ಹೊಸನಗರ: ವಾಯುಭಾರ ಕುಸಿತದ ಪರಿಣಾಮವಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ (ಬಿದನೂರುನಗರ) ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಅಕಾಲಿಕವಾಗಿ ಸುರಿದ ಈ ಮಳೆಯಿಂದಾಗಿ ಮಲೆನಾಡಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳಗ್ಗೆಯಿಂದ ರಣ ಬಿಸಿಲಿನ ವಾತಾವರಣವಿದ್ದು ಮಧ್ಯಾಹ್ನದ ವೇಳೆ ಮೋಡ ಕವಿದು ಏಕಾಏಕಿ ಗುಡುಗು, ಮಿಂಚಿನೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಬಿರುಸಾಗಿ ಸುರಿಯಿತು.
ಕೃಷಿ ಚಟುವಟಿಕೆಗೆ ಭಾರಿ ಹೊಡೆತ:
ಪ್ರಸ್ತುತ ಮಲೆನಾಡು ಭಾಗದಲ್ಲಿ ಅಡಿಕೆ ಕೊಯ್ಲು, ಸುಲಿಯುವಿಕೆ ಹಾಗೂ ಒಣಗಿಸುವ ಕಾರ್ಯ ಭರದಿಂದ ಸಾಗಿದೆ. ಜೊತೆಗೆ ಗದ್ದೆಗಳಲ್ಲಿ ಭತ್ತದ ಕಟಾವು ಕೂಡ ನಡೆಯುತ್ತಿದೆ. ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ರಕ್ಷಿಸಿಕೊಳ್ಳಲು ಬೆಳೆಗಾರರು ಹರಸಾಹಸ ಪಡಬೇಕಾಯಿತು. ತೇವಾಂಶ ಹೆಚ್ಚಾದರೆ ಅಡಿಕೆ ಕಪ್ಪಾಗುವ ಹಾಗೂ ಗುಣಮಟ್ಟ ಕುಸಿಯುವ ಆತಂಕ ರೈತರನ್ನು ಕಾಡುತ್ತಿದೆ. ಇನ್ನೊಂದೆಡೆ, ಕಟಾವಿಗೆ ಬಂದಿರುವ ಹಾಗೂ ಈಗಾಗಲೇ ಕಟಾವು ಮಾಡಿ ಗದ್ದೆಯಲ್ಲಿ ಹಾಕಿರುವ ಭತ್ತದ ಬೆಳೆ ಮಳೆಗೆ ತೊಯ್ದು ಹಾನಿಯಾಗುವ ಭೀತಿ ಎದುರಾಗಿದೆ.
ವಾಹನ ಸವಾರರ ಪರದಾಟ:
ಮಧ್ಯಾಹ್ನದ ವೇಳೆ ವಿವಿಧ ಕೆಲಸಗಳಿಗಾಗಿ ನಗರ ಪಟ್ಟಣಕ್ಕೆ ಆಗಮಿಸಿದ್ದ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರು ದಿಢೀರ್ ಮಳೆಯಿಂದಾಗಿ ತೀವ್ರ ಪರದಾಡಿದರು. ರೇನ್‌ಕೋಟ್ ಇಲ್ಲದೆ ಸಂಚರಿಸುತ್ತಿದ್ದ ಬೈಕ್ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ ಮುಂಗಟ್ಟುಗಳು ಹಾಗೂ ಬಸ್ ನಿಲ್ದಾಣದ ಆಶ್ರಯ ಪಡೆಯಬೇಕಾಯಿತು.
ಮುಂದಿನ ಒಂದೆರಡು ದಿನಗಳ ಕಾಲ ಇದೇ ರೀತಿ ಮೋಡ ಕವಿದ ವಾತಾವರಣ ಹಾಗೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಅಡಿಕೆ ಮತ್ತು ಭತ್ತ ಬೆಳೆಗಾರರು ಆತಂಕದಲ್ಲಿ ದಿನ ದೂಡುವಂತಾಗಿದೆ.
