ಶಿವಮೊಗ್ಗ: ನಗರದ ವಾಹನ ದಟ್ಟಣೆ ತಗ್ಗಿಸುವ ಉದ್ದೇಶದ ಬಾಕಿ ಬೈಪಾಸ್ ಕಾಮಗಾರಿ ಹಾಗೂ ಹಾಲಿ ಹೆದ್ದಾರಿ ಸುಧಾರಣೆಗೆ ಕೇಂದ್ರ ಸರ್ಕಾರ ₹466.74 ಕೋಟಿ ಮಂಜೂರು ಮಾಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ–206ರ ಬಾಕಿ ಉಳಿದಿರುವ 4.74 ಕಿಲೋಮೀಟರ್ ಬೈಪಾಸ್ ರಸ್ತೆಯನ್ನು ನಾಲ್ಕು ಪಥವಾಗಿ ನಿರ್ಮಿಸುವುದು ಹಾಗೂ ಶಿವಮೊಗ್ಗ ನಗರ ವ್ಯಾಪ್ತಿಯ ಹಾಲಿ ಹೆದ್ದಾರಿಯ ಒಂದು ಬಾರಿಯ ಸುಧಾರಣಾ ಕಾಮಗಾರಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದೊಳಗಿನ ಸಂಚಾರಕ್ಕೆ ಹೇಗೆ ಅನುಕೂಲ?
ಬೈಪಾಸ್ ಕಾಮಗಾರಿ ಪೂರ್ಣಗೊಂಡರೆ ದೂರದ ಊರುಗಳಿಗೆ ತೆರಳುವ ವಾಹನಗಳು ಹಾಗೂ ಭಾರಿ ಸರಕು ಸಾಗಣೆ ವಾಹನಗಳು ನಗರದ ಹೊರಭಾಗದಿಂದ ಸಂಚರಿಸಲು ಅನುಕೂಲವಾಗಲಿದೆ. ಇದರಿಂದ ನಗರದೊಳಗಿನ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಿ, ಪ್ರಯಾಣದ ಸಮಯ ಉಳಿತಾಯವಾಗುವ ನಿರೀಕ್ಷೆಯಿದೆ. ರಸ್ತೆ ಸುರಕ್ಷತೆ ಸುಧಾರಣೆಯೂ ಈ ಕಾಮಗಾರಿಯ ಉದ್ದೇಶವಾಗಿದೆ ಎಂದು ಸಂಸದರು ವಿವರಿಸಿದ್ದಾರೆ.
ಶಿವಮೊಗ್ಗ ನಗರ ಹಾಗೂ ಮಲೆನಾಡು ಭಾಗದ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ನಿರಂತರವಾಗಿ ಪ್ರಯತ್ನ ನಡೆಸಲಾಗಿತ್ತು. ಇದೀಗ ಅನುದಾನ ಮಂಜೂರಾಗಿರುವುದು ಆ ಪ್ರಯತ್ನಕ್ಕೆ ದೊರೆತ ಫಲ ಎಂದು ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಮೋದಿ, ಗಡ್ಕರಿಗೆ ಕೃತಜ್ಞತೆ
ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಶಿವಮೊಗ್ಗ ಕ್ಷೇತ್ರದ ಜನರ ಪರವಾಗಿ ರಾಘವೇಂದ್ರ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

