ರವಿ ಉದಯಿಸುವುದು ಕೊಂಚ ತಡವಾದೀತು…. ಕೆಲವೊಮ್ಮೆ ಹೂವು ದೇವರ ಮುಡಿಯೇರುವುದು ವಿಳಂಬವಾದೀತು….. ಆದರೆ ಗೌರಜ್ಜಿ ಶಾಲೆಯ ಮುಂದೆ ಹಾಜರಾಗುವುದು ನಿಲ್ಲದು. ಶಾಲೆಗೆ ರಜೆ ಇದ್ದರೂ ಸರಿ ಇಲ್ಲದಿದ್ದರೂ ಸರಿಯೇ. ಅರವತ್ತೆಂಟರ ಪ್ರಾಯದ ಗೌರಜ್ಜಿ ಊರುಗೋಲನ್ನು ಹಿಡಿದು ಸೊಂಟದಲ್ಲಿ ಬುಟ್ಟಿಯನ್ನು ಎತ್ತಿಕೊಂಡು ಶಾಲೆಯ ಮುಂಭಾಗದಲ್ಲೇ ಕುಳಿತು ವ್ಯಾಪಾರ ಮಾಡುತ್ತಿದ್ದರು.
ಬೊಚ್ಚು ಬಾಯಿ ಸುಂದರಿ. ಸದಾ ಹಸನ್ಮುಖಿ ಗೌರಜ್ಜಿಗೆ ಮಕ್ಕಳನ್ನು ಕಂಡರೆ ಅದೆಲ್ಲಿಲ್ಲದ ಪ್ರೀತಿ. ಹಣವಿದ್ದ ಮಕ್ಕಳಿಗೂ, ಹಣವಿಲ್ಲದ ಮಕ್ಕಳಿಗೂ, ಸಾಲ ಬರೆಸಿದ ಮಕ್ಕಳಿಗೂ ತಿಂಡಿಗಳನ್ನು ಕೊಡುತ್ತಿದ್ದರು. ಎಲ್ಲರನ್ನೂ ಆತ್ಮೀಯರಾಗಿ ಕಾಣುತ್ತಿದ್ದರು. ಹಾಗಾಗಿ ಗೌರಜ್ಜಿ ಎಲ್ಲರ ಅಚ್ಚುಮೆಚ್ಚಾಗಿದ್ದರು. ಬುಟ್ಟಿಯಲ್ಲಿ ತರಹೇವಾರಿ ತಿನಿಸುಗಳಿರುತ್ತಿದ್ದವು. ಖಾರ ಹಚ್ಚಿದ ಸೌತೆಕಾಯಿ, ಕಿತ್ತಲೆ ಹಣ್ಣು, ಸೀಬೆಕಾಯಿ, ನೆಲ್ಲಿಕಾಯಿ, ಮುಸುಕಿನ ಜೋಳ, ನಿಂಬೆಹುಳಿ ಚಾಕಲೇಟ್, ಬುಟ್ಟಿಯಲ್ಲಿರುತ್ತಿತ್ತು. ತಿಂಡಿಗಳೆಲ್ಲವೂ ಖಾಲಿಯಾಗದ ಹೊರತು ಆ ಜಾಗದಿಂದ ಮೇಲೇಳುತ್ತಿರಲಿಲ್ಲ. ಇದು ಗೌರಜ್ಜಿ ಸಂಕಲ್ಪವಾಗಿತ್ತು. ಇದಕ್ಕವರು ಬದ್ಧರಾಗಿದ್ದರು.
ಈ ಇಳಿ ವಯಸ್ಸಿನಲ್ಲೂ ಅದೆಂಥಹ ಬತ್ತದ ಉತ್ಸಾಹ. ಸದಾ ಚಟುವಟಿಕೆಯಿಂದ ಕೆಲಸ ನಿರ್ವಹಿಸುವುದು ನೋಡಿ ನಾನು ಬೆರಗಾಗಿದ್ದೆ. ಅಜ್ಜಿಯೊಡನೆ ಸ್ನೇಹ ಬೆಳೆಸಿಕೊಂಡಿದ್ದೆ. ಕೆಲವೊಮ್ಮೆ ಹಾಗೆ ಉಚಿತವಾಗಿ ತಿನ್ನಿಸನ್ನು ಕೊಡುತ್ತಿದ್ದರು. ಆದರೆ ನಾನು ಹಣ ಪಾವತಿಸುತ್ತಿದ್ದೆ. ಪ್ರತಿದಿನ ನಾನು ಆ ದಾರಿಯಲ್ಲಿ ಕೆಲಸಕ್ಕೆ ಹೋಗಿ ಮತ್ತದೇ ದಾರಿಯಲ್ಲಿ ಮರಳುತ್ತಿದ್ದೆ. ಗೌರಜ್ಜಿ ನನಗೆ ಚಿರಪರಿಚಿತಳು. ಕೆಲಸಕ್ಕೆ ಹೋಗಿ ಬರುವಾಗ ಕುಶಲೊಪಚಾರಿ ವಿಚಾರಿಸುವುದು, ಮಾತನಾಡುವುದು ಸರ್ವೇ ಸಾಮಾನ್ಯವಾಗಿತ್ತು.
ಅಂದು ಭಾನುವಾರ ಶಾಲೆಗೆ ರಜೆ ಇತ್ತು. ಆದರೂ ಅಜ್ಜಿ ಬುಟ್ಟಿ ಹಿಡಿದು ಶಾಲೆ ಎದುರು ಕುಳಿತು ವ್ಯಾಪಾರ ಮಾಡಲೆಂದು ಹಾಜರಿದ್ದಳು. ಹನ್ನೆರಡು ಗಂಟೆಯ ಸಮಯ ಬಿಸಿಲಿನ ಬೇಗೆ ಹೆಚ್ಚಿತ್ತು. ಮಧ್ಯಾಹ್ನದ ಸಮಯದಲ್ಲಿ ಅಲ್ಲಿ ಹೆಚ್ಚು ಜನಸಂದಣಿ ಇರುತ್ತಿರಲಿಲ್ಲ. ಈ ಸಮಯದಲ್ಲಿ ಗೌರಜ್ಜಿ ತಲೆಸುತ್ತಿ ಕೆಳಗೆ ಬಿದ್ದು ಬಿಟ್ಟಿದ್ದರು.
ಎಂದಿನಂತೆ ನಾನು ಊಟಕ್ಕೆಂದು ಮನೆಗೆ ಬರುವಾಗ ಅಜ್ಜಿಯನ್ನು ಕಂಡೆ ಗಾಬರಿಯಾಯ್ತು. ಆ ಕ್ಷಣಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ನಂತರ ಸಾವರಿಸಿಕೊಂಡು ಹೋಗುತ್ತಿದ್ದ ಆಟೋ ಒಂದನ್ನು ಕೂಗಿ ಕರೆದೆ. ಆಟೋರಿಕ್ಷಾದವರ ಸಹಾಯದಿಂದ ಅಜ್ಜಿಯನ್ನು ಆಟೋದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಧಾವಿಸಿದೆ. ವೈದ್ಯರು ಅಜ್ಜಿಯನ್ನು ಪರೀಕ್ಷಿಸಿ ಸುಸ್ತಾಗಿದ್ದಾರೆ ಇವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿ ಡ್ರಿಪ್ಸ್ ಹಾಕಿದರು. ಅದು ಖಾಲಿಯಾಗುವ ವೇಳೆಗೆ ಅಜ್ಜಿಗೆ ಪ್ರಜ್ಞೆ ಬಂತು. ಅಜ್ಜಿಗೆ ಕಾಫಿ ತಿಂಡಿ ತಂದುಕೊಟ್ಟೆ. ನಿನ್ನ ಪ್ರಕಾರವನ್ನು ನಾನೆಂದಿಗೂ ಮರೆಯೋದಿಲ್ಲಮ್ಮ ಎಂದು ಕಣ್ಣೀರಿಟ್ಟರು. ಅನಂತರ ಅಜ್ಜಿ ಗುಡಿಸಲಿಗೆ ಬಿಟ್ಟು ಬಂದೆ.
ಎಂದೂ ತನ್ನ ಕಷ್ಟವನ್ನು ಯಾರೊಂದಿಗೂ ಹೇಳಿಕೊಳ್ಳದ, ಹೇಳ ಬಯಸದ ಗೌರಜ್ಜಿ ಅವರ ಜೀವನದ ಕಥೆ ಹೇಳ ತೊಡಗಿದರು. ಈ ಮುಂಚೆ ಹಾಗೆ ಅತ್ತದ್ದು ನಾನೆಂದು ಕಂಡಿರಲಿಲ್ಲ. ಗಂಡ ತೀರಿಕೊಂಡು ವರ್ಷಗಳೇ ಕಳೆಯಿತು. ಮುದ್ದಾದ
ಮಗನೊಬ್ಬನಿದ್ದ. ಹೀಗೆ ಸಣ್ಣಪುಟ್ಟ ವ್ಯಾಪಾರ ಮಾಡಿ ಚೆನ್ನಾಗಿ ಓದಿಸಿದೆ. ಮಗನೀಗ ಬೆಂಗಳೂರಿನಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ. ಅವನ ಆಸೆಗೆ ನಾನೆಂದು ಅಡ್ಡಿ ಬರುತ್ತಿರಲಿಲ್ಲ. ಆದರೆ ಅವನಿಗೆ ಏನಾಯಿತು ಗೊತ್ತಿಲ್ಲ. ನನಗೊಂದು ಮಾತು ಹೇಳದೆ ಮದುವೆಯೂ ಆಗಿದ್ದಾನೆ. ಅವನ ಹೆಂಡತಿಯೊಂದಿಗೆ ಸುಖವಾಗಿದ್ದಾನೆ. ಸುಖವಾಗಿರಲಿ. ಆದರೆ ನಾನು ಅವನಿಗೆ ಬೇಡ.ನಿಟ್ಟುಸಿರು ಬಿಡುತ್ತಾ ಪರವಾಗಿಲ್ಲ…. ಯಾರ ಸಹಾಯವಿಲ್ಲದೆ ನಾನು ಬದುಕಬಲ್ಲೆ.ನನ್ನ ಬದುಕನ್ನು, ನನ್ನ ಮಗನ ಬದುಕನ್ನು ರೂಪಿಸಿದ, ರೂಪಿಸಿಕೊಂಡ ನನಗೆ, ಈಗ ಬದುಕು ಭಾರವೆ ? ದುಡಿದು ತಿನ್ನಲು ನಾನು ಅಂಜುವೇನೇ ?
ಎಷ್ಟು ದಿನ ದೇಹದಲ್ಲಿ ದುಡಿಯಲು ಚೈತನ್ಯ ಮತ್ತು ಶಕ್ತಿ ಇರುತ್ತದೆಯೋ ಅಲ್ಲಿಯ ತನಕವೂ ದುಡಿದು ತಿನ್ನುತ್ತೇನೆ. ಯಾರ ಮುಂದೆಯೂ ಕೈಯೊಡ್ಡಿ ಅಬಲೆಯಾಗಿ ಬದುಕಲಾರೆ ಎನ್ನುತ್ತಾಳೆ ಸ್ವಾಭಿಮಾನಿ ಅನಕ್ಷರಸ್ಥೆ ಗೌರಜ್ಜಿ…
ಆಗದಿದ್ದ ಕಾಲಕ್ಕೆ ನಮ್ಮಂಥವರಿಗೊಂದು ನಿರ್ಮಾಣಗೊಂಡ ವೃದ್ಧಾಶ್ರಮಗಳಿವೆ. ಕೂಡಿಟ್ಟ ಹಣವನ್ನು ಆಶ್ರಮಕ್ಕೆ ಕೊಡುತ್ತೇನೆ. ಅಲ್ಲಿ ನನ್ನ ಜೀವನದ ಕೊನೆಯ ದಿನಗಳನ್ನು ಕಳೆಯುತ್ತೇನೆ. ಒಂಟಿಯಾಗಿ ಎಲ್ಲವನ್ನು ಎದುರಿಸುವ ಶಕ್ತಿ ನನಗಿದೆ. ನನ್ನಿಂದ ಎಲ್ಲವೂ ದೂರಾದರು, ಬಂದಂತೆ ಬದುಕು ಸ್ವೀಕರಿಸುವುದನ್ನು ಕಲಿತಿದ್ದೇನೆ. ನಾನು ಯಾರಿಗೂ ಭಾರವಾಗಲು ಬಯಸುವುದಿಲ್ಲ. ಯಾರ ಹಂಗಿನಲ್ಲಿ ಇರುವುದಿಲ್ಲ. ಹಾಗೆಂದ ಮಾತ್ರಕ್ಕೆ ಅಹಂಕಾರಿ ನಾನಲ್ಲ.
ದೇಹದಲ್ಲಿ ಶಕ್ತಿ ಕುಂದುವವರೆಗೆ ಬದುಕಲೇಬೇಕೆಂಬ, ಬದುಕಿಗೆ ಸವಾಲೊಡ್ಡುವ ಛಲ ನನ್ನದಷ್ಟೇ ಎಂದು ಕಣ್ ತುಂಬಿಕೊಂಡಳು. ಅವಳ ಮಾತುಗಳನ್ನು ಕೇಳಿದ ನನಗೆ ಮೈ ರೋಮಾಂಚನವಾಯಿತು.
ಗೌರಜ್ಜಿ ಆದರ್ಶ ವನಿತೆಯಾಗಿ, ಸ್ವಾಭಿಮಾನದ ಮೂರ್ತವೆತ್ತ ರೂಪವಾಗಿ ಕಂಡಳು. ಅವಳ ಮಾತಿಗೆ ನಾನು ಮೂಕ ವಿಸ್ಮಿತಳಾದೆ. ಅಲ್ಲಿಂದ ಹೊರಟೆ. ದಾರಿಯಲ್ಲಿ ಬರುತ್ತಿರುವಾಗ ಅವಳ ಮಾತುಗಳು ಮನದಲ್ಲಿ ರಿಂಗಣಿಸುತ್ತಿತ್ತು.
ನೊಂದ ಜೀವಗಳಿಗೆ ಗೌರಜ್ಜಿಯ ಆದರ್ಶ ವ್ಯಕ್ತಿತ್ವವು, ದಿಟ್ಟತನವು, ಸ್ವಾಭಿಮಾನವು, ಹೊಸ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದೆನಿಸಿತು. ಗೌರಜ್ಜಿಯ ಬಗ್ಗೆ ಹೆಮ್ಮೆಯ ಭಾವ ಮನದಿ ಮೂಡಿತು.
ಎರಡು ದಿನ ರಜೆಯನ್ನು ಪಡೆದು ವಿಶ್ರಾಂತಿಯಲ್ಲಿದ್ದ ಗೌರಜ್ಜಿ ಮತ್ತೆ ಶಾಲೆಯೆದುರಿಗೆ ಎಂದಿನಂತೆ ಹಾಜರಿದ್ದರು ಮತ್ತದೇ ಚುರುಕುತನದಿಂದ, ಮುಗ್ದ ನಗುಮುಖದಿಂದ…..
✍️ ಅಂಬಿಕಾ ಸಂತೋಷ್, ಶಿಕ್ಷಕಿ ಮತ್ತು ಸಾಹಿತಿ, ಹೊಸನಗರ