ಶಿವಮೊಗ್ಗ: ಜ್ಞಾನದ ಬೆಳಕಿನಲ್ಲಿ ಬದುಕನ್ನು ರೂಪಿಸಿಕೊಳ್ಳುವುದು, ಧರ್ಮದ ಹಾದಿಯಲ್ಲಿ ಜೀವನವನ್ನು ಪವಿತ್ರಗೊಳಿಸಿಕೊಳ್ಳುವುದು ಹಾಗೂ ಮೋಹವನ್ನು ತ್ಯಜಿಸಿ ಆತ್ಮೋನ್ನತಿಯೆಡೆಗೆ ಸಾಗುವುದು ಪಂಪ, ರನ್ನ ಮತ್ತು ರತ್ನಾಕರವರ್ಣಿಯವರಂತಹ ಮಹಾಕವಿಗಳ ಕೃತಿಗಳ ಮೂಲ ಆಶಯವಾಗಿದೆ ಎಂದು ಹೊಂಬುಜ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಹೊಂಬುಜ ಶ್ರೀ ಪದ್ಮಾವತಿ ಸಮುದಾಯ ಭವನದಲ್ಲಿ ನವೆಂಬರ್ 24ರಂದು ಶ್ರೀಕ್ಷೇತ್ರ ಹೊಂಬುಜ ಜೈನ ಮಠ (ಹುಂಚ) ಹಾಗೂ ಆಕಾಶವಾಣಿ ಭದ್ರಾವತಿ ಮತ್ತು ಶಿವಮೊಗ್ಗ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಜೈನ ಸಾಹಿತ್ಯಾಮೃತಧಾರೆ’ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರೀತಿ, ಕರುಣೆ, ಅಹಿಂಸೆ ಹಾಗೂ ವೈರಾಗ್ಯದ ತಳಹದಿಯ ಮೇಲೆ ನಿಂತ ಬದುಕೇ ನಿಜವಾದ ಅರ್ಥದಲ್ಲಿ ಸಾರ್ಥಕವೆನಿಸಿಕೊಳ್ಳುತ್ತದೆ ಎಂದ ಶ್ರೀಗಳು, ಹಳೆಗನ್ನಡ ಸಾಹಿತ್ಯವು ಕೇವಲ ಭಾಷೆಯ ಸೊಗಸಷ್ಟೇ ಅಲ್ಲದೆ, ಉದಾತ್ತ ಕಾವ್ಯಪರಂಪರೆ, ಜೀವನಮೌಲ್ಯ ಮತ್ತು ತಾತ್ವಿಕ ಚಿಂತನೆಗಳ ಮಹಾನಿಧಿಯಾಗಿದೆ ಎಂದು ಬಣ್ಣಿಸಿದರು. ಇಂತಹ ಶ್ರೀಮಂತ ಸಾಹಿತ್ಯ ಪರಂಪರೆಯ ಅರಿವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮನುಕುಲಕ್ಕೆ ದಾರಿದೀಪವಾದ ಜೈನ ಸಾಹಿತ್ಯ:
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಪದ್ಮಿನಿ ನಾಗರಾಜು, ಹತ್ತನೇ ಶತಮಾನದಲ್ಲಿ ಆದಿಕವಿ ಪಂಪನು ಚಂಪೂ ಶೈಲಿಯ ಮೂಲಕ ‘ನಿಚ್ಚಂ ಪೊಸತು’ (ನಿತ್ಯ ನೂತನ) ಎಂಬ ನವೀನ ಕಾವ್ಯಮಾರ್ಗವನ್ನು ಹಾಕಿಕೊಟ್ಟನು. ಮುಂದೆ ರನ್ನ, ಪೊನ್ನ, ಜನ್ನ ಹಾಗೂ ನಾಗಚಂದ್ರರಂತಹ ಕವಿಗಳು ಈ ಪರಂಪರೆಯನ್ನು ಶ್ರೀಮಂತಗೊಳಿಸಿದರು ಎಂದರು.
ಜೈನ ಸಾಹಿತ್ಯವು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೆ, ಸಕಲ ಮನುಕುಲಕ್ಕೂ ಸದಾ ದಾರಿದೀಪವಾಗಿದೆ ಎಂಬುದನ್ನು ಸಮಾಜಕ್ಕೆ ಪರಿಚಯಿಸುವ ಪುಟ್ಟ ಪ್ರಯತ್ನವೇ ಈ ‘ಜೈನ ಸಾಹಿತ್ಯಾಮೃತಧಾರೆ’ ಎಂದು ಹೇಳಿದರು.
ಆಕಾಶವಾಣಿಯಲ್ಲಿ ಪ್ರಸಾರ:
ಕಾರ್ಯಕ್ರಮದ ಸಂಚಾಲಕ ಡಾ. ಹಾ.ಮ. ನಾಗಾರ್ಜುನ ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ಇತಿಹಾಸದಲ್ಲಿ ಜೈನ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದರು. ಈ ಸರಣಿ ಕಾರ್ಯಕ್ರಮವು ನವೆಂಬರ್ 28ರಿಂದ ಪ್ರತಿ ಶನಿವಾರ ಬೆಳಿಗ್ಗೆ 7.15ರಿಂದ 7.30ರವರೆಗೆ ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಜಯರಾಜ್ ಬಿ. ಪಾಂಡಿ ವಹಿಸಿದ್ದರು. ಹೊಂಬುಜ ಜೈನ ಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್ ಮತ್ತು ಆಕಾಶವಾಣಿ ಕಾರ್ಯಕ್ರಮ ಸಂಚಾಲಕ ಮಹೇಶ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಜೈನಮಿಲನ್ ಸಮಾಜದ 200ಕ್ಕೂ ಅಧಿಕ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮಾಜದ ಮುಖಂಡರಾದ ಪ್ರಭಾಕರ ಜೈನ್ ಹಾಗೂ ರತ್ನಾಕರ್ ಜೈನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
