ರಿಪ್ಪನ್‌ಪೇಟೆ ; ಮಕ್ಕಳ ಮನಸ್ಥಿತಿಯರಿತು ಶಿಕ್ಷಕ, ಪೋಷಕವರ್ಗ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳ ಉತ್ತಮ ಪ್ರಜೆಗಳಾಗಿ ರೂಪಿಸಲು ಸಾಧ್ಯ. ಸಾಕಷ್ಟು ಪ್ರತಿಭಾವಂತ ಮಕ್ಕಳು ಇದ್ದಾರೆ. ಅವರು ಅವಕಾಶ ವಂಚಿತರಾಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಶಿಕ್ಷಕರದಾಗಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿಂಡ್ಲೆಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸಾಕಷ್ಟು ಯೋಜನೆಗಳನ್ನು ಅನುಷ್ಟಾನಗೊಳಿಸುವ ಮೂಲಕ ಪ್ರೋತ್ಸಾಹಿಸುತ್ತಿದೆ. ಅಲ್ಲದೆ ಹಳ್ಳಿಯಲ್ಲಿನ ಶಾಲೆಗಳಲ್ಲಿ ಮಕ್ಕಳು ಕಲಿತು ಸರ್ಕಾರಿ ಉದ್ಯೋಗದಲ್ಲಿದ್ದಾರೆಂಬುದಕ್ಕೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಸರ್ಕಾರಿ ಉದ್ಯೋಗಕ್ಕೆ ಸೇರಿ ನಿವೃತ್ತಿ ಹೊಂದಿರುತ್ತಾರೆ. ಸಣ್ಣ ಗುಡಿಸಲಲ್ಲಿ ಆರಂಭವಾದ ಕಿರಿಯ ಪ್ರಾಥಮಿಕ ಶಾಲೆ ಕಾಲ ಬದಲಾದಂತೆ ಕೊಠಡಿಗಳನ್ನು ನಿರ್ಮಿಸಿ ಉತ್ತಮ ಶಿಕ್ಷಕರನ್ನು ವರ್ಗಾವಣೆ ಮಾಡಿ ಅವರ ಇಚ್ಚಾಶಕ್ತಿಯ ಫಲವೆ ಇಂದು ಶಾಲೆ ಸುವರ್ಣ ಮಹೋತ್ಸವವನ್ನು ಅಚರಿಸಿಕೊಳ್ಳುತ್ತಿರುವುದು ಸಂತೋಷವೆಂದ ಅವರು, ಖಾಸಗಿ ಶಾಲೆಗಳ ಭರಾಟೆಯಲ್ಲಿಯೂ ಹಳ್ಳಿಯ ಶಾಲೆಗಳು ಎಲ್ಲಿ ಮುಚ್ಚುತ್ತವೆ ಎಂಬ ಗೊಂದಲದಲ್ಲಿದ್ದರೂ ಕೂಡಾ ಶಿಕ್ಷಕರ ಮತ್ತು ಪೋಷಕರ ಗ್ರಾಮಸ್ಥರ ಪರಿಶ್ರಮದಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಸಹ ಹೆಚ್ಚು ಇದೆ ಎಂದು ಹೇಳಿ ಶಿಕ್ಷಕರ ಕಾರ್ಯವನ್ನು ಪ್ರಶಂಸಿಸಿದರು.

ಶಾಲೆಯ ಬಳಿ ಶೌಚಾಲಯ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ಮಾಡಲಾಗಿ ಶಾಸಕರು ತಕ್ಷಣ ಶೌಚಾಲಯ ನಿರ್ಮಿಸುವ ಭರವಸೆ ನೀಡಿ ಈಗಾಗಲೇ ಕರಿಗೆರಸು ಹುಂಚ ಸಂಪರ್ಕದ ಲಿಂಕ್ ರಸ್ತೆ ಕಾಮಗಾರಿಗೆ 7 ಕೋಟಿ ರೂ. ಅನುದಾನ ನೀಡಲಾಗಿದೆ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಹೆಚ್.ಕೆ.ದೇವರಾಜ್ ಆಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಪವಿತ್ರ ಸಂದೀಪ, ಕೋಡೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಜಯಪ್ರಕಾಶ ಶೆಟ್ಟರು, ಉಪಾಧ್ಯಕ್ಷ ಸುಧಾಕರ್, ಗ್ರಾಮ ಪಂಚಾಯಿತ್ ಸದಸ್ಯರಾದ ಶೇಖರಪ್ಪ, ಚಂದ್ರಕಲಾ, ಅನ್ನಪೂರ್ಣ ಮಹೇಶ, ಉಮೇಶ ಕಲಗೋಡು, ಸುನಂದ ನಾಗರಾಜ್, ಶ್ಯಾಮಲ ಶೇಖರಪ್ಪ, ಯೋಗೇಂದ್ರ, ರೇಖಾ ನಾಗರಾಜ್, ಮಂಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ, ಶಿಕ್ಷಣ ಸಂಯೋಜಕ ಕರಿಬಸಪ್ಪ, ಪಂಚಾಯಿತ್ ಪಿಡಿಒ ನಾಗರಾಜ್ ಎಸ್, ಸಿ.ಆರ್.ಪಿ. ಸಂತೋಷ, ಮುಖ್ಯಶಿಕ್ಷಕ ಲಿಂಗಪ್ಪ ಹೆಚ್.ಬಿ, ಸಹಶಿಕ್ಷಕ ಹನುಮಂತಪ್ಪ, ಸೇರಿದಂತೆ ಇನ್ನಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಗುರುವಂದನೆ, ಪ್ರತಿಭಾ ಪುರಸ್ಕಾರ, ಸುವರ್ಣ ಮಹೋತ್ಸವದ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದರನ್ನು ಮತ್ತು ಶಾಲೆಯ ಅಭಿವೃದ್ಧಿಗೆ ಶ್ರಮಿಸಿದವರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಲಿಂಗಪ್ಪ ಸ್ವಾಗತಿಸಿದರು. ಶಿಕ್ಷಕಿ ಅಂಬಿಕಾ ನಿರೂಪಿಸಿದರು. ಶಿಕ್ಷಕ ಸತ್ಯನಾರಾಯಣ ಎನ್.ಎಸ್. ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





