ಶಿವಮೊಗ್ಗ

ಅಡಿಕೆ ತೋಟದಲ್ಲಿ ಕೆಲಸ ಮಾಡುವಾಗ ಅವಘಡ ಸಂಭವಿಸಿದರೆ ಆತಂಕ ಬೇಡ: ಮಾಮ್‌ಕೋಸ್ ‘ಅಭಿರಕ್ಷೆ ಯೋಜನೆ’ಯ ಸಂಪೂರ್ಣ ವಿವರ ಇಲ್ಲಿದೆ

'ಮಾಮ್‌ಕೋಸ್' ಕೃಷಿ ಕೂಲಿ ಕಾರ್ಮಿಕರಿಗಾಗಿ ಜಾರಿಗೆ ತಂದಿರುವ ಮಹತ್ವದ ‘ಗುಂಪು ವಿಮಾ ಅಭಿರಕ್ಷೆ ಯೋಜನೆ’ಯನ್ನು 2026-27ನೇ ಸಾಲಿಗೂ ವಿಸ್ತರಿಸಿ ಆದೇಶ ಹೊರಡಿಸಿದೆ.

Mamcos

ಶಿವಮೊಗ್ಗ: ಪ್ರಸಿದ್ಧ ಅಡಿಕೆ ಮಾರಾಟ ಸಹಕಾರ ಸಂಘವಾದ ‘ಮಾಮ್‌ಕೋಸ್’ (ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿ., ಶಿವಮೊಗ್ಗ) ತನ್ನ ಸದಸ್ಯರು, ಅವರ ಕುಟುಂಬಸ್ಥರು ಹಾಗೂ ಅವರನ್ನೇ ಅವಲಂಬಿಸಿರುವ ಕೃಷಿ ಕೂಲಿ ಕಾರ್ಮಿಕರಿಗಾಗಿ ಜಾರಿಗೆ ತಂದಿರುವ ಮಹತ್ವದ ‘ಗುಂಪು ವಿಮಾ ಅಭಿರಕ್ಷೆ ಯೋಜನೆ’ಯನ್ನು 2026-27ನೇ ಸಾಲಿಗೂ ವಿಸ್ತರಿಸಿ ಆದೇಶ ಹೊರಡಿಸಿದೆ.

WhatsApp Group Join Now
Telegram Group Join Now
Instagram Group Join Now

2007-08ನೇ ಸಾಲಿನಿಂದ ಯಶಸ್ವಿಯಾಗಿ ನಡೆಯುತ್ತಿರುವ ಈ ಯೋಜನೆಯಡಿ, ಕೃಷಿ ಜಮೀನಿನಲ್ಲಿ ಕೆಲಸ ನಿರ್ವಹಿಸುವ ವೇಳೆ ಸಂಭವಿಸುವ ಆಕಸ್ಮಿಕ ಅಪಘಾತಗಳಿಗೆ ಗರಿಷ್ಠ 7 ಲಕ್ಷ ರೂಪಾಯಿಗಳವರೆಗೆ ಮರಣ ಪರಿಹಾರ ಹಾಗೂ 2 ಲಕ್ಷ ರೂಪಾಯಿಗಳವರೆಗೆ ಆಸ್ಪತ್ರೆ ಚಿಕಿತ್ಸಾ ವೆಚ್ಚ ಭರಿಸುವ ಸೌಲಭ್ಯ ಕಲ್ಪಿಸಲಾಗಿದೆ.

ಪ್ರಮುಖ ಸೌಲಭ್ಯಗಳು ಹಾಗೂ ವಯೋಮಿತಿ ವಿವರ:

70 ವರ್ಷದೊಳಗಿನ ಸದಸ್ಯರು ಹಾಗೂ ಕಾರ್ಮಿಕರು: ಜಮೀನಿನಲ್ಲಿ ಕೆಲಸ ಮಾಡುವಾಗ ಅಪಘಾತ ಸಂಭವಿಸಿದರೆ ಗರಿಷ್ಠ 2 ಲಕ್ಷ ರೂ. ಚಿಕಿತ್ಸಾ ವೆಚ್ಚ, 1,000 ರೂ. ಅಂಬ್ಯುಲೆನ್ಸ್ ವೆಚ್ಚ ಸಿಗಲಿದೆ. ಅಪಘಾತದಿಂದ ಮರಣ ಹೊಂದಿದಲ್ಲಿ ಗರಿಷ್ಠ 7 ಲಕ್ಷ ರೂ. ಪರಿಹಾರ ಹಾಗೂ ಮೃತದೇಹ ಸಾಗಣೆಗೆ 2,500 ರೂ. ನೀಡಲಾಗುತ್ತದೆ (ವಾರ್ಷಿಕ ಪ್ರೀಮಿಯಂ: 1,300 ರೂ.).

71 ರಿಂದ 80 ವರ್ಷದೊಳಗಿನ ಸದಸ್ಯರು: ಸದಸ್ಯರಿಗೆ ಗರಿಷ್ಠ 1.50 ಲಕ್ಷ ರೂ. ಮತ್ತು ಕಾರ್ಮಿಕರಿಗೆ 2 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ ಲಭ್ಯ. ಮರಣ ಹೊಂದಿದರೆ ಸದಸ್ಯರಿಗೆ 5 ಲಕ್ಷ ರೂ. ಹಾಗೂ ಕಾರ್ಮಿಕರಿಗೆ 7 ಲಕ್ಷ ರೂ. ಪರಿಹಾರ ದೊರೆಯಲಿದೆ (ವಾರ್ಷಿಕ ಪ್ರೀಮಿಯಂ: 1,130 ರೂ.).

81 ರಿಂದ 90 ವರ್ಷದೊಳಗಿನ ಹಿರಿಯ ಸದಸ್ಯರು: ಸದಸ್ಯರಿಗೆ 1 ಲಕ್ಷ ರೂ. ಹಾಗೂ ಕಾರ್ಮಿಕರಿಗೆ 2 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ, ಅಪಘಾತ ಮರಣಕ್ಕೆ ಸದಸ್ಯರಿಗೆ 4 ಲಕ್ಷ ರೂ. ಹಾಗೂ ಕಾರ್ಮಿಕರಿಗೆ 7 ಲಕ್ಷ ರೂ. ಪರಿಹಾರ ಒದಗಿಸಲಾಗುತ್ತದೆ (ವಾರ್ಷಿಕ ಪ್ರೀಮಿಯಂ: 1,070 ರೂ.).

ಸದಸ್ಯರ ಕುಟುಂಬ ವರ್ಗಕ್ಕೆ: 70 ವರ್ಷದೊಳಗಿನ ಪತಿ/ಪತ್ನಿ, ಮಗ, ಸೊಸೆ ಹಾಗೂ ಅವಿವಾಹಿತ ಮಗಳಿಗೆ ತಲಾ 170 ರೂ. ಪ್ರೀಮಿಯಂ ಪಾವತಿಸಿ ನೋಂದಾಯಿಸಬಹುದು. ಇವರಿಗೆ 50,000 ರೂ.ವರೆಗೆ ಚಿಕಿತ್ಸಾ ವೆಚ್ಚ ಮತ್ತು ಅಪಘಾತ ಮರಣಕ್ಕೆ 2 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಗಿದೆ.

ಹೆಚ್ಚುವರಿ ಕಾರ್ಮಿಕರ ನೋಂದಣಿ: 70 ವರ್ಷದೊಳಗಿನ ಹೆಸರಿಸದ ಹೆಚ್ಚುವರಿ ಕೂಲಿ ಕಾರ್ಮಿಕರಿಗೆ ತಲಾ 650 ರೂ. ಪಾವತಿಸಿ ವಿಮಾ ರಕ್ಷಣೆ ಪಡೆಯಲು ಅವಕಾಶವಿದೆ.

ನೋಂದಣಿ ಅವಧಿ ಹಾಗೂ ಚಾಲ್ತಿ ದಿನಾಂಕ:

ಮೊದಲ ಹಂತ: ವಿಮಾ ಕಂತು ಸಂಗ್ರಹದ ಅವಧಿ ಏಪ್ರಿಲ್ 1, 2026 ರಿಂದ ಮೇ 26, 2026 ರವರೆಗೆ ಇರಲಿದ್ದು, ಯೋಜನೆ ಜೂನ್ 1, 2026 ರಿಂದ ಮೇ 31, 2027 ರವರೆಗೆ ಚಾಲ್ತಿಯಲ್ಲಿರುತ್ತದೆ.

ಎರಡನೇ ಹಂತ: ಅಕ್ಟೋಬರ್ 1, 2026 ರಿಂದ ನವೆಂಬರ್ 25, 2026 ರವರೆಗೆ ಪ್ರೀಮಿಯಂ ಪಾವತಿಗೆ ಅವಕಾಶವಿದ್ದು, ಡಿಸೆಂಬರ್ 1, 2026 ರಿಂದ ನವೆಂಬರ್ 30, 2027 ರವರೆಗೆ ಯೋಜನೆ ಅನ್ವಯವಾಗಲಿದೆ.

ನಿಯಮಗಳು ಮತ್ತು ನಿಬಂಧನೆಗಳು:

  • ಈ ವಿಮೆಯು ಸದಸ್ಯರ ಕೃಷಿ ಜಮೀನಿನಲ್ಲಿ ಕೆಲಸ ನಿರ್ವಹಿಸುವಾಗ ಸಂಭವಿಸುವ ಆಕಸ್ಮಿಕ ಅಪಘಾತಗಳಿಗೆ ಮಾತ್ರ ಅನ್ವಯಿಸುತ್ತದೆ. ಸ್ವಾಭಾವಿಕ ಸಾವು ಅಥವಾ ಅನಾರೋಗ್ಯದ ಸಮಸ್ಯೆಗಳಿಗೆ ಪರಿಹಾರ ಅನ್ವಯಿಸುವುದಿಲ್ಲ.
  • ಅಪಘಾತದ ಸಮಯದಲ್ಲಿ ಮದ್ಯಪಾನ ಅಥವಾ ಇನ್ನಾವುದೇ ವ್ಯಸನಯುಕ್ತರಾಗಿದ್ದರೆ ಕ್ಲೈಮ್ ತಿರಸ್ಕೃತಗೊಳ್ಳಲಿದೆ.
  • ಅಪಘಾತ ಸಂಭವಿಸಿದ 10 ದಿನಗಳ ಒಳಗೆ ಹತ್ತಿರದ ಶಾಖೆಗೆ ಲಿಖಿತವಾಗಿ ಮಾಹಿತಿ ನೀಡಬೇಕು. ಕ್ಲೈಮ್ ಪಡೆಯಲು ಪೊಲೀಸ್ ದೂರು/ಎಫ್‌ಐಆರ್ (FIR), ಆಸ್ಪತ್ರೆ ದಾಖಲೆಗಳು, ವೈದ್ಯರ ಪ್ರಮಾಣಪತ್ರ, ಬಿಲ್‌ಗಳು, ಜಾಗದ ಪಹಣಿ ಹಾಗೂ ಫೋಟೋಗಳನ್ನು ಒದಗಿಸುವುದು ಕಡ್ಡಾಯ.
  • ಸದಸ್ಯರ ಉಳಿತಾಯ ಖಾತೆಯಿಂದಲೇ ನೇರವಾಗಿ ವಿಮಾ ಕಂತನ್ನು ಜಮಾ ಮಾಡಿಕೊಳ್ಳಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ, ಹೊಸನಗರ, ಸಾಗರ, ತೀರ್ಥಹಳ್ಳಿ, ಭದ್ರಾವತಿ, ತರೀಕೆರೆ, ಕೊಪ್ಪ, ಶೃಂಗೇರಿ ಸೇರಿದಂತೆ ಸ್ಥಳೀಯ ಮಾಮ್‌ಕೋಸ್ ಶಾಖೆಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!