ಶಿವಮೊಗ್ಗ: ಮೋಟಾರ್ ಹಾಗೂ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಬರೋಬ್ಬರಿ 4 ಲಕ್ಷದ 23 ಸಾವಿರ ರೂಪಾಯಿ ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಅಶೋಕ ನಗರದ ನಿವಾಸಿ ಮಹಮದ್ ಅಫ್ಜಲ್ ಅಲಿಯಾಸ್ ಲಂಗ್ಡ (19) ಹಾಗೂ ಮಿಳ್ಳಘಟ್ಟದ ಮನ್ಸೂರ್ ಅಹಮ್ಮದ್ ಅಲಿಯಾಸ್ ಬಬ್ಲು (27) ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ:
ಇತ್ತೀಚೆಗೆ ಹರಕೆರೆ ಗ್ರಾಮದ ಕಾನೆಹಳ್ಳದ ಪಕ್ಕದಲ್ಲಿ ಪಂಪ್‌ಸೆಟ್ ಮೋಟಾರ್ ಕಳ್ಳತನ ನಡೆದಿತ್ತು. ಈ ಪ್ರಕರಣದ ಬೆನ್ನತ್ತಿದ್ದ ತುಂಗಾನಗರ ಪೊಲೀಸರು ತನಿಖೆ ತೀವ್ರಗೊಳಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ವಶಪಡಿಸಿಕೊಂಡ ವಸ್ತುಗಳು ಹಾಗೂ ಪತ್ತೆಯಾದ ಪ್ರಕರಣಗಳು:
ಬಂಧಿತರಿಂದ ಒಟ್ಟು 4 ಲಕ್ಷ ರೂಪಾಯಿ ಮೌಲ್ಯದ ಡ್ಯೂಕ್, ಎಕ್ಸ್-ಪಲ್ಸ್, ಪ್ಯಾಷನ್ ಪ್ರೋ, ಡಿಸ್ಕವರ್ ಹಾಗೂ ಸ್ಪ್ಲೆಂಡರ್ ಬೈಕ್‌ಗಳು, 5 ಸಾವಿರ ರೂಪಾಯಿ ಮೌಲ್ಯದ ಪಂಪ್‌ಸೆಟ್ ಮೋಟಾರ್ ಮತ್ತು 18 ಸಾವಿರ ರೂಪಾಯಿ ನಗದು ಸೇರಿದಂತೆ ಒಟ್ಟು ₹4.23 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ 4 ಪ್ರಕರಣಗಳು ಹಾಗೂ ಅರಸೀಕೆರೆ ವ್ಯಾಪ್ತಿಯ 5 ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಪೊಲೀಸ್ ತಂಡಕ್ಕೆ ಅಭಿನಂದನೆ:
ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್‌ಪಿ) ನಿಖಿಲ್ ಬಿ. ಮಾರ್ಗದರ್ಶನದಲ್ಲಿ, ತುಂಗಾನಗರ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಟಿ. ಗುರುರಾಜ್ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಕಳ್ಳರ ಹೆಡೆಮುರಿ ಕಟ್ಟಿದ ತನಿಖಾ ತಂಡದ ಕಾರ್ಯವೈಖರಿಗೆ ಶಿವಮೊಗ್ಗ ಎಸ್‌ಪಿ ಅಭಿನಂದನೆ ಸಲ್ಲಿಸಿದ್ದಾರೆ.
