ರಿಪ್ಪನ್ಪೇಟೆ : ಪಟ್ಟಣದ ಸಾಗರ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ ಸಮೀಪ ಇಂದು ಬೆಳಿಗ್ಗೆ ಸುಮಾರು 9:30ರ ವೇಳೆಗೆ ಏಕಾಏಕಿ ಹೆಜ್ಜೇನುಗಳ ದಾಳಿ ನಡೆದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಈ ಘಟನೆಯಿಂದ ಎಸ್ಬಿಐ ಬ್ಯಾಂಕ್ ಸಿಬ್ಬಂದಿಯೊಬ್ಬರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಾಲಾ ಮಕ್ಕಳ ಮೇಲೆ ಹೆಜ್ಜೇನುಗಳು ದಾಳಿ ನಡೆಸಿದ ಘಟನೆ ನಡೆದಿದೆ. ಇದೇ ವೇಳೆ ಎಸ್ಎಸ್ಎಲ್ಸಿ ಹಾಲ್ ಟಿಕೆಟ್ ಪಡೆಯಲು ಶಾಲೆಗೆ ತೆರಳುತ್ತಿದ್ದ ಕೆಲವು ವಿದ್ಯಾರ್ಥಿಗಳ ಮೇಲೂ ಹೆಜ್ಜೇನುಗಳು ದಾಳಿ ನಡೆಸಿದ ಕಾರಣ ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ಉಂಟಾಯಿತು.

ಸರ್ಕಾರಿ ಬಾಲಕರ ಪಾಠಶಾಲೆಯ ಓರ್ವ ವಿದ್ಯಾರ್ಥಿ, ಎಸ್ಎಸ್ಎಲ್ಸಿ ಪರೀಕ್ಷೆಯ ಹಾಲ್ ಟಿಕೆಟ್ ಪಡೆಯಲು ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಪದವಿ ಕಾಲೇಜು ವಿದ್ಯಾರ್ಥಿ ಮೇಲೆ ಹೆಜ್ಜೇನುಗಳು ದಾಳಿ ಮಾಡಿದೆ.
ಘಟನೆಯಲ್ಲಿ ಎಸ್ಬಿಐ ಬ್ಯಾಂಕ್ ಉದ್ಯೋಗಿ ತೌಸಿಫ್ ಅವರಿಗೆ ಸುಮಾರು 30ಕ್ಕೂ ಹೆಚ್ಚು ಹೆಜ್ಜೇನುಗಳು ಚುಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ವಿದ್ಯಾರ್ಥಿಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





