ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಗರ್ತಿಕೆರೆ ಸತೀಶ್ ಶೆಟ್ಟಿ ಕೊಲೆ ಆರೋಪಿ ಕೃಷ್ಣ ಸಾವು !

Written by Mahesha Hindlemane

Published on:

ಶಿವಮೊಗ್ಗ ; ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೊಸನಗರ ತಾಲ್ಲೂಕಿನ ಗರ್ತಿಕೆರೆ ಗ್ರಾಮದ ಅವುಕ ರಸ್ತೆ ನಿವಾಸಿ ಕೃಷ್ಣ (49) ಮೃತ ಕೈದಿ. ಕೊಲೆ ಪ್ರಕರಣದಲ್ಲಿ ತಪ್ಪು ಸಾಬೀತಾಗಿದ್ದ ಹಿನ್ನೆಲೆಯಲ್ಲಿ, ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೃಷ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಮಧುಮೇಹದಿಂದ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಡಿಸೆಂಬರ್ 5ರಂದು ಸಂಜೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಡೆಯುತ್ತಿದ್ದರೂ, ಸ್ಥಿತಿ ಗಂಭೀರವಾಗುತ್ತಿದ್ದು ಕೃಷ್ಣ ಇಂದು ಬೆಳಗಿನ ಜಾವ ಸುಮಾರು 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮತ್ತು ಜೈಲು ಆಡಳಿತ ದೃಢಪಡಿಸಿದೆ.

ಏನಿದು ಪ್ರಕರಣ ?

ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರ್ತಿಕೆರೆ ಗ್ರಾಮದ ಅವುಕ ರಸ್ತೆ ನಿವಾಸಿ ಸತೀಶ್ ಶೆಟ್ಟಿ (55) ಎಂಬವರನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫಯಾಜ್ (ಕೋಳಿ ಫಯಾಜ್) (41) ಮತ್ತು ಕೃಷ್ಣ (49) ಎಂಬುವರಿಗೆ ಸಾಗರ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಕಳೆದ ಏ. 29 ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿತ್ತು.

ಸತೀಶ್ ಶೆಟ್ಟಿ ಅವರು ಫಯಾಜ್ ಹಾಗೂ ಕೃಷ್ಣ ಅವರೊಂದಿಗೆ ಗಾರೆ ಕೆಲಸ ಮಾಡುತ್ತಿದ್ದು ಕಟ್ಟಡ ನಿರ್ಮಾಣವೊಂದರ ಕೂಲಿ ಹಣವನ್ನು ಫಯಾಜ್ ಹಾಗೂ ಕೃಷ್ಣರಿಗೆ ಸತೀಶ್ ಶೆಟ್ಟಿ ಪಾವತಿಸಬೇಕಿತ್ತು. ಈ ವಿಷಯದಲ್ಲಿ ಅವರ ನಡುವೆ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ 2021ರ ಡಿ.22ರಂದು ರಾತ್ರಿ 11 ಗಂಟೆಗೆ ಫಯಾಜ್ ಹಾಗೂ ಕೃಷ್ಣ ಒಟ್ಟಿಗೆ ಸೇರಿ ಸತೀಶ್ ಶೆಟ್ಟಿ ಅವರನ್ನು ಅಮೃತ ಗ್ರಾಮದ ಕೆಳಗಿನ ಕೆರೆಯ ದಂಡೆಗೆ ಕರೆದುಕೊಂಡು ಹೋಗಿ ಅವರ ಕುತ್ತಿಗೆಗೆ ಕತ್ತಿ ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ನಂತರ ಅನುಮಾನ ಬರಬಾರದು ಎಂದು ಸತೀಶ್ ಶೆಟ್ಟಿ ಅವರ ಶವವನ್ನು ಕೆರೆಗೆ ಎಸೆದು ಸಾಕ್ಷ್ಯ ನಾಶ ಮಾಡಲು ಮುಂದಾಗಿದ್ದರು. ಸತೀಶ್ ಶೆಟ್ಟಿ ಅವರ ಶವ ಕೆರೆಯ ಮೇಲ್ಭಾಗದಲ್ಲಿ ಕಾಣಿಸಿಕೊಂಡಿತ್ತು.

ಕೊಲೆಯಾದ ದಿನ ಸತೀಶ್ ಶೆಟ್ಟಿ ಅವರೊಂದಿಗೆ ಫಯಾಜ್ ಹಾಗೂ ಕೃಷ್ಣ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಕಾರಣ ಸತೀಶ್ ಶೆಟ್ಟಿ ಅವರ ಸಹೋದರಿ ಗುಲಾಬಿ ಅವರ ಗಂಡ ರಾಜುಶೆಟ್ಟಿ ಅವರು ಕೊಲೆ ಪ್ರಕರಣ ಎಂದು ರಿಪ್ಪನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ನಡೆಸಿದ ಪೊಲೀಸರು ಫಯಾಜ್ ಹಾಗೂ ಕೃಷ್ಣ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

Leave a Comment