ಹೊಸನಗರ

ತಮ್ಮ ಅಸ್ತಿತ್ವಕ್ಕಾಗಿ ಮೀಸಲಾತಿ ಬದಲಿಸಿದರಾ ಕಲಗೋಡು ರತ್ನಾಕರ್? ಬಿಜೆಪಿ ಮುಖಂಡರು ಮಾಡಿದ ಗಂಭೀರ ಆರೋಪಗಳೇನು?

ರಿಪ್ಪನ್‌ಪೇಟೆ ಜಿ.ಪಂ. ಹಾಗೂ ಕೆಂಚನಾಲ ತಾ.ಪಂ. ಕ್ಷೇತ್ರಗಳ ಮೀಸಲಾತಿ ಪಟ್ಟಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹಸ್ತಕ್ಷೇಪ ಮಾಡಿ ದಲಿತರು ಹಾಗೂ ಗಂಗಾ ಮತಸ್ಥರಿಗೆ ಅನ್ಯಾಯ ಎಸಗಿದ್ದಾರೆ ಎಂದು ಬಿಜೆಪಿ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ. ನಿಯಮಬಾಹಿರ ಮೀಸಲಾತಿ ಬದಲಾವಣೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹಾಗೂ ಬೀದಿಗಿಳಿದು ಹೋರಾಟ ನಡೆಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Ripponpete ZP Election

ರಿಪ್ಪನ್‌ಪೇಟೆ: ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಜಿಪಂ ಹಾಗೂ ತಾಪಂ ಮೀಸಲಾತಿ ಪಟ್ಟಿಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ದಲಿತರಿಗೆ ಮತ್ತು ಗಂಗಾ ಮತಸ್ಥರಿಗೆ ಅನ್ಯಾಯ ಎಸಗಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಎ.ಟಿ. ನಾಗರತ್ನಮ್ಮ ಮತ್ತು ಕೆಂಚನಾಲ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದಳ್ಳಿ ನಾಗೇಶ್ ಆರೋಪಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆ ಪಟ್ಟಣದ ರಾಯಲ್ ಕಂಫರ್ಟ್ ಹಾಲ್‌ನಲ್ಲಿ ಬುಧವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಬದಲಾವಣೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಿಪ್ಪನ್‌ಪೇಟೆ ಜಿ.ಪಂ. ಕ್ಷೇತ್ರ ಮೀಸಲಾತಿ ಬದಲಾವಣೆಗೆ ಆಕ್ಷೇಪ:

ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಸುಮಾರು 20 ವರ್ಷಗಳ ಬಳಿಕ ವಿಭಜಿತ ರಿಪ್ಪನ್‌ಪೇಟೆ ಜಿಲ್ಲಾ ಪಂಚಾಯತ್ ಕ್ಷೇತ್ರವು ಅನುಸೂಚಿತ ಜಾತಿಗೆ (ಪರಿಶಿಷ್ಟ ಜಾತಿ) ಮೀಸಲಾಗಿತ್ತು. ಹೊಸನಗರ ತಾಲೂಕಿನಲ್ಲೇ ಅತಿ ಹೆಚ್ಚು ಪರಿಶಿಷ್ಟ ಜಾತಿ ಮತದಾರರಿರುವ ಈ ಕ್ಷೇತ್ರದ ಮೀಸಲಾತಿಯನ್ನು ಕಲಗೋಡು ರತ್ನಾಕರ್ ಅವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಬದಲಾಯಿಸಿ, ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿದ್ದಾರೆ ಎಂದು ಎ.ಟಿ. ನಾಗರತ್ನಮ್ಮ ದೂರಿದರು.

ಕಾನೂನು ಹೋರಾಟದ ಎಚ್ಚರಿಕೆ:

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನೀತಿ ಈ ನಡೆಯಿಂದ ಬಯಲಾಗಿದೆ ಎಂದು ಟೀಕಿಸಿದ ಅವರು, ನಿಯಮಬಾಹಿರವಾಗಿ ಮಾಡಲಾಗಿರುವ ಈ ಮೀಸಲಾತಿ ಬದಲಾವಣೆಯನ್ನು ಪ್ರಶ್ನಿಸಿ ಶೀಘ್ರದಲ್ಲೇ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು. ಮುಂದಿನ ಚುನಾವಣೆಗಳಲ್ಲಿ ದಲಿತ ಸಮುದಾಯವು ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂದರು.

ಗಂಗಾ ಮತಸ್ಥರ ಕಡೆಗಣನೆ ಆರೋಪ:

ಕೆಂಚನಾಲ ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಗಂಗಾ ಮತಸ್ಥ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿಂದೆ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದ ಈ ಕ್ಷೇತ್ರವನ್ನು ಉದ್ದೇಶಪೂರ್ವಕವಾಗಿ ಹಿಂದುಳಿದ ವರ್ಗ ‘ಬ’ (BCM-B) ಗೆ ಬದಲಾಯಿಸುವ ಮೂಲಕ ಗಂಗಾ ಮತಸ್ಥರ ರಾಜಕೀಯ ಪ್ರಾತಿನಿಧ್ಯವನ್ನು ಕಸಿದುಕೊಳ್ಳಲಾಗಿದೆ ಎಂದು ಚಂದಳ್ಳಿ ನಾಗೇಶ್ ಆರೋಪಿಸಿದರು.

ಹೋರಾಟದ ಎಚ್ಚರಿಕೆ:

ತಳವರ್ಗದ ಸಮುದಾಯಗಳನ್ನು ರಾಜಕೀಯವಾಗಿ ತುಳಿಯುವ ಈ ನಡೆಯನ್ನು ಖಂಡಿಸಿ, ಮುಂದಿನ ದಿನಗಳಲ್ಲಿ ಗಂಗಾ ಮತಸ್ಥ ಸಮುದಾಯವು ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಆರ್.ಟಿ. ಗೋಪಾಲ್, ಸರಸ್ವತಿ, ಗಣಪತಿ, ಪರಮೇಶ್, ಅರುಣ, ರಾಘವೇಂದ್ರ, ವಿನಾಯಕ, ಹೂವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]