Hosanagara

ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಹೊಸನಗರದ ಬಿಜೆಪಿ ಮಂಡಲ ತೀವ್ರ ಖಂಡನೆ

ಹೊಸನಗರ : ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಕುರಿತು ಇತ್ತೀಚೆಗೆ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಕೀಳುಮಟ್ಟದ ಮಾತುಗಳನ್ನು ಹೇಳಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ತಾಲೂಕು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರರಾಗಿ ಇಂತಹ ಮಾತುಗಳನ್ನು ಆಡುವ ಮೊದಲು ನಾಲಿಗೆ ಮೇಲೆ ಹಿಡಿತವಿರಲಿ. ಬಂಗಾರಪ್ಪ ಅವರು ರಾಜ್ಯ ಕಂಡ ಅಪರೂಪದ ರಾಜಕಾರಣಿ, ದೀನ ದಲಿತರ ಪರವಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದವರು. ಅವರ ಮಗನಾಗಿ ಮಧು ಬಂಗಾರಪ್ಪ ಅವರು ಕೀಳುಮಟ್ಟದ ಪದಗಳನ್ನು ಬಳಸುವುದು ತರವಲ್ಲ ಎಂದರು.

ಶರಾವತಿ ಸಂತ್ರಸ್ಥರ ಸಮಸ್ಯೆ ಇಂದು ನಿನ್ನೆಯದಲ್ಲ. ಹಾಲಪ್ಪ ಅವರು ಶಾಸಕರಾಗಿದ್ದಾಗೆ ಉದ್ಬವಿಸಿದ ಸಮಸ್ಯೆಯಲ್ಲ. ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಗಣ್ಯರ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣುವ ಹಂತದಲ್ಲಿರುವಾಗ ಏಕಾಏಕಿ ಮಧು ಬಂಗಾರಪ್ಪ ನಾನೇ ಪರಿಹಾರ ಮಾಡಲು ಪ್ರಯತ್ನ ಪಟ್ಟಿದ್ದೇನೆ ಎಂದು ಹೇಳಿ ಪ್ರಚಾರ ಪಡೆಯಲು ಮುಂದಾಗಿದ್ದಾರೆ. ಕನಿಷ್ಟ ಒಮ್ಮೆಯಾದರೂ ಸಮಸ್ಯೆ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸಿದ ಉದಾಹರಣೆ ಇಲ್ಲ ಎಂದು ಕಿಡಿ ಕಾರಿದರು.

ಪಕ್ಷಾತೀತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಏಕಾಂಗಿಯಾಗಿ ಪತ್ರದ ಮೂಲಕ ಪರಿಹಾರ ಹುಡುಕಲು ಮುಂದಾಗಿರುವ ಸಚಿವರ ನಡೆ ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಗೌರವಯುತವಾಗಿ ನಡೆಯುವ ಬದಲು ಇಂತಹ ಹೇಳಿಕೆಗಳನ್ನು ನೀಡಿರುವುದು ಅವರ ಅಹಂಕಾರವನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ನೂತನವಾಗಿ ಎರಡನೇ ಬಾರಿಗೆ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಮತ್ತಿಮನೆ ಸುಬ್ರಹ್ಮಣ್ಯರವರನ್ನು ಕಾರ್ಯಕರ್ತರು ಅಭಿನಂದಿಸಿದರು.

ಗೋಷ್ಠಿಯಲ್ಲಿ ಪಕ್ಷ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎನ್.ಸುಧಾಕರ, ಪ್ರಮುಖರಾದ ನರ್ತಿಗೆ ಸುರೇಶ, ಮೋಹನ ಮಂಡಾನಿ, ಚಾಲುಕ್ಯ ಬಸವರಾಜ್, ಗಣೇಶ್ ಹಿರೇಮಣತಿ, ಕಾರಣಗಿರಿ ಕಾವ್ಯ ಮತ್ತಿತರರು ಇದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>