ಹೊಸನಗರ: ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿರುವ ಭಗವಾನ್ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರು ಹಾಗೂ ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ನವೆಂಬರ್ 28ರಂದು ಸಂಪ್ರದಾಯಬದ್ಧವಾಗಿ ಲಕ್ಷದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಮುಂಜಾನೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಸಂಜೆ ಭವ್ಯ ಲಕ್ಷದೀಪಾರಾಧನೆ ಜರುಗಲಿದೆ.
ಹೊಂಬುಜ ಜೈನಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಈ ಉತ್ಸವ ಸಂಪನ್ನಗೊಳ್ಳಲಿದೆ. ಸ್ಥಳೀಯರು ಹಾಗೂ ಪರವೂರಿನಿಂದ ಆಗಮಿಸುವ ಅಪಾರ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶ್ರೀಗಳ 16ನೇ ಪಟ್ಟಾಭಿಷೇಕ ಮಹೋತ್ಸವ:
ಶ್ರೀಮಠದ ಪೀಠಾಧಿಪತಿಗಳಾದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ಪಟ್ಟಾಭಿಷಿಕ್ತರಾಗಿ ಹದಿನಾರು ವರ್ಷಗಳು ಪೂರೈಸುತ್ತಿರುವ ಸುಸಂದರ್ಭದಲ್ಲಿ, ನವೆಂಬರ್ 29ರಂದು ಪಟ್ಟಾಭಿಷೇಕ ವರ್ಧಂತ್ಯೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಭಕ್ತರ ಸಮ್ಮುಖದಲ್ಲಿ ಸಿಂಹಾಸನ ಪೂಜೆ, ಪೀಠಕ್ಕೆ ಗೌರವ ಸಮರ್ಪಣೆ ಹಾಗೂ ಸಿಂಹಾಸನಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
