತಂಡವು, ಸಮೀಪದಲ್ಲಿ ಈಜಾಡಲು ಯಾವುದಾದರೂ ನದಿ ಇದೆಯೇ ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸಿತ್ತು. ಮಹಿಷಿ ಗ್ರಾಮದ ಬಳಿ ತುಂಗಾ ನದಿ ಹರಿಯುವ ಮಾಹಿತಿ ಪಡೆದ ನಾಲ್ವರು ಅಲ್ಲಿಗೆ ತೆರಳಿ ನೀರಿಗಿಳಿದಿದ್ದಾರೆ. ಈಜಾಡುವ ವೇಳೆ ಓರ್ವ ಯುವಕ ನೀರಿನಲ್ಲಿ ಮುಳುಗಲಾರಂಭಿಸಿದ್ದು, ಆತನನ್ನು ರಕ್ಷಿಸಲು ಮುಂದಾದ ಉಳಿದ ಮೂವರು ಸ್ನೇಹಿತರು ಸಹ ನೀರಿನ ಸೆಳೆತಕ್ಕೆ ಸಿಲುಕಿ ಒಬ್ಬರ ಹಿಂದೆ ಒಬ್ಬರಂತೆ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ತಡರಾತ್ರಿಯವರೆಗೆ ನಡೆದ ಶೋಧ ಕಾರ್ಯಾಚರಣೆ:
ವಿಷಯ ತಿಳಿಯುತ್ತಿದ್ದಂತೆಯೇ ಮಾಳೂರು ಪೊಲೀಸ್ ಠಾಣೆಯ ಪಿಎಸ್‌ಐ ಸುನಿಲ್ ಕುಮಾರ್ ಹಾಗೂ ತೀರ್ಥಹಳ್ಳಿ ಅಗ್ನಿಶಾಮಕ ದಳದ ಅಧಿಕಾರಿ ಪುಲ್ಸಿಂಗ್ ಚೌಹಾಣ್ ಲಂಬಾಣಿ ಅವರ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಸಂಜೆ 4:30ರಿಂದ ತಡರಾತ್ರಿಯವರೆಗೆ ನಿರಂತರವಾಗಿ ನಡೆದ ಕಾರ್ಯಾಚರಣೆಯಲ್ಲಿ ಮಲ್ಪೆಯ ಆಪತ್ಬಾಂಧವ ಈಶ್ವರ್ ಮಲ್ಪೆ ಮತ್ತು ಅವರ ತಂಡದ ಸಹಕಾರದೊಂದಿಗೆ ನಾಲ್ವರ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಯಿತು.
ಈ ಕಾರ್ಯಾಚರಣೆಯಲ್ಲಿ ಕುರುವಳ್ಳಿಯ ಮುಳುಗು ತಜ್ಞ ಪ್ರಮೋದ್ ಪೂಜಾರಿ, ಕುರುವಳ್ಳಿ ನಾಗರಾಜ್, ನಾಗೇಶ್ ಗುಂಡ, ಅರ್ಜುನ್ ಗೌಡ, ಮಾಳೂರಿನ ಅಕ್ಷಯ್ ಕಟ್ಟೆಹಕ್ಲು, ಲಿಂಗರಾಜ್ ಕುರುವಳ್ಳಿ, ತೀರ್ಥಹಳ್ಳಿಯ ಶೌರ್ಯ ಪಡೆ, ಶಿವಮೊಗ್ಗದ ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಅವರ ಬಳಗ ಹಾಗೂ ಸ್ಥಳೀಯ ಯುವಕರು ಸಕ್ರಿಯವಾಗಿ ಪಾಲ್ಗೊಂಡು ಮಾನವೀಯತೆ ಮೆರೆದರು. ಮೃತದೇಹಗಳನ್ನು ಆಂಬುಲೆನ್ಸ್ ಮೂಲಕ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಕುಟುಂಬದವರಿಂದ ಕೃತಜ್ಞತೆ:
ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಮೃತದೇಹಗಳನ್ನು ಹೊರತೆಗೆಯಲು ಶ್ರಮಿಸಿದ ಈಶ್ವರ್ ಮಲ್ಪೆ ತಂಡ, ಕುರುವಳ್ಳಿ ನಾಗರಾಜ್, ಪ್ರಮೋದ್ ಪೂಜಾರಿ, ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮೃತ ಯುವಕರ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಅಂತ್ಯಕ್ರಿಯೆಗಾಗಿ ಮೃತದೇಹಗಳನ್ನು ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಕೊಂಡೊಯ್ಯಲು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟ ಶಿವಮೊಗ್ಗದ ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಅವರಿಗೂ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಧನ್ಯವಾದ ಅರ್ಪಿಸಿದ್ದಾರೆ.
