ಶಿವಮೊಗ್ಗ : ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ಸಾಗರ ತಾಲೂಕುಗಳು ಸೇರಿದಂತೆ ರಾಜ್ಯದ ಹೆಚ್ಚುವರಿ 9 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂದಿನ ಆರು ತಿಂಗಳ ಅವಧಿಗೆ ಜಾರಿಯಲ್ಲಿರುತ್ತದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗಿನ ಅವಧಿಯಲ್ಲಿ ನಡೆಸಿದ ಸಮಗ್ರ ಬರ ಮೌಲ್ಯಮಾಪನ ಹಾಗೂ ಬೆಳೆ ಹಾನಿಯ ಕುರಿತು ನಡೆಸಲಾದ ಕ್ಷೇತ್ರ ಪರಿಶೀಲನೆಯ (Ground Truthing) ವರದಿಯನ್ನು ಆಧರಿಸಿ ಕಂದಾಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಐದನೇ ಹಂತದ ಸಮೀಕ್ಷೆ:
ಐದನೇ ಹಂತದ ಬರ ಮೌಲ್ಯಮಾಪನದಲ್ಲಿ 9 ತಾಲೂಕುಗಳ 108 ಗ್ರಾಮಗಳಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಕ್ಷೇತ್ರ ಪರಿಶೀಲನೆ ನಡೆಸಲಾಗಿತ್ತು. ಇದರ ಆಧಾರದ ಮೇಲೆ ಹೊಸದಾಗಿ 9 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.
ಬರದ ತೀವ್ರತೆ:
ಹೊಸದಾಗಿ ಘೋಷಿಸಲಾದ ಈ 9 ತಾಲೂಕುಗಳ ಪೈಕಿ 1 ತಾಲೂಕನ್ನು ‘ತೀವ್ರ ಬರಪೀಡಿತ’ (Severely Affected) ಹಾಗೂ ಉಳಿದ 8 ತಾಲೂಕುಗಳನ್ನು ‘ಸಾಧಾರಣ ಬರಪೀಡಿತ’ (Moderately Affected) ಎಂದು ವರ್ಗೀಕರಿಸಲಾಗಿದೆ.
ಬರ ಪರಿಹಾರ ಕ್ರಮಗಳಿಗೆ ಸೂಚನೆ:
ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳಲ್ಲಿ ರಾಜ್ಯ ವಿಪತ್ತು ಸ್ಪಂದನಾ ನಿಧಿಯ (SDRF) ಮಾರ್ಗಸೂಚಿಗಳ ಅನ್ವಯ ತಕ್ಷಣವೇ ಅಗತ್ಯ ಬರ ಪರಿಹಾರ ಮತ್ತು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಬೆಳೆ ಹಾನಿ ಜಂಟಿ ಸಮೀಕ್ಷೆ:
ಕೃಷಿ ಇಲಾಖೆ ಆಯುಕ್ತರು, ತೋಟಗಾರಿಕೆ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳು ಬರಪೀಡಿತ ತಾಲೂಕುಗಳಲ್ಲಿ ಬೆಳೆ ಹಾನಿಯ ಕುರಿತು ತಕ್ಷಣವೇ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಮನೋಜ್ ಕುಮಾರ್ ಮೀನಾ ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಮೊದಲ ನಾಲ್ಕು ಹಂತಗಳಲ್ಲಿ ಕ್ರಮವಾಗಿ 101, 23, 53 ಹಾಗೂ 40 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಐದನೇ ಹಂತದಲ್ಲಿ ಹೊಸನಗರ ಮತ್ತು ಸಾಗರ ಒಳಗೊಂಡಂತೆ ಮತ್ತೆ 9 ತಾಲೂಕುಗಳನ್ನು ಈ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ದೊರೆಯುವ ನಿರೀಕ್ಷೆಯಿದೆ.
“ಹೊಸನಗರ ತಾಲೂಕಿನಲ್ಲಿ ಈ ಬಾರಿ ಮಳೆಯ ಕೊರತೆಯಿಂದಾಗಿ ತೀವ್ರ ಬರ ಆವರಿಸಿದ್ದು, ರೈತರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿತ್ತು. ತಾಲೂಕಿನ ಬರ ಪರಿಸ್ಥಿತಿಯ ಗಂಭೀರತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ಅಧಿಕೃತ ಆದೇಶ ಹೊರಬೀಳುವಲ್ಲಿ ಇಬ್ಬರೂ ನಾಯಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಗೆ ತಾಲೂಕಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.”
– ಹೆಚ್.ಬಿ. ಚಿದಂಬರ, ಅಧ್ಯಕ್ಷರು, ಹೊಸನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

