ಸಪ್ತವರ್ಣಗಳ ವಸ್ತ್ರಾಲಂಕಾರದಲ್ಲಿ ಕಂಗೊಳಿಸಿದ ಹೊಂಬುಜ ಪದ್ಮಾವತಿ ದೇವಿ | ಸುಕೃತ ಫಲ ಧರ್ಮ ಮೌಲ್ಯಾಧಾರಿತವಾದುದು ; ಶ್ರೀಗಳು

Written by malnadtimes.com

Published on:

RIPPONPETE ; ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಲೋಕವಂದ್ಯ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಆಶ್ವಯುಜ ಶುಕ್ಲ ಪಂಚಮಿಯಂದು ಶರನ್ನವರಾತ್ರಿಯ ಧಾರ್ಮಿಕ ವಿಧಿಗಳು ಪೂರ್ವಪರಂಪರಾನುಗತ ನೆರವೇರಿದವು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನ ಮಠದ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಇಂದು   ಪ್ರಾತಃ ಕಾಲದಲ್ಲಿ ಕುಮದ್ವತಿ ತೀರ್ಥದಿಂದ ಅಗ್ರೋದಕ ತಂದು ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ಜಿನಾಗಮೋಕ್ತ ವಿಧಿಯಂತೆ ಪೂಜೆ ಸಲ್ಲಿಸಿದರು.

ತ್ರಿಕೂಟ ಜಿನಾಲಯ, ಮಕ್ಕಳ ಬಸದಿ, ನಗರ ಜಿನಾಲಯಗಳಲ್ಲಿ ಪೂಜಾ ವಿಧಿಗಳು ಭಕ್ತರ ಪಾಲ್ಗೊಳ್ಳುವಿಕೆಯಿಂದ ನೆರವೇರಿದುವು. ಪಂಚಕೂಟ ಬಸದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿಯವರು ಉಪಸ್ಥಿತರಿದ್ದರು.

ಅಭೀಷ್ಠವರಪ್ರದಾಯಿನಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಸೀರೆಯನ್ನರ್ಪಿಸಿದ ಶ್ರೀಗಳವರು ಭಕ್ತವೃಂದದವರಿಗೆ ಇಷ್ಟಾರ್ಥ ಸಿದ್ಧಿಯಾಗಲಿ ಮತ್ತು ಭಕ್ತರು ಭಕ್ತಿಯಿಂದ ಸಮರ್ಪಿಸುವ ಸೀರೆ ಉಡಿ, ಶ್ರೀಫಲ, ಪುಷ್ಪಗಳು ಮಹಾಮಾತೆ ಸ್ವೀಕರಿಸುವಂತಾಗಲಿ ಎಂದು ತಮ್ಮ ಪ್ರವಚನದಲ್ಲಿ ನವರಾತ್ರಿಯ ಪ್ರತಿದಿನದ ಪೂಜೆಯಿಂದ ಭಕ್ತರಿಗೆ ಧರ್ಮಮೌಲ್ಯಾಧಾರಿತ ಸುಕೃತ ಫಲವನ್ನು ನೀಡಲಿ ಎಂದು ಹರಸಿ ಆಶೀರ್ವದಿಸಿದರು.

ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಪದ್ಮಾವತಿ ಮಹಿಳಾ ಮಂಡಲದ ಶ್ರಾವಿಕೆಯರು, ಊರ ಪರವೂರ ಭಕ್ತ ಸಮುದಾಯವದರು ತ್ರಿಕರಣ ಪೂರ್ವಕ ಭಕ್ತಿಯನ್ನರ್ಪಿಸಿದರು. ರಾತ್ರಿ ಅಷ್ಟಾವಧಾನವನ್ನು ವೀಕ್ಷಿಸಿದರು‌.

ಹೊಂಬುಜ ಶ್ರೀಮಠದ ಧಾರ್ಮಿಕ ಅಧೀನ ಕ್ಷೇತ್ರಗಳಾದ ಕುಂದಾದ್ರಿ, ವರಂಗ ಹಾಗೂ ಹಟ್ಟಿಯಂಗಡಿ ಕ್ಷೇತ್ರಗಳಲ್ಲಿ ಶರನ್ನವರಾತ್ರಿ ಪೂರ್ವ ಪದ್ಧತಿಯಂತೆ ನೆರವೇರಿವೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Leave a Comment