ಹೊಸನಗರ

ಹೊಸನಗರ ಪ.ಪಂ. ಸಾಮಾನ್ಯ ಸಭೆ | ನೂತನ ಕಚೇರಿ ಕಟ್ಟಡವನ್ನು ಹಳೇ ಗೀತಾ ಟಾಕೀಸ್ ಸ್ಥಳದಲ್ಲೇ ನಿರ್ಮಿಸಿ ; ಸದಸ್ಯ ಅಶ್ವಿನಿಕುಮಾರ್ ಆಗ್ರಹ

ಹೊಸನಗರ ; ಸಭಾ ನಡಾವಳಿಗಳನ್ನು ಸಭೆ ಮುಗಿದ ಬಳಿಕ ಸ್ಥಳದಲ್ಲೇ ದಾಖಲು ಮಾಡಿ ಸದಸ್ಯರಿಂದ ಕಡತಕ್ಕೆ ಸಹಿ ಪಡೆಯಬೇಕು. ಇದರಿಂದ ಹೆಚ್ಚುವರಿ ನಡಾವಳಿಗಳ ಅಕ್ರಮ ದಾಖಲು ತಡೆಯಲು ಸಹಕಾರಿ ಆಗಲಿದೆ ಎಂದು ಸದಸ್ಯ ಕೆ.ಕೆ. ಅಶ್ವಿನಿಕುಮಾರ್ ಸಭೆಯ ಗಮನ ಸೆಳೆದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಅಧ್ಯಕ್ಷ ನಾಗಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಆದೇಶ, ಸುತ್ತೋಲೆಗಳನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತರಬೇಕು ಎಂದು ಎಚ್ಚರಿಸಿದ ಅವರು, ಸರ್ಕಾರಿ ಸುತ್ತೋಲೆಗಳನ್ನು ಚುನಾಯಿತಿ ಸದಸ್ಯರಿಂದ ಮರೆಮಾಚುವ ಸಿಬ್ಬಂದಿಗಳ ಆಟಾಟೋಪಕ್ಕೆ ಬ್ರೇಕ್ ಹಾಕುವಂತೆ ಸಭೆಯನ್ನು ಆಗ್ರಹಿಸಿದರು.

ಪಟ್ಟಣ ಪಂಚಾಯತಿ ನೂತನ ಕಚೇರಿ ಕಟ್ಟಡವನ್ನು ಹಳೇ ಗೀತಾ ಚಿತ್ರಮಂದಿರದ ಸ್ಥಳದಲ್ಲೇ ನಿರ್ಮಿಸಬೇಕು ಎಂದು ಪಟ್ಟು ಹಿಡಿದು, ಹಾಲಿ ಕಟ್ಟಡ ಪಾರಂಪರೀಕ ಕಟ್ಟಡದಂತೆ ಉಳಿಸಿಕೊಂಡು, ಬಸ್ ನಿಲ್ದಾಣಕ್ಕೆ ಹತ್ತಿರವಾದ ಹಿನ್ನಲೆಯಲ್ಲಿ ಅಗತ್ಯ ಬಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯ್ತಿಗೆ ಹೆಚ್ಚು ಆದಾಯ ತರುವ ಸುಂದರ ವಾಣಿಜ್ಯ ಕಟ್ಟಡ ನಿರ್ಮಿಸುವಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದ ಹರಾಜು ಮಾಡಲಾದ 2, 11, 18 ಹಾಗು ಸಂಖ್ಯೆ 20 ಮಳಿಗೆಗಳನ್ನು ಟೆಂಡರ್‌ದಾರರು ಈವರೆಗೂ ಅಗ್ರಿಮೆಂಟ್‌ಗೆ ಮುಂದಾಗದ ಹಿನ್ನಲೆಯಲ್ಲಿ ಶೀಘ್ರವಾಗಿ ಮತ್ತೊಮ್ಮೆ ಆ ಮಳಿಗೆಗಳ ಮರು ಹರಾಜಿಗೆ ಸಭೆ ತೀರ್ಮಾನಿಸಿತು. ಈ ಕುರಿತು ಬಿಡ್‌ದಾರರಿಗೆ ಪಂಚಾಯತಿ ನೋಟಿಸ್ ನೀಡಿದ್ದು, ಸೂಕ್ತ ಉತ್ತರ ಬಾರದ ಹಿನ್ನಲೆಯಲ್ಲಿ ವಕೀಲರ ಮೂಲಕ ನೋಟಿಸ್ ನೀಡಲು ಹಾಗು ಮರು ಟೆಂಡರ್ ವೇಳೆ ಸರ್ಕಾರ ನಿಗದಿಪಡಿಸಿದ ಟೆಂಡರಿನ ಮೂರು ಪಟ್ಟು ಹೆಚ್ಚುವರಿ ಇಎಂಡಿ ಸಂಗ್ರಹಿಸುವಂತೆ ಹಾಗೂ ಪ್ರಸಕ್ತ ಇಎಂಡಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸಭೆ ನಿರ್ಣಯಿಸಿತು.

ವಿದ್ಯುತ್ ಕಣ್ಣುಮುಚ್ಚಾಲೆ ಕಾರಣ ಕುಡಿಯುವ ನೀರು ಸರಬರಾಜಿನಲ್ಲಿ ಭಾರೀ ವ್ಯತ್ಯಯ ಕಂಡುಬಂದಿದೆ. ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನಪ್ರತಿನಿಧಿಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಈ ಕುರಿತು ಮೆಸ್ಕಾಂ ಸಿಬ್ಬಂದಿಗಳಿಂದ ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಬೇಸಿಗೆ, ಮಾರಿಜಾತ್ರೆ ಸಮೀಪದಲ್ಲಿರುವ ಹಿನ್ನಲೆಯಲ್ಲಿ ಶೀಘ್ರ ಬದಲಿ ವ್ಯವಸ್ಥೆಗೆ ಮುಂದಾಗುವಂತೆ ಮೆಸ್ಕಾಂ ಇಲಾಖೆ ಗಮನ ಸೆಳೆಯುವಂತೆ ಸದಸ್ಯೆ ಕೃಷ್ಣವೇಣಿ ಸಭೆಯನ್ನು ಆಗ್ರಹಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಆರೋಗ್ಯ ನಿರೀಕ್ಷಕಿ ಶೃತಿ ಪಂಚಾಯತಿ ವ್ಯಾಪ್ತಿಯ ಕಳೆದ ನಾಲ್ಕು ತಿಂಗಳ ಜನನ/ಮರಣ ವರದಿ ದಾಖಲಿಸಿದರು. ಮಾವಿನಕೊಪ್ಪ ಸರ್ಕಾರಿ ಶಾಲೆಯ ಶಿಥಿಲಾವಸ್ಥೆಯ ಹಳೇ ಶೌಚಾಲಯ ಕಟ್ಟಡ ತೆರವಿಗೆ, ಮುಕ್ತಿ ವಾಹಿನಿ ವಾಹನ ದುರಸ್ತಿ, ಘನತ್ಯಾಜ್ಯ ಸರಬರಾಜು ವಾಹನಗಳ ರಿಪೇರಿ ಬಿಲ್ ಪಾವತಿಗೆ, ಪಂಚಾಯ್ತಿ ವ್ಯಾಪ್ತಿಯ ಕಾಮಗಾರಿಗಳ ಬಳಕೆಗೆ ಜೆಸಿಬಿ, ಹಿಟಾಜಿ ಯಂತ್ರಗಳ ಬಾಡಿಗೆ ನಿಗದಿ ಪಡಿಸಿ ಸಭೆ ಅನುಮೋದನೆ ನೀಡಿತು.

ಸಭೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಸುರೇಂದ್ರ ಕೊಟ್ಯಾನ್, ಗುರುರಾಜ್ ಬಜಾಜ್, ಶಹಿನಾ, ಸಿಂಇಯಾ ಶೆರಾವೋ, ಗುಲಾಬಿ, ಗಾಯತ್ರಿ, ನಾಮ ನಿರ್ದೇಶನ ಸದಸ್ಯರಾದ ಹೆಚ್.ಎಂ. ನಿತ್ಯಾನಂದ, ನೇತ್ರಾವತಿ ಭಟ್, ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ಸಿಬ್ಬಂದಿಗಳಾದ ಕಂದಾಯ ನಿರೀಕ್ಷಕ ಮಂಜುನಾಥ್, ಬಸವರಾಜ್, ಪರಶುರಾಮ್, ಆಸ್ಮಬಾನು, ಗಿರೀಶ್, ಉಮಾಶಂಕರ್, ನೇತ್ರಾವತಿ ರಾಜ್ ಮೊದಲಾದವರು ಇದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]