ಚಿಕ್ಕಮಗಳೂರು ; ಮನೆಯಲ್ಲಿ ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಲೇಖನಾ (10) ಮೃತ ದುರ್ದೈವಿ. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ದುರ್ಘಟನೆ ನಡೆದಿದೆ. ಮನೆಯಲ್ಲಿ ಜೋಕಾಲಿ ಆಡುವಾಗ ಸೀರೆ ಉರುಳಾಗಿ ಬಾಲಕಿ ಸಾವನ್ನಪ್ಪಿದ್ದಾಳೆ.
ಘಟನೆ ನಡೆದ ಸಮಯದಲ್ಲಿ ಬಾಲಕಿಯ ಪೋಷಕರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಮನೆಯವರು ಹೊರಗೆ ಹೋಗಿದ್ದಾಗ ಒಂಟಿಯಾಗಿದ್ದ ಲೇಖನಾ, ಮನೆಯಲ್ಲಿ ಹಾಕಿದ್ದ ಸೀರೆ ಜೋಕಾಲಿಯಲ್ಲಿ ಆಟವಾಡಲು ಮುಂದಾಗಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಸೀರೆ ಆಕೆಯ ಕೊರಳಿಗೆ ಬಿಗಿದುಕೊಂಡಿದೆ. ಗಾಬರಿಗೊಂಡ ಬಾಲಕಿ ಸೀರೆಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗದೆ, ಕತ್ತು ಸಿಲುಕಿ ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಪೋಷಕರು ಮನೆಗೆ ಮರಳಿದಾಗ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ.
ಚಿಕ್ಕಮಗಳೂರು ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

