ಶಿವಮೊಗ್ಗ

ರೈತರ ಪಂಪ್‌ಸೆಟ್‌ಗೆ ಹಗಲಲ್ಲೇ 8 ಗಂಟೆ ವಿದ್ಯುತ್ ನೀಡಿ, ಇಲ್ಲದಿದ್ದರೆ ಉಗ್ರ ಹೋರಾಟ: ಸರ್ಕಾರಕ್ಕೆ ಹರತಾಳು ಹಾಲಪ್ಪ ಎಚ್ಚರಿಕೆ!

BJP State Vice-President Haratalu Halappa has warned the state government that continuous power supply must be provided to farmers' agricultural pump sets for at least 7 to 8 hours during the daytime. He further cautioned that if this is not done, the agitation on behalf of the farmers will be intensified.

InShot 20261024 171835638

ಶಿವಮೊಗ್ಗ: ಮಳೆ ಕೊರತೆಯಿಂದಾಗಿ ಜಿಲ್ಲೆಯಾದ್ಯಂತ ಬೆಳೆಗಳು ಒಣಗುತ್ತಿದ್ದು, ಸಂಕಷ್ಟದಲ್ಲಿರುವ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲೇ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸಬೇಕು. ತಪ್ಪಿದಲ್ಲಿ ರೈತರ ಪರವಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಗ್ರಾಮಾಂತರ, ಸಾಗರ, ಸೊರಬ, ಹೊಸನಗರ ಹಾಗೂ ರಿಪ್ಪನ್‌ಪೇಟೆ ಭಾಗಗಳಲ್ಲಿ ಅನಿಯಮಿತ ವಿದ್ಯುತ್ ಕಡಿತದಿಂದ ರೈತರು ಕಂಗಾಲಾಗಿದ್ದಾರೆ. ಮಳೆ ಇಲ್ಲದೆ ಭತ್ತ ಹಾಗೂ ಜೋಳದ ಬೆಳೆಗಳು ಬಾಡುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಬಹುವಾರ್ಷಿಕ ಬೆಳೆಯಾದ ಅಡಿಕೆ ತೋಟಗಳಿಗೂ ನೀರಿಲ್ಲದೆ ಭಾರೀ ಹಾನಿಯಾಗಲಿದ್ದು, ಬೆಳೆಗಾರರು ದೀರ್ಘಕಾಲದ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಘೋಷಿತ ವಿದ್ಯುತ್ ಕಡಿತದ ಬರೆ:

ಈ ಹಿಂದೆ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ 7 ಗಂಟೆಗಳ ವಿದ್ಯುತ್ ಅನ್ನು ಮೇಲಧಿಕಾರಿಗಳ ಸೂಚನೆಯಂತೆ 6 ಗಂಟೆಗೆ ಇಳಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈ ಆರು ಗಂಟೆಗಳಲ್ಲೂ ನಿರಂತರ ವಿದ್ಯುತ್ ನೀಡದೆ ಅರ್ಧ-ಮುಕ್ಕಾಲು ಗಂಟೆ ಕಡಿತ ಮಾಡಲಾಗುತ್ತಿದೆ. ಕಡಿತಗೊಂಡ ಸಮಯವನ್ನು ಸರಿದೂಗಿಸಿ ಹೆಚ್ಚುವರಿ ವಿದ್ಯುತ್ ನೀಡುವಂತೆ ರೈತರು ಮಾಡುತ್ತಿರುವ ಮನವಿಗೆ ಮೆಸ್ಕಾಂ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ ಎಂದು ಹಾಲಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಗಲು ವೇಳೆ ಸಾಕಷ್ಟು ವಿದ್ಯುತ್ ಲಭ್ಯವಿದೆ ಎಂದು ಸರ್ಕಾರವೇ ಹೇಳಿಕೊಳ್ಳುತ್ತಿದೆ. ಅಲ್ಲದೆ, ಉದ್ದೇಶಿತ ಪಂಪ್ ಸ್ಟೋರೇಜ್ ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಿರುವಾಗ ರೈತರಿಗೆ ಹಗಲಿನಲ್ಲಿ 8 ಗಂಟೆ ವಿದ್ಯುತ್ ನೀಡಲು ಸರ್ಕಾರಕ್ಕೆ ಇರುವ ಅಡ್ಡಿಯಾದರೂ ಏನು? ಎಂದು ಅವರು ಪ್ರಶ್ನಿಸಿದರು.

ಕಾಡಾನೆ ಭೀತಿಯಲ್ಲಿ ರೈತರು:

ರಿಪ್ಪನ್‌ಪೇಟೆ ಸೇರಿದಂತೆ ಮಲೆನಾಡಿನ ಹಲವೆಡೆ ಕಾಡಾನೆಗಳ ಹಾವಳಿ ಮಿತಿಮೀರಿದೆ. ಹಿಂದೆ ಆನೆ ದಾಳಿಯಿಂದ ಸಾವು-ನೋವು ಸಂಭವಿಸಿದ ಉದಾಹರಣೆಗಳೂ ಇವೆ. ಇಂತಹ ಭಯಾನಕ ವಾತಾವರಣದಲ್ಲಿ ರೈತರು ರಾತ್ರಿ ವೇಳೆ ಜೀವ ಪಣಕ್ಕಿಟ್ಟು ತೋಟಗಳಿಗೆ ನೀರು ಹಾಯಿಸಲು ಹೋಗಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ರೈತರ ಜೀವ ರಕ್ಷಣೆಯ ದೃಷ್ಟಿಯಿಂದಲಾದರೂ ಹಗಲಿನಲ್ಲೇ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಮೆಸ್ಕಾಂ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಬರ:

ಲೈನ್‌ಮನ್‌ಗಳ ಕೊರತೆ:

ಜಿಲ್ಲೆಯಲ್ಲಿ ಶೇ.50ರಷ್ಟು ಲೈನ್‌ಮನ್ ಹುದ್ದೆಗಳು ಖಾಲಿ ಇವೆ. ಉದಾಹರಣೆಗೆ, ರಿಪ್ಪನ್‌ಪೇಟೆಯಲ್ಲಿ 28 ಸಿಬ್ಬಂದಿ ಇರಬೇಕಾದ ಜಾಗದಲ್ಲಿ ಕೇವಲ 16 ಮಂದಿ ಕೆಲಸ ಮಾಡುತ್ತಿದ್ದಾರೆ. 2019ರ ನಂತರ ಹೊಸ ನೇಮಕಾತಿ ನಡೆಯದಿರುವುದು ಮತ್ತು ವರ್ಗಾವಣೆಗಳಿಂದಾಗಿ ವಿದ್ಯುತ್ ಮಾರ್ಗಗಳ ದುರಸ್ತಿ ಹಾಗೂ ನಿರ್ವಹಣೆಗೆ ತೀವ್ರ ಹಿನ್ನಡೆಯಾಗಿದೆ.

ಪ್ರಭಾರ ಅಧಿಕಾರಿಗಳ ದರ್ಬಾರ್:

ಸಾಗರ ಮತ್ತು ಶಿಕಾರಿಪುರದ ಮೆಸ್ಕಾಂ ಕಚೇರಿಗಳಲ್ಲಿ ಕಾಯಂ ಅಧಿಕಾರಿಗಳಿಲ್ಲದೆ ಪ್ರಭಾರಗಳ ಮೇಲೆ ಆಡಳಿತ ನಡೆಯುತ್ತಿದೆ.

ಆಡಳಿತ ಯಂತ್ರ ಕುಸಿತ:

ಸಾಗರ ಹಾಗೂ ಹೊಸನಗರ ಭಾಗದ ವಿವಿಧ ಸರ್ಕಾರಿ ಇಲಾಖೆಗಳಲ್ಲೂ ಅಧಿಕಾರಿಗಳ ಕೊರತೆಯಿದೆ. ಸಾಗರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ (EO), ನಗರಸಭೆ ಆಯುಕ್ತರು ಹಾಗೂ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳ ಹುದ್ದೆಗಳು ಖಾಲಿ ಬಿದ್ದಿದ್ದು, ಸಾರ್ವಜನಿಕ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಮುಂಬರುವ ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ನವೇ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಮೆಸ್ಕಾಂ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಮಲೆನಾಡು ಮತ್ತು ಅರೆಮಲೆನಾಡು ಭಾಗದ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ನಿರ್ಲಕ್ಷ್ಯ ವಹಿಸಿದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಸೊರಬ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಉದ್ರಿ, ಜಾನಕಪ್ಪ, ಜಿಲ್ಲಾ ಮಾಧ್ಯಮ ಪ್ರಮುಖ ಮಂಜುನಾಥ್, ನಗರ ಮಂಡಲದ ಸಾಮಾಜಿಕ ಜಾಲತಾಣ ಪ್ರಮುಖರಾದ ಮುರಳಿ ಹಾಗೂ ಚಂದ್ರಶೇಖರ್ ಹಾಜರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!