HOSANAGARA ; ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿಯವರನ್ನು ಹತ್ಯೆ ಮಾಡುವ ಉದ್ದೇಶದಿಂದ ಬಂಧಿಸಿ ಖಾನಪುರ ಠಾಣೆಗೂ ಹೋಗದೇ ಎರಡ್ಮೂರು ಜಿಲ್ಲೆ, ತಾಲ್ಲೂಕುಗಳಿಗೆ ಸುತ್ತಿಸಿ ರಾತ್ರಿಯಿಡಿ ಹಿಂಸೆ ನೀಡುವ ಉದ್ದೆಶವೇನಿತ್ತು? ಎಂದು ಮಾಜಿ ಗೃಹ ಸಚಿವ ಹಾಗೂ ವಿಧಾನಸಭೆ ಸದಸ್ಯ ಆರಗ ಜ್ಞಾನೇಂದ್ರ ಸರ್ಕಾರವನ್ನು ಪಶ್ನಿಸಿದ್ದು ತಕ್ಷಣ ಸಿ.ಟಿ. ತನಿಖೆಯನ್ನು ನ್ಯಾಯಾಂಗ ಇಲಾಖೆಗೆ ವಹಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಇಲ್ಲಿನ ಶಾಸಕರ ಕಛೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ರಾಷ್ಟ್ರದ್ರೋಹಿ ಕೂಗು ಹಾಕಿದರೇ ಅದನ್ನು ಎಫ್ಎಸ್ಎಲ್‌ಗೆ ಕಳುಹಿಸಬೇಕು ಎಂದು ಬೊಬ್ಬೆ ಹಾಕುವ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ನಾಲ್ಕು ದಿನಗಳ ಕಾಲಹರಣ ಮಾಡವವರು ಸಿ.ಟಿ ರವಿಯವರ ಪ್ರಕರಣವನ್ನು ತಕ್ಷಣ ಬಂಧಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸುವ ಅರ್ಜೆಂಟ್ ಏನಿತ್ತು? ಎಂದು ಪ್ರಶ್ನಿಸಿದರು.
ಸಿ.ಟಿ. ರವಿಯವರನ್ನು ಉಳಿಸಿದ್ದು ಮಾಧ್ಯಮದವರು ಎಂದರೆ ತಪ್ಪಗಲಾರದು, ಮಾಧ್ಯಮದವರು ಪೊಲೀಸ್ ಇಲಾಖೆಯ ಚಲನ-ವಲನದ ಬಗ್ಗೆ ಹಾಗೂ ಅವರ ಜೀಪ್ ಹಿಂಬಾಲಿಸಿದ್ದರಿಂದ ಏನೂ ಮಾಡಲು ಸಾಧ್ಯವಾಗಿಲ್ಲ. ಸಿ.ಟಿ ರವಿಯವರ ಅದೃಷ್ಟ ಗಟ್ಟಿಯಾಗಿರುವುದರಿಂದ ಬದುಕಿ ಬಂದಿದ್ದಾರೆ ಎಂದರು.
ವಿಧಾನಸಭೆಯ ಒಳಗೆ ಗನ್‌ಮ್ಯಾನ್ ಹಾಗೂ ಶಾಸಕರ ಪಿ.ಎಗೆ ಬಿಡುವುದಿಲ್ಲ. ಈ ಕಾಂಗ್ರೆಸ್ ಸರ್ಕಾರದಲ್ಲಿ ಗೂಂಡಾಗಳಿಗೆ ಒಳಗೆ ಬಿಡುವ ಪರಿಪಾಠ ಮಾಡಿಕೊಂಡಿದ್ದು ಇಲ್ಲವಾದರೆ ಸಿ.ಟಿ.ರವಿಯವರ ಘಟನೆಯಲ್ಲಿ ವಿಧಾನ ಪರಿಷತ್ ಒಳಗೆ ನುಗ್ಗಿ ಹಲ್ಲೆ ಮಾಡುತ್ತಾರೆ ಎಂದರೆ ಯಾವ ಅರ್ಥ? ಶಾಸಕರಿಗೆ ರಕ್ಷಣೆ ಇಲ್ಲವಾಗಿದ್ದು ಇನ್ನೂ ಸಾಮಾನ್ಯರ ಪರಿಸ್ಥಿತಿ ಯಾವ ರೀತಿ ಇರಬಹುದು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 19 ತಿಂಗಳು ಕಳೆದಿದೆ ಮುಡಾ ಹಗರಣ ವಾಲ್ಮೀಕಿ ಹಗರಣದಿಂದ ಹೊರಬರಲು ಸಾಧ್ಯವಾಗದೇ ಇರುವುದು ಯಾವುದೇ ಅಭಿವೃದ್ಧಿ ಕೆಲಸ ನಡೆಯದೇ ಇರುವುದರಿಂದ ಹಾಗೂ ಎಲ್ಲಿ ನೋಡಿದರೂ ಲಂಚ ಪ್ರಕರಣ ಹೆಚ್ಚಾಗಿದ್ದು ಸಾಮಾನ್ಯ ಜನರ ಬದುಕಿಗೆ ಬೆಂಕಿ ಇಟ್ಟಿದ್ದಾರೆ ಎಂದರು.
ಲೋಕಸಭೆಯಲ್ಲಿ ರಾಹುಲ್‌ಗಾಂಧಿಯವರು ಇಬ್ಬರು ಬಿಜೆಪಿ ಸಂಸದರನ್ನು ಬೀಳಿಸಿ ಹಲ್ಲೆ ಮಾಡಿದ್ದು ಸರಿ ಎನ್ನುವ ಕಾಂಗ್ರೆಸಿಗರು ಸಿ.ಟಿ ರವಿಯವರನ್ನು ಬಂಧಿಸಲು ಮುಂದಾಗಿದ್ದು ಏಕೆ? ಎಂದು ಪ್ರಶ್ನಿಸಿದ ಅವರು, ಸಿ.ಟಿ ರವಿಯವರ ಪ್ರಕರಣವನ್ನು ನ್ಯಾಯಾಂಗ ಇಲಾಖೆಗೆ ಸರ್ಕಾರ ತಕ್ಷಣ ವಹಿಸಬೇಕು ಇಲ್ಲವಾದರೆ ರಾಜ್ಯಾದಂತ ಹೋರಾಟ ಅನಿವಾರ್ಯ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿರಿಯರಾದ ಉಮೇಶ್ ಕಂಚುಗಾರ್, ಹಾಲಗದ್ದೆ ಉಮೇಶ್, ಯುವರಾಜ್, ಸತೀಶ್, ಶಾಸಕರ ಆಪ್ತ ಕಾರ್ಯದರ್ಶಿ ಬಸವರಾಜ್, ರಾಜೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆ ಅಧ್ಯಕ್ಷನಿಗೆ ತಿರುಗೆಟು ನೀಡಿದ ಆರಗ :
ಹೊಸನಗರದ ಕಂದಾಯ ಇಲಾಖೆಯ ಆವರಣದಲ್ಲಿ ಕಾಂಗ್ರೆಸ್ ಪಕ್ಷ ಸಿ.ಟಿ.ರವಿ ಹಾಗೂ ಅಮಿತ್ ಶಾ ವಿರುದ್ಧ ಮಾತನಾಡುವಾಗ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಚಿದಂಬರರವರು ಸಿ.ಟಿ.ರವಿ ಹಾಗೂ ಅಮಿತ್ ಶಾ ವಿರುದ್ಧ ಏಕವಚನದಲ್ಲಿ ಬೈದಿದ್ದು ಈ ವಿಚಾರವನ್ನು ಪತ್ರಕರ್ತರು ಆರಗ ಜ್ಞಾನೇಂದ್ರರವರನ್ನು ಪಶ್ನಿಸಿದಾಗ, ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಅವರ ಮಾತಿನಲ್ಲಿ ತಿಳಿಯಲಿದೆ. ಆರೇಳು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುಳುಗಿದೆ. ಕರ್ನಾಟಕದಲ್ಲಿ ಏನೋ ಸಾಧನೆ ಮಾಡುತ್ತಿದ್ದೇವೆ ಎಂದು ತಿಳಿದು ಅಹಂಕಾರದ ಮಾತನಾಡುತ್ತಿದ್ದಾರೆ. ಅವರಿಗೆ ಮಾತನಾಡಲು ಬಿಡಬೇಕು ಮುಂದಿನ ದಿನದಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದರು.