ಮಲೆನಾಡು ಭಾಗದಲ್ಲಿ ಸುರಿದ ಭಾರಿ ಮಳೆ,  ಜಮೀನುಗಳು ಜಲಾವೃತ, ಹಲವೆಡೆ ಸಂಪರ್ಕ ಕಟ್ !

Written by malnadtimes.com

Published on:

CHIKKAMAGALURU / SHIVAMOGGA ; ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಸೋಮವಾರ ಸಂಜೆ ದಿಢೀರ್ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಆಲಿಕಲ್ಲು, ಗುಡುಗು-ಮಿಂಚು ಸಹಿತ ಆರ್ಭಟಿಸಿದ ಮಳೆಗೆ ಗ್ರಾಮೀಣ ಭಾಗದ ಜನರು ಮನೆಯಿಂದ ಹೊರಬರಲೂ ಸಾಧ್ಯವಾಗದೇ ಪರದಾಡಿದರು. ಭಾರೀ ಮಳೆಗೆ ರಸ್ತೆ ಮೇಲೆಯೇ ನೀರು ಹರಿದ ಪರಿಣಾಮ ವಾಹನಗಳ ಸಂಚಾರಕ್ಕೂ ತೊಂದರೆಯಾಗಿತ್ತು. ಜಮೀನುಗಳಿಗೆ ನೀರು ನುಗ್ಗಿದ ಘಟನೆ ಸಹ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಭಾರೀ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಹಲ್ಗೋಡು ಗ್ರಾಮದಲ್ಲಿ ಸೇತುವೆ ಮೇಲೆ ನೀರು ಹರಿದ ಪರಿಣಾಮ ಕಳಸ-ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿತಗೊಂಡಿತು.

ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ಸೇರಿದಂತೆ ಜಲ್ಲೆಯ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಇಡೀ ದಿನ ಬಿಸಿಲು ಹಾಗೂ ಸಂಜೆ ವೇಳೆ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಸೋಮವಾರ ಸಂಜೆ ಮಲೆನಾಡು ಭಾಗದ ತಾಲೂಕುಗಳಲ್ಲಿ ದಿಢೀರ್ ಸುರಿದ ಭಾರೀ ಮಳೆ ಸುರಿದಿದೆ. ಕಳಸ ತಾಲೂಕಿನ ಮರಸಣಿಗೆ, ಕಳಸ ಪಟ್ಟಣ, ಸಂಸೆ, ಕುದುರೆಮುಖ, ಜಾಂಬಳೆ, ಹಿರೇಬೈಲು ಭಾಗದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಭದ್ರಾ ನದಿಯಲ್ಲಿ ನೀರಿನ ಹರಿವು ದಿಢೀರ್ ಏರಿಕೆಯಾಗಿದೆ.

ಬಾಳೆಹೊನ್ನೂರು, ಮಾಗುಂಡಿ ಭಾಗದಲ್ಲೂ ಸಂಜೆ ನಿರಂತರವಾಗಿ ಮಳೆ ಸುರಿದಿದೆ‌‌. ಮಾಗುಂಡಿ ಸಮೀಪದ ಮಹಲ್ಗೋಡು ಎಂಬಲ್ಲಿ ಕಳಸ-ಬಾಳೆಹೊನ್ನೂರು ಸಂಪರ್ಕದ ಕಿರು ಸೇತುವೆ ಮೇಲೆ ಭಾರೀ ನೀರು ಹರಿದು ವಾಹನ ಸಂಚಾರ ಕಡಿತಗೊಂಡಿತು.

ಸೇತುವೆ ಜಲಾವೃತವಾದ ಹಿನ್ನೆಲೆಯಲ್ಲಿ ಸೇತುವೆ ಎರಡೂ ಬದಿಯಲ್ಲಿ ಸಾರಿಗೆ ಬಸ್‍ಗಳು, ಪ್ರವಾಸಿಗರ ವಾಹನ ಸೇರಿದಂತೆ ಸರಕು ವಾಹನಗಳು ಕಿ.ಮೀ ಉದ್ದಗಟ್ಟಲೆ ಸಾಲಿನಲ್ಲಿ ನಿಂತಿದ್ದವು, ಪ್ರಯಾಣಿಕರು ಪರದಾಡಿದ್ದಾರೆ.

ಸ್ಥಳೀಯರು ಸೇತುವೆ ಮೇಲಿನ ನೀರು ಹೊರ ಹೋಗುವಂತಾಗಲು ಸಂಜೆಯಿಂದ ರಾತ್ರಿವರೆಗೂ ಶ್ರಮಿಸಿದರು. ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಸೇತುವೆಯಲ್ಲಿ ವಾಹನಗಳ ಸಂಚಾರ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಮೂಡಿಗೆರೆ ತಾಲೂಕಿನ ಸುಂಕಸಾಲೆ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆಯಾಗಿದ್ದು, ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಸುರಿದ ಪರಿಣಾಮ ಕಾಫಿ, ಅಡಿಕೆ, ಕಾಳುಮೆಣಸು ಬೆಳೆಗೆ ಭಾರೀ ಹಾನಿ ಸಂಭವಿಸಿದೆ. ಅಲ್ಲಲ್ಲಿ, ಮರಗಳು ರಸ್ತೆಗೆ ಉರುಳಿದ ಪರಿಣಾಮ ಕಳಸ-ಕೊಟ್ಟಿಗೆಹಾರ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ತೊಂದರೆಯಾಗಿತ್ತು.

ಇನ್ನೂ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ, ಬಾಳೂರು, ಜಾವಳಿ ಸುತ್ತಮುತ್ತ ಭಾರೀ ಮಳೆಯಾಗಿದ್ದರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಭಾಗದಲ್ಲೂ ಸೋಮವಾರ ಭಾರೀ ಮಳೆ ಸುರಿದಿದೆ.

ಚಿಕ್ಕಮಗಳೂರು ನಗರದಲ್ಲೂ ಸೋಮವಾರ ಸಂಜೆ ದಿಢೀರ್ ಮಳೆಯಾಗಿದ್ದು, ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾದ ಪರಿಣಾಮ ನಗರದಲ್ಲಿ ಕೆಲ ಹೊತ್ತು ವಾಹನ, ಜನ ಸಂಚಾರಕ್ಕೆ ತೊಂದರೆಯಾಗಿತ್ತು. ಜಿಲ್ಲೆಯ ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ.

ಇನ್ನೂ ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ಸೋಮವಾರ ಸಂಜೆ 4:00 ಗಂಟೆಯ ನಂತರ ಭಾರಿ ಗುಡುಗು, ಸಿಡಿಲಬ್ಬರದೊಂದಿಗೆ ಧಾರಾಕಾರ ಮಳೆ ಸುರಿಯಿತು. ಬೆಳಗ್ಗೆಯಿಂದ ರಣ ಬಿಸಿಲಿನ ವಾತಾವರಣ ಕಂಡುಬಂದಿತು. ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣ ಉಂಟಾಗಿ ಬಿರುಗಾಳಿಯೊಂದಿಗೆ ಮಳೆ ಸುರಿಯಿತು‌. ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಳ್ಳ-ಕೊಳ್ಳಗಳಲ್ಲಿ ಭಾರಿ ಪ್ರಮಾಣದ ನೀರು ಹರಿಯಿತು. ಹಲವೆಡೆ ಭತ್ತದ ಗದ್ದೆಗಳು ಜಲಾವೃತಗೊಂಡ ಘಟನೆ ಸಹ ವರದಿಯಾಗಿದೆ.

Leave a Comment