ಹೊಸನಗರ ; ಇದೇ ಆಗಸ್ಟ್ 27ರಿಂದ 31ರವರಗೆ ಪಟ್ಟಣದ ಶ್ರೀ ಸೀತಾರಾಮಚಂದ್ರ ಸಭಾಭವನದಲ್ಲಿ ಕೋಟೆಗಾರ್ ವಿದ್ಯಾವರ್ಧಕ ಸಂಘದ ವತಿಯಿಂದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 27ರ ಬುಧವಾರ ಬೆಳಗ್ಗೆ 9-30ಕ್ಕೆ ಶ್ರೀ ಸ್ವಾಮಿಗೆ ಸುಮಾರು 7 ಕೆಜಿ ತೂಕದ ನೂತನ ಬೆಳ್ಳಿ ಪ್ರಭಾವಳಿ ಸಮರ್ಪಣೆ ಮಾಡುವ ಮೂಲಕ ಶ್ರೀ ಗಣಪತಿ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದೆ. ಬಳಿಕ ಗಣಹೋಮ, ಮಹಾಮಂಗಳಾರತಿ, ರಂಗಪೂಜೆ, ಪ್ರಸಾದ ವಿತರಣೆ ನಡೆಲಿದೆ.
28ರ ಗುರುವಾರ ವಿವಿಧ ಧಾರ್ಮಿಕ ಪ್ರಜಾ ಕೈಂಕರ್ಯದ ಬಳಿಕ ರಾತ್ರಿ 8 ಗಂಟೆಗೆ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ-ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಸಂಘದ ಅಧ್ಯಕ್ಷ ಹೆಚ್.ಆರ್. ಶಶಿಧರನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಶ್ರೀ ಗಣೇಶ್ ಕಲ್ಪತರು ಇಂಡಸ್ಟ್ರಿಸ್‌ನ ಮಾಲೀಕ ಚಂದ್ರಶೇಖರ್, ಬೆಂಗಳೂರಿನ ಉದ್ಯಮಿ ಡಿ.ಕೆ.ಗಣೇಶ್, ಕುಂದಾಪುರ ರಕ್ಷಾ ಚಾರಿಟೆಬಲ್ ಟ್ರಸ್ಟ್(ರಿ)ನ ಅಧ್ಯಕ್ಷ ಪ್ರಕಾಶ್ ಬೆಟ್ಟಿನ್ ಭಾಗವಹಿಸಲಿದ್ದು, ಸಂಘದ ಗೌರವಾಧ್ಯಕ್ಷ ಪಿ.ಆರ್. ಸಂಜೀವ ಕುಂದಾಪುರ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಉಪಾಧ್ಯಕ್ಷ, ಎಸಿಎಫ್ ಕೆ.ಎನ್. ಮಂಜುನಾಥ್ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ನಿವೃತ್ತ ವನಪಾಲಕ ಅಣ್ಣಪ್ಪ, ಎಂಪಿಎಂ ನಿವೃತ್ತ ಅರಣ್ಯ ಮೇಲ್ವಿಚಾರಕ ಸತ್ಯನಾರಾಯಣ, ಕಳೂರು ಸೊಸೈಟಿ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಹೆಚ್. ಶ್ರೀನಿವಾಸ್ ಅವರನ್ನು ಸಂಘ ಆತ್ಮೀಯವಾಗಿ ಸನ್ಮಾನಿಸಲಿದೆ. 29ರ ಶುಕ್ರವಾರ ಸಂಜೆ 6ಕ್ಕೆ ಕೋಟೆಗಾರ್ ಮಹಿಳಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
30ರ ಶನಿವಾರ ಬೆಳಗ್ಗೆ 11ಕ್ಕೆ ಗಣಹೋಮ, ಮಹಾಮಂಗಳಾರತಿ, ಪ್ರಸಾದ ವಿತರಣೆ ಸಂಜೆ ರಂಗಪೂಜೆ ಬಳಿಕ ರಾತ್ರಿ 8ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸಂಘದ ನೂತನ ಕಚೇರಿ ಹಾಗೂ ಕೊಠಡಿ ಉದ್ಘಾಟಿಸಲಿದ್ದಾರೆ.
ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೆಚ್.ಆರ್. ಶಶಿಧರ ನಾಯ್ಕ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೈಂದೂರು ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್(ರಿ)ನ ಅಧ್ಯಕ್ಷ ರಾಮಕೃಷ್ಣ ಬಿಜ್ಜೂರ್, ಮಂಗಳೂರು ವಿಭಾಗದ ವಾಣಿಜ್ಯ ತೆರಿಗೆ ಉಪ ಆಯುಕ್ತ ಸತೀಶ್ ಬಟ್ವಾಡಿ, ಸಾಗರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಹೆಚ್.ಜಿ.ಗಣೇಶ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮುದಾಯದ ಮಂಗಳೂರು ಪಶ್ಚಿಮ ವಿಭಾಗದ ಪಿಎಸ್ಐ ಎಸ್.ಪಿ. ಪ್ರತಿಭಾ, ಶಿವಮೊಗ್ಗದ ನಿವೃತ್ತ ಪಿಎಸೈ ದೇವರಾಯ, ಮಣಿಪಾಲ ಎಂ.ಐ.ಟಿ ಪ್ರಾಧ್ಯಾಪಕ ಹಾಗೂ ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿ ಸದಸ್ಯ ಬಾಲಕೃಷ್ಣ ಮದ್ದೋಡಿ ಅವರನ್ನು ಸಂಘ ಸನ್ಮಾನಿಸಲಿದೆ.
ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯ ನಿಧಿ, ಮಾಸಿಕ ವಿಧವಾ ವೇತನ ವಿತರಣೆ ನಡೆಯಲಿದೆ.
ನಂತರ ಕೋಟೆಗಾರ್ ಮಹಿಳಾ ಮಂಡಳಿ ಅವರಿಂದ ‘ಶ್ರೀರಾಮ ಪಟ್ಟಾಭಿಷೇಕ’ ಎಂಬ ಯಕ್ಷಗಾನ ದೃಶ್ಯರೂಪಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
31ರ ಭಾನುವಾರ ಬೆಳಗ್ಗೆ 10-30ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಮಧ್ಯಾಹ್ನ ಒಂದು ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 4ಕ್ಕೆ ಡೊಳ್ಳು ಕುಣಿತ, ಹೆಬ್ರಿ ಸ್ವಸ್ತಿಕ್ ಚಂಡೆ ಬಳಗ ಇವರಿಂದ ಚಂಡೆ ವಾದ್ಯದೊಂದಿಗೆ ಬೆಳ್ಳಿರಥದಲ್ಲಿ ಶ್ರೀ ಸ್ವಾಮಿಯ ರಾಜಬೀದಿ ಉತ್ಸವದೊಂದಿಗೆ ಗಣಪತಿ ದೇವಸ್ಥಾನದ ಪುಷ್ಕರಣಿಯಲ್ಲಿ ಸ್ವಾಮಿಯ ವಿಸರ್ಜನೆ ನೆರವೇರಲಿದೆ.
ಕಳೆದ 10 ವರ್ಷಗಳಿಂದ ನಿರಂತರವಾಗಿ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ವಂತಿಕೆ ಪಡೆಯದೆ ಸಂಘವೇ ನಿರ್ವಹಿಸುತ್ತಿರುವುದು ಕೋಟೆಗಾರ್ ವಿದ್ಯಾವರ್ಧಕ ಸಂಘದ ಶ್ರೀ ಗಣೇಶೋತ್ಸವ ಸಮಿತಿಯ ವಿಶೇಷಗಳಲ್ಲೊಂದು ಎಂದು ಸಂಘದ ಕೆ.ಜಿ.ನಾಗೇಶ್ ತಿಳಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.