ಹೊಸನಗರ

ಗ್ರಾಮಸ್ಥರ ಆರೋಗ್ಯಕ್ಕೆ ಸಿಕ್ತು ಬಿಗ್ ಬೂಸ್ಟ್‌: ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದ ಸೇವೆಗೆ ಸಜ್ಜಾದ ಹೈಟೆಕ್ ಆಂಬುಲೆನ್ಸ್‌!

ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹33 ಲಕ್ಷ ವೆಚ್ಚದ ಅತ್ಯಾಧುನಿಕ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ ಸಮರ್ಪಿಸಲಾಯಿತು.

Humcha Ambulance

ರಿಪ್ಪನ್‌ಪೇಟೆ: ಗ್ರಾಮೀಣ ಭಾಗದ ಜನರಿಗೆ ತುರ್ತು ಆರೋಗ್ಯ ಸೇವೆ ಒದಗಿಸುವ ಮಹತ್ವದ ಉದ್ದೇಶದಿಂದ, ಬೆಂಗಳೂರಿನ ‘ಪ್ರಗತಿ ಆಟೋಮೇಷನ್ ಪ್ರೈವೇಟ್ ಲಿಮಿಟೆಡ್’ ಹಾಗೂ ‘ಪ್ರಗತಿ ಕೇರ್ ಟ್ರಸ್ಟ್’ ವತಿಯಿಂದ ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹33 ಲಕ್ಷ ವೆಚ್ಚದ ಅತ್ಯಾಧುನಿಕ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ ಸಮರ್ಪಿಸಲಾಯಿತು. ಹೊಂಬುಜ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ವಾಹನವನ್ನು ಲೋಕಾರ್ಪಣೆಗೊಳಿಸಿದರು.

WhatsApp Group Join Now
Telegram Group Join Now
Instagram Group Join Now

ಆಶೀರ್ವಚನ ನೀಡಿದ ಶ್ರೀಗಳು, “ಹಳ್ಳಿಗಳಲ್ಲಿ ವಾಸಿಸುವ ಬಡ, ಕೂಲಿ ಕಾರ್ಮಿಕ ಹಾಗೂ ಮಧ್ಯಮ ವರ್ಗದ ಜನರಿಗೆ ತುರ್ತು ಚಿಕಿತ್ಸೆ ಸಿಗಬೇಕಾದರೆ ಸಾರಿಗೆ ಸಂಪರ್ಕ ಅತ್ಯಗತ್ಯ. ಕ್ಲಿಷ್ಟಕರ ಸಂದರ್ಭಗಳಲ್ಲಿ ರೋಗಿಗಳನ್ನು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳಿಗೆ ಸಕಾಲದಲ್ಲಿ ಸಾಗಿಸಲು ಈ ಆಂಬುಲೆನ್ಸ್‌ ಜೀವನಾಡಿಯಾಗಿ ಕೆಲಸ ಮಾಡಲಿದೆ” ಎಂದು ಶುಭ ಹಾರೈಸಿದರು.

ಸಂಸ್ಥೆಯ ನಿರ್ದೇಶಕ ಆನಂದ ಹರಿಹರ ಮಾತನಾಡಿ, “ಇದು ನಮ್ಮ ಸಂಸ್ಥೆಯ ವತಿಯಿಂದ ಕೈಗೊಂಡ 28ನೇ ಜನಪರ ಕಾರ್ಯಕ್ರಮ. ಈ ಆಂಬುಲೆನ್ಸ್‌ನಲ್ಲಿ ಜೀವ ರಕ್ಷಣೆಗೆ ಅಗತ್ಯವಿರುವ 11 ಬಗೆಯ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಸ್ಥಳೀಯರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು” ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ನಾಯ್ಕ್ ಮಾತನಾಡಿ, ಗ್ರಾಮೀಣ ಜನರ ಆರೋಗ್ಯ ಕಾಪಾಡುವಲ್ಲಿ ಸಕಾಲಿಕ ಆಂಬುಲೆನ್ಸ್‌ ಸೇವೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಸಾಮಾಜಿಕ ಕಳಕಳಿಯೊಂದಿಗೆ ಸುಸಜ್ಜಿತ ವಾಹನ ನೀಡಿದ ಸಂಸ್ಥೆಯ ಸೇವಾ ಮನೋಭಾವ ಶ್ಲಾಘನೀಯ ಎಂದರು.

ಪ್ರಗತಿ ಆಟೋಮೇಷನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅತುಲ್ ಎಸ್. ಬಾರಂಗಿ ಹಾಗೂ ಅವರ ಕುಟುಂಬಸ್ಥರು ಆಂಬುಲೆನ್ಸ್‌ ಅನ್ನು ಆಸ್ಪತ್ರೆಯ ಆಡಳಿತಕ್ಕೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ. ಗುಡದಪ್ಪ ಕಸಬಿ, ಡಾ. ಮೋಹನ್, ಡಾ. ವೈ.ಜೆ. ಶಶಿಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ಶಾಂತರಾಜ್, ಹೊಂಬುಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿತಿನ್ ಭಟ್, ಸಿಬ್ಬಂದಿ ವರ್ಗ, ಸಂಸ್ಥೆಯ ನಿರ್ದೇಶಕರಾದ ಶಾಂತಕುಮಾರ್, ಗುರುರಾಜ್, ಆಸ್ಪತ್ರೆಗೆ ಜಮೀನು ದಾನ ಮಾಡಿರುವ ಸುಮಿತ್ರಮ್ಮ, ಹುಂಚ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಸದಸ್ಯರಾದ ದೇವೇಂದ್ರಪ್ಪ, ಯಶಸ್ವತಿ ವೃಷಭರಾಜ್ ಜೈನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!